ADVERTISEMENT

'ಎರಡು ವರ್ಷ; ಶಿಕ್ಷಣದಲ್ಲಿ ಹರುಷ' ಕಾರ್ಯಕ್ರಮಕ್ಕೆ ಸಿಎಂ ಚಾಲನೆ: ಮಧುಬಂಗಾರಪ್ಪ

​ಪ್ರಜಾವಾಣಿ ವಾರ್ತೆ
Published 24 ಮೇ 2025, 11:27 IST
Last Updated 24 ಮೇ 2025, 11:27 IST
ಮಧುಬಂಗಾರಪ್ಪ
ಮಧುಬಂಗಾರಪ್ಪ   

ಶಿವಮೊಗ್ಗ: 'ಶಾಲೆಗಳ ಪ್ರಾರಂಭೋತ್ಸವವನ್ನು ಹಬ್ಬದ ರೀತಿ ಮಾಡಬೇಕು. ಆದ್ದರಿಂದ, ಬೆಂಗಳೂರಿನಲ್ಲಿ ಮೇ 29 ರಂದು ‘ಎರಡು ವರ್ಷ; ಶಿಕ್ಷಣದಲ್ಲಿ ಹರುಷ’ ಎಂಬ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡುವರು’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧುಬಂಗಾರಪ್ಪ ಹೇಳಿದರು.

ರಾಜ್ಯದ ಎಲ್ಲ ಶಾಲೆಗಳಲ್ಲಿ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು, ಪಾಲಕರು, ನಾಗರಿಕರು ಸೇರಿ ಮಕ್ಕಳನ್ನು ಗಣ್ಯ ಅತಿಥಿಗಳನ್ನು ಸ್ವಾಗತಿಸುವ ರೀತಿಯಲ್ಲಿ ವಿಶೇಷವಾಗಿ ಬರಮಾಡಿಕೊಳ್ಳಬೇಕು. ಮೊದಲ ದಿನದಂದು ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದಲ್ಲಿ ಸಿಹಿ ನೀಡಬೇಕು ಎಂದು ಶನಿವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

'ಮಕ್ಕಳಿಗೆ ಮೂರು ಬಾರಿ ಪರೀಕ್ಷೆ ಬರೆಯಲು ಅವಕಾಶ ನೀಡಿದ್ದೇವೆ. ಉತ್ತಮ ಫಲಿತಾಂಶ ಬಂದಿದೆ. ವಾರದಲ್ಲಿ ಆರು ದಿನ ಮೊಟ್ಟೆ, ನೀಡಲು ಕ್ರಮ ತೆಗೆದುಕೊಂಡಿದ್ದೇವೆ. ನಾವು ಭರವಸೆ ನೀಡಿದಂತೆ ಈ ಶೈಕ್ಷಣಿಕ ವರ್ಷದ ಆರಂಭದಿಂದಲೇ 51,000 ಶಿಕ್ಷಕರನ್ನು ನೇಮಕ ಮಾಡುತ್ತಿದ್ದೇವೆ' ಎಂದರು.

ADVERTISEMENT

'ಮಾತಿನಂತೆ ಶಿಕ್ಷಕರಿಗೆ ₹2000 ಹೆಚ್ಚುವರಿಯಾಗಿ ನೀಡುತ್ತಿದ್ದೇವೆ. ಅದೇ ರೀತಿ, ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಎರಡು ವರ್ಷ ಪೂರ್ಣಗೊಂಡಿದೆ. ಜೊತೆಗೆ ಶಿಕ್ಷಣ ಇಲಾಖೆಯಲ್ಲಿ ಅನೇಕ ಹೊಸ ಬದಲಾವಣೆಗಳನ್ನು ಜಾರಿಗೆ ತರಲಾಗಿದೆ. ಎಲ್ಲಾ ಸಂಗತಿಗಳನ್ನು ಒಳಗೊಂಡು ಈ ಕಾರ್ಯಕ್ರಮ ಆಯೋಜಿಸಲಾಗಿದೆ' ಎಂದರು.

ಪ್ರಿಯಾಂಕ್ ಖರ್ಗೆ ವಿರುದ್ಧ ಕಲಬುರಗಿ ಚಲೋ ಬಿಜೆಪಿ ಕಾರ್ಯಕ್ರಮಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರ ಕಾಲದಲ್ಲಿ ಗೂಂಡಾಯಿಸಂ ಎಷ್ಟಿತ್ತು? ಎಲ್ಲೆಲ್ಲಿ, ಯಾವ್ಯಾವ ನಾಯಕರು ಎಷ್ಟು ಗೂಂಡಾಗಿರಿ ಮಾಡಿದ್ದಾರೆ. ಅವರ ಕಾಲದಲ್ಲಿ ಏನಾಗಿತ್ತು. ಲಿಸ್ಟ್ ಕೊಡಲಾ?' ಎಂದರು.

ನಟಿ ತಮನ್ನಾ ಸಿನಿಮಾ ನೋಡುವುದನ್ನು ಬಿಡ್ತೀರಾ?

ಜಾಹೀರಾತು ಉದ್ದೇಶದಿಂದ ₹6.2 ಕೋಟಿ ನೀಡಿ, ಮೈಸೂರು ಸ್ಯಾಂಡಲ್ ಸೋಪಿಗೆ ನಟಿ ತಮನ್ನಾ ಅವರನ್ನು ರಾಯಭಾರಿಯನ್ನಾಗಿಸಿದ್ದಕ್ಕೆ ವ್ಯಾಪಕ ಆಕ್ರೋಶ ಉಂಟಾಗುತ್ತಿದೆಯಲ್ಲಾ ಎಂಬ ಪ್ರಶ್ನೆಗೆ, 'ನಮ್ಮ ಶಿವರಾಜ್ ಕುಮಾರ್ ಕೂಡಾ ತಮಿಳು ಚಿತ್ರದಲ್ಲಿ ನಟಿಸಿದ್ದಾರೆ. ತಮನ್ನಾ ಅವರ ಚಿತ್ರವನ್ನು ನೋಡುವುದನ್ನು ಬಿಡ್ತೀರಾ? ಮಾರುಕಟ್ಟೆಯ ವಾತಾವರಣ ನೋಡಿ ಜಾಹೀರಾತಿಗೆ ಮೀಸಲಾದ ಸಮಿತಿಯವರು ತಮ್ಮ ಪ್ರಾಡೆಕ್ಟ್ ಮಾರುಕಟ್ಟೆ ವಿಸ್ತರಿಸಲು ಅವರಿಗಿರುವ ಹಕ್ಕಿನಂತೆ ತೀರ್ಮಾನ ತೆಗೆದುಕೊಳ್ಳುತ್ತಾರೆ. ನಾವು ಉತ್ತರಿಸಲಾಗುವುದಿಲ್ಲ' ಎಂದರು.

ಮಂಕಿಪಾರ್ಕ್, ಆನೆ ಕಾರಿಡಾರ್ ಗೆ ಯೋಜನೆ

ಮಲೆನಾಡಿನಲ್ಲಿ ಆನೆ ಮತ್ತು ಮಂಗನ ಕಾಟಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಅವು ಪ್ರಾಣಿಗಳು, ನಾವು ಕೂಡಾ ಒಂದು ರೀತಿಯ ಪ್ರಾಣಿಗಳೇ ಆಗಿದ್ದು, ಅವರ ಜಾಗವನ್ನು ನಾವು ಆಕ್ರಮಿಸಿದ್ದೇವೆ. ಹೊಟ್ಟೆ ಹಸಿದಾಗ, ಅನಿವಾರ್ಯವಾಗಿ ಅವು ನುಗ್ಗಿ ಹಾಳು ಮಾಡುತ್ತವೆ. ಆದರೂ ಮಂಗಗಳಿಗೆ ಮಂಕಿಪಾರ್ಕ್, ಆನೆಗಳಿಗೆ ಕಾರಿಡಾರ್ ನಿರ್ಮಾಣ ಮಾಡುವ ಯೋಜನೆ ಇದೆ. ಈ ಬಗ್ಗೆ ವಿಧಾನಸೌಧದಲ್ಲೂ ಚರ್ಚೆಯಾಗಿದೆ. ಮುಂದಿನ ದಿನಗಳಲ್ಲಿ ನಾನು ಮತ್ತೊಮ್ಮೆ ಗಮನ ಸೆಳೆಯುತ್ತೇನೆ' ಎಂದರು.

ಪ್ರಮುಖರಾದ ಆರ್. ಪ್ರಸನ್ನಕುಮಾರ್, ಜಿ.ಡಿ. ಮಂಜುನಾಥ್, ವಿಜಯಕುಮಾರ್, ಬಲ್ಕೀಸ್ ಬಾನು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.