ADVERTISEMENT

‘ಪರಿಸರ ಕಾಪಾಡಿಕೊಂಡೆ ಜೋಗ ಅಭಿವೃದ್ಧಿ’

₹ 450 ಕೋಟಿ ಮೊತ್ತದ ಕಾಮಗಾರಿಗಳಿಗೆ ಇಂದು ಚಾಲನೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2021, 7:35 IST
Last Updated 24 ಜುಲೈ 2021, 7:35 IST
ಎಚ್.ಹಾಲಪ್ಪ ಹರತಾಳು
ಎಚ್.ಹಾಲಪ್ಪ ಹರತಾಳು   

ಸಾಗರ: ಪರಿಸರವನ್ನು ಕಾಪಾಡಿಕೊಂಡೇ ತಾಲ್ಲೂಕಿನ ಜೋಗ ಜಲಪಾತವನ್ನು ಸರ್ವಋತು ಜಲಪಾತವನ್ನಾಗಿ ಮಾರ್ಪಡಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎಚ್.ಹಾಲಪ್ಪ ಹರತಾಳು ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘₹ 165 ಕೋಟಿ ವೆಚ್ಚದಲ್ಲಿ ಜೋಗದ ಅಭಿವೃದ್ಧಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶನಿವಾರ ವರ್ಚುವಲ್ ಮೂಲಕ ಚಾಲನೆ ನೀಡಲಿದ್ದಾರೆ. ಅಭಿವೃದ್ಧಿ ಎಂದರೆ ಕೇವಲ ಕಾಂಕ್ರೀಟ್ ಕಟ್ಟಡಗಳನ್ನು ನಿರ್ಮಿಸುವುದಲ್ಲ. ಅದೇ ರೀತಿ ಅಣೆಕಟ್ಟು ನಿರ್ಮಿಸಿ ಮುಳುಗಡೆ ಮಾಡುವುದಲ್ಲ. ಪರಿಸರವನ್ನು ಕಾಪಾಡಿಕೊಂಡೇ ಪ್ರವಾಸೋದ್ಯಮದ ಅಭಿವೃದ್ಧಿ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ತಾಲ್ಲೂಕಿನ ಇರುವಕ್ಕಿ ಗ್ರಾಮದಲ್ಲಿ ₹ 155 ಕೋಟಿ ವೆಚ್ಚದಲ್ಲಿ ಕೃಷಿ ವಿಶ್ವವಿದ್ಯಾಲಯ ಸಜ್ಜುಗೊಂಡಿದೆ. ಇದರ ಪ್ರಾರಂಭಕ್ಕೂ ಮುಖ್ಯಮಂತ್ರಿ ಚಾಲನೆ ನೀಡಲಿದ್ದಾರೆ. ₹ 1.5 ಕೋಟಿ ವೆಚ್ಚದಲ್ಲಿ ಸರ್ಕಾರಿ ನೌಕರರ ಸಂಘದ ಸಮುದಾಯ ಭವನ ನಿರ್ಮಾಣ ಕಾಮಗಾರಿಗೂ ಶಂಕುಸ್ಥಾಪನೆ ನಡೆಯಲಿದೆ ಎಂದು ಅವರು ತಿಳಿಸಿದರು.

ADVERTISEMENT

ಶಿವಮೊಗ್ಗ ರಸ್ತೆಯ ತ್ಯಾಗರ್ತಿ ವೃತ್ತದಿಂದ ಜೋಗ ರಸ್ತೆಯ ಎಲ್‌ಬಿ ಕಾಲೇಜಿನವರೆಗೆ ಬಿಎಚ್ ರಸ್ತೆಯ ವಿಸ್ತರಣೆ ಕಾರ್ಯ ₹ 77.19 ಕೋಟಿ ವೆಚ್ಚದಲ್ಲಿ ನಡೆಯಲಿದೆ. ಅದೇ ರೀತಿ ಮಾರ್ಕೆಟ್ ರಸ್ತೆ ವಿಸ್ತರಣೆ ಕಾರ್ಯ
₹ 60 ಕೋಟಿ ವೆಚ್ಚದಲ್ಲಿ ಆಗಲಿದೆ. ಈ ಎಲ್ಲ ಕಾಮಗಾರಿಗಳಿಗೆ ಶನಿವಾರದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಚಾಲನೆ ನೀಡಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ತಾಲ್ಲೂಕು ಅಧ್ಯಕ್ಷ ಲೋಕನಾಥ್ ಬಿಳಿಸಿರಿ, ನಗರ ಘಟಕದ ಅಧ್ಯಕ್ಷ ಕೆ.ಆರ್.ಗಣೇಶ್ ಪ್ರಸಾದ್, ನಗರಸಭೆ ಅಧ್ಯಕ್ಷೆ
ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ.ಮಹೇಶ್, ಸದಸ್ಯರಾದ ಬಿ.ಎಚ್.ಲಿಂಗರಾಜು, ಪ್ರೇಮಾ ಕಿರಣ್ ಸಿಂಗ್, ಸಂತೋಷ್ ಆರ್.ಶೇಟ್, ಶ್ರೀರಾಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.