ಸೊರಬ: ತಾಲ್ಲೂಕಿನ ಮಲೆನಾಡು ಭಾಗದಲ್ಲಿ ಮಳೆಗೆ ತುಂಬಿ ಹರಿಯುವ ನದಿ– ಹಳ್ಳಗಳಲ್ಲಿ ಏಡಿ ಹಿಡಿಯಲು ಯುವಕರ ಗುಂಪು ಸಿದ್ಧವಾಗಿದೆ. ಕೂಣಿ ಹಾಕಿ ಏಡಿ ಹಿಡಿದು ಬಾಡೂಟ ಸವಿಯುವುದೇ ಒಂದು ವಿಶೇಷ ಎಂಬುದು ಏಡಿ ಹಿಡಿಯವ ಯುವಕರ ಮನದ ಮಾತು.
ತಾಲ್ಲೂಕಿನಲ್ಲಿ ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಕೆರೆ, ಹಳ್ಳ, ನದಿಗಳು ಕಳೆಗಟ್ಟಿವೆ. ಇದರ ಜೊತೆ ಹಳ್ಳಿಗಾಡಿನ ಯುವಕರು ಮೀನು– ಏಡಿ ಹಿಡಿಯಲು ತಮ್ಮದೇ ಆದ ವೈಖರಿಯಲ್ಲಿ ಶುರು ಹಚ್ಚಿಕೊಂಡಿದ್ದಾರೆ. ಮೀನು ಹಿಡಿಯಲು ಗಾಳ, ಏಡಿ ಹಿಡಿಯಲು ಅದ್ದು ಕೂಣಿ ಬಳಸುವುದು ವಾಡಿಕೆ. ಇಡೀ ದಿನ ಕೆರೆ, ನದಿ, ಹೊಲ, ಗದ್ದೆ ಅಂಚಿನಲ್ಲಿ ಓಡಾಡಿ ಏಡಿ ಹಿಡಿದು ಮನೆಯಲ್ಲಿ ಸಾರು ಮಾಡಿ ಸವಿಯುವ ಖಯಾಲಿಗೆ ಬೀಳುತ್ತಿದ್ದಾರೆ. ನಿರಂತರವಾಗಿ ಸುರಿಯುವ ಮಳೆ ಆಗಾಗ್ಗೆ ಬಿಡುವ ನೀಡಿದರೆ ಸಾಕು ಮಣ್ಣಿನಲ್ಲಿ ಅಡಗಿರುವ ಏಡಿಗಳು ಹೊರ ಬರುತ್ತಿವೆ ಎಂದರ್ಥ.
ಮಳೆ ನಿಂತು ಬಿಸಿಲು ಚಿಗುರೊಡೆಯುತ್ತಿದ್ದಂತೆ ಬಿಲ ಹೊಕ್ಕ ಏಡಿಗಳು ಹಳ್ಳ, ನದಿ, ಗದ್ದೆ ಬಯಲಲ್ಲಿ ಓಡಾಡಲು ಆರಂಭಿಸುತ್ತವೆ. ಕೃಷಿ ಕೆಲಸಕ್ಕೆ ಹೋದವರು ಅವುಗಳನ್ನು ಹಿಡಿದು ಚೀಲದಲ್ಲಿ ತುಂಬಿಕೊಂಡು ಬರುತ್ತಾರೆ.
‘ತಾಲ್ಲೂಕಿನ ಭಾಗದಲ್ಲಿ ಕಾರೇಡಿ, ಬೆಳ್ಳೇಡಿ ಎಂಬ ಎರಡು ಜಾತಿ ಏಡಿಗಳು ಸಿಗುತ್ತವೆ. ಈ ಪೈಕಿ ಕಾರೇಡಿ ಬಹಳ ಸ್ವಾದಿಷ್ಟ. ಹೊಳೆ– ಹಳ್ಳಗಳಲ್ಲಿ ಹೆಚ್ಚು ಕಾಣಸಿಗುತ್ತವೆ. ಇವುಗಳ ಬೇಟೆಗೆ ಸಂಜೆ 5 ರಿಂದ 6 ಗಂಟೆ ವೇಳೆ ಅದ್ದು ಕೂಣಿಯಲ್ಲಿ ಮೀನಿನ ಕಲ್ಮಶ ಹಾಕಿ ಹೊಳೆಯಲ್ಲಿ ಬಿಡುತ್ತೇವೆ. ನಸುಕಿನ ವೇಳೆಯಲ್ಲಿ ತೆರಳಿ ಕೂಣಿ ತರುವುದು ವಾಡಿಕೆ. ಈ ವೇಳೆ ಕೂಣಿಯಲ್ಲಿ 5 ರಿಂದ 20ಕ್ಕೂ ಹೆಚ್ಚು ಏಡಿಗಳು ಬೀಳುವ ಸಾಧ್ಯತೆ ಹೆಚ್ಚು. ಬಾಲ್ಯದಿಂದಲೇ ಏಡಿ ಹಿಡಿಯುವುದು ರೂಢಿ. ಏಡಿ ಖಾದ್ಯ ಎಂದರೆ ಬಹಳ ಇಷ್ಟ’ ಎನ್ನುತ್ತಾರೆ ಇಲ್ಲಿನ ಶಿವಕುಮಾರ್ ಗೆಂಡ್ಲ.
‘ಹಿಂದೆ ಬೆಳ್ಳೇಡಿ ಭತ್ತದ ಗದ್ದೆಯಲ್ಲಿ ಹೇರಳವಾಗಿ ಸಿಗುತ್ತಿದ್ದವು. ಮಳೆಗಾಲದಲ್ಲಿ ಮನೆಯಲ್ಲಿ ಏಡಿ ಸಾರು ಇದ್ದೇ ಇರುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಭತ್ತ ಬೆಳೆಗೆ ಕಳೆನಾಶಕ ಸಿಂಪಡಣೆ ಮಾಡುವ ಕಾರಣಕ್ಕಾಗಿ ಬೆಳ್ಳೇಡಿ ಸಂತತಿಯೇ ನಾಶವಾಗಿದೆ. ತಿನ್ನಲು ರುಚಿಕರವಾಗಿದ್ದ ಬೆಳ್ಳೇಡಿಗಳು ಈಗ ಕಾಣಿಸುವುದಿಲ್ಲ. ಕಾರೇಡಿ ಮಾತ್ರ ಈಗ ಹೊಳೆ–ಹಳ್ಳಗಳಲ್ಲಿ ಸಿಗುತ್ತವೆ. ಕಾರೇಡಿಗೆ ಹಿಡಿಯಲು ಕೂಣಿಯೇ ಆಧಾರ. ಕೂಣಿಯ ಒಳಗೆ ಹೋದ ಏಡಿಗಳು ಮತ್ತೆ ಪುನಃ ಹೊರಗೆ ಬರಲಾಗುವುದಿಲ್ಲ. ಮನೆಗ ತಂದು ಕೂಣಿಗೆ ಹಾಕಿದ ಮುಚ್ಚಳ ತೆಗೆದೇ ಏಡಿಗಳನ್ನು ಹಿಡಿಯಬೇಕು. ಆ ರೀತಿಯಲ್ಲಿ ವೃತ್ತಾಕಾರದಲ್ಲಿ ಕೂಣಿಯನ್ನು ಹೆಣೆಯುವುದು ಒಂದು ಕಲೆ’ ಎಂಬುದು ಪ್ರವೀಣ್ ಜಡ್ಡಳ್ಳಿ ಅಭಿಪ್ರಾಯ.
ಹೊಳೆ ಭಾಗದಲ್ಲಿ ಎಚ್ಚರವಿರಲಿ:
ತಾಲ್ಲೂಕಿನ ಬಹುಸಂಖ್ಯಾತ ದೀವರು ಜನಾಂಗಕ್ಕೆ ತಲತಲಾಂತರದಿಂದ ಏಡಿ ಹಿಡಿಯುವುದು ಎಂದರೆ ಅದೇನೋ ಹುಮ್ಮಸ್ಸು. ತುಂಬಿದ ಹೊಳೆಯಲ್ಲಿ ಅದ್ದು ಕೂಣಿ ಮೂಲಕ ಏಡಿ ಹಿಡಿಯುವದನ್ನು ಇಂದಿಗೂ ನೋಡಬಹುದು. ಆದರೆ ಹೊಳೆ ಅಂಚಿನಲ್ಲಿ ಜಾಗೃತರಾಗಿರಬೇಕು. ಕೆಸರು ಮಣ್ಣಿನಲ್ಲಿ ಹೊಳೆ ಅಂಚು ಜಾರುವುದರಿಂದ ಯುವಕರು ನಿಗಾ ವಹಿಸಬೇಕಿದೆ ಎನ್ನುತ್ತಾರೆ ಸಾಮಾಜಿಕ ಚಿಂತಕ ರಾಜಪ್ಪ ಮಾಸ್ತರ್.
ಬಂಗಾರಪ್ಪನವರಿಗೂ ಏಡಿ ನಂಟು
‘ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಬಂಗಾರಪ್ಪ ಅವರಿಗೆ ಏಡಿ ಖಾದ್ಯ ಎಂದರೆ ಬಲು ಪ್ರೀತಿ ಇತ್ತು. ತಾಲ್ಲೂಕಿನ ತಮ್ಮ ಒಡನಾಡಿಗಳ ಬಳಿ ಏಡಿ ತರಿಸಿ ಊಟ ಸವಿದ ಉದಾಹರಣೆಗಳಿವೆ. ಬೆಂಗಳೂರಿನಲ್ಲಿ ತಮ್ಮ ನಿವಾಸಕ್ಕೂ ಸೊರಬದಿಂದ ಏಡಿ ತರಿಸಿಕೊಳ್ಳುತ್ತಿದ್ದರು’ ಎಂಬುದು ಅವರ ಒಡನಾಡಿ ಸೋಮಪ್ಪ ಜಿ. ಬೆಳ್ಳಿ ಅವರ ಮಾತು.
ಏಡಿ ಮಾರಾಟದಿಂದ ಆದಾಯ
‘ಗ್ರಾಮೀಣ ಭಾಗದಲ್ಲಿ ಹಿಡಿಯುವ ಏಡಿಗಳಿಗೆ ಹೆಚ್ಚು ಬೇಡಿಕೆ ಇದೆ. ತಾಲ್ಲೂಕಿನ ಕೆಲವು ಗ್ರಾಮಗಳ ಹೊಳೆ–ಹಳ್ಳಗಳಲ್ಲಿ ಹಿಡಿದ ಏಡಿಗಳನ್ನು ಮಾರಾಟ ಮಾಡುವ ಮೂಲಕ ಜೀವನ ನಡೆಸುವ ಕುಟುಂಬಗಳಿವೆ. ಒಂದು ಏಡಿ ₹ 20 ರಿಂದ ₹ 40ಕ್ಕೆ ಮಾರಾಟವಾಗುತ್ತದೆ. ದೊಡ್ಡ ಗಾತ್ರದ ಏಡಿಗಳಿಗೆ ಹೆಚ್ಚು ಬೇಡಿಕೆಯಿದ್ದು ₹ 50 ಆದರೂ ಗ್ರಾಹಕರು ಉತ್ಸುಕರಾಗಿ ಖರೀದಿಸುತ್ತಾರೆ. ಔಷಧಿ ಗುಣಗಳನ್ನು ಹೊಂದಿರುವ ಏಡಿಗಳನ್ನು ಮಳೆಗಾಲದಲ್ಲಿ ಒಮ್ಮೆಯಾದರೂ ತಿನ್ನಬೇಕು’ ಎನ್ನುವುದು ಹಳ್ಳಿಗರ ಅಭಿಪ್ರಾಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.