ADVERTISEMENT

ನಕಲಿ ಹಕ್ಕುಪತ್ರ: ಗ್ರಾ.ಪಂ. ಅಧ್ಯಕ್ಷರ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2021, 5:53 IST
Last Updated 14 ಅಕ್ಟೋಬರ್ 2021, 5:53 IST

ಹೊಸನಗರ:ಅರಣ್ಯ ಇಲಾಖೆ ಜಾಗವನ್ನು ಒತ್ತುವರಿ ಮಾಡಿ ನಕಲಿಹಕ್ಕುಪತ್ರ ಸೃಷ್ಟಿಸಿದ ಆರೋಪ ಸಂಬಂಧತಾಲ್ಲೂಕಿನ ತ್ರಿಣಿವೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್.ಎಲ್. ಚಂದ್ರಶೇಖರ್ ವಿರುದ್ಧ ಪ್ರಕರಣ ದಾಖಲಾಗಿದೆ.

ತ್ರಿಣಿವೆ ಗ್ರಾಮದ ಸರ್ವೆ ನಂ–83ರಲ್ಲಿನ ಅರಣ್ಯ ಇಲಾಖೆ ಜಾಗವನ್ನು ಒತ್ತುವರಿ ಮಾಡಿ ಅದರಲ್ಲಿ ನಿವೇಶನದ ಜಾಗಕ್ಕೆ ನಕಲಿ ಹಕ್ಕುಪತ್ರ ತಯಾರಿಸಿದ್ದಲ್ಲದೆ ಸರ್ಕಾರಕ್ಕೆ ವಂಚನೆ ಮಾಡಲು ಪ್ರಯತ್ನಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

2009-2010ನೇ ಸಾಲಿನಲ್ಲಿ ತ್ರಿಣಿವೆ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಅಂದಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅವರಿಂದ ಡಿಮಾಂಡ್ ರಿಜಿಸ್ಟರ್ ದಾಖಲಿಸಿ, ಅದಕ್ಕೆ ಅಡಮಾನ ಪತ್ರ ತಯಾರಿಸಿ ತಮ್ಮ ಪತ್ನಿ ಹೆಸರಿಗೆ ಇಂದಿರಾ ಅವಾಸ್ ಯೋಜನೆ ಅಡಿಯಲ್ಲಿ ಅನುದಾನ ಮಂಜೂರು ಮಾಡಿಸಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂದು ಎಫ್ಐಆರ್‌ನಲ್ಲಿ ತಿಳಿಸಲಾಗಿದೆ.

ADVERTISEMENT

‘ತಹಶೀಲ್ದಾರ್ ಕಚೇರಿಯಿಂದ ಚಂದ್ರಶೇಖರ್ ಅವರ ಹೆಸರಿಗೆ ಯಾವುದೇ ಹಕ್ಕುಪತ್ರ ನೀಡಿಲ್ಲ. ಆದರೂ ಚಂದ್ರಶೇಖರ್ ಅವರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅವರನ್ನು ಬಳಸಿಕೊಂಡು ನಕಲಿ ಹಕ್ಕುಪತ್ರ ಸೃಷ್ಟಿಸಿ ಅದರ ಮೂಲಕ ಲಾಭ ಪಡೆಯುವ ಉದ್ದೇಶದಿಂದ ಸರ್ಕಾರಕ್ಕೆ ವಂಚನೆ ಮಾಡಿದ್ದಾರೆ’ ಎಂದು ಗ್ರಾಮದ ಎನ್. ಪ್ರಕಾಶ್ ಅವರು ನೀಡಿದ ದೂರಿನ ಅನ್ವಯ ‍ಪ್ರಕರಣ ದಾಖಲಾಗಿದೆ.

ಚಂದ್ರಶೇಖರ್‌ ಅವರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿರುವ ಕಾರಣ ಸಾಕ್ಷಿ ನಾಶ ಮಾಡುವ ಸಾಧ್ಯತೆ ಇದ್ದು, ಪ್ರಕರಣ ಸಂಬಂಧ ಕೂಡಲೇ ಬಂಧನ ಮಾಡಬೇಕು ಎಂದು ಗ್ರಾಮದ ಎನ್. ಪ್ರಕಾಶ್, ನರೇಂದ್ರ ಕುಮಾರ್ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.