ADVERTISEMENT

ಮೊಟ್ಟೆಗೆ ಹೆಚ್ಚುವರಿ ಮೊತ್ತ: ಶಿಕ್ಷಕರ ಜೇಬಿಗೆ ಹೊರೆ

ಅಪೌಷ್ಟಿಕತೆ ನಿವಾರಣೆ ಯೋಜನೆ; ಮೊಟ್ಟೆ ಧಾರಣೆಯಲ್ಲಿ ಏರಿಳಿತದಿಂದ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 4:54 IST
Last Updated 26 ಜುಲೈ 2025, 4:54 IST
ರಿಪ್ಪನ್‌ಪೇಟೆ ಸಮೀಪದ ಹೆಬ್ಬಳ್ಳಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಿಸಿರುವುದು
ರಿಪ್ಪನ್‌ಪೇಟೆ ಸಮೀಪದ ಹೆಬ್ಬಳ್ಳಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಿಸಿರುವುದು   

ರಿಪ್ಪನ್‌ಪೇಟೆ: ಮಧ್ಯಾಹ್ನದ ಬಿಸಿಯೂಟ ಮತ್ತು ಪೌಷ್ಟಿಕಾಂಶ ಯೋಜನೆಯಡಿಯಲ್ಲಿ ಶಾಲಾ ಶಿಕ್ಷಣ ಇಲಾಖೆ ಹಾಗೂ ಅಜೀಂ ಪ್ರೇಮ್‌ಜಿ ಫೌಂಡೇಷನ್ ಜಂಟಿಯಾಗಿ ನಿರ್ವಹಿಸುತ್ತಿರುವ ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆ ಕಾರ್ಯಕ್ರಮ ಶಿಕ್ಷಕರ ಜೇಬಿಗೆ ಹೊರೆಯಾಗಿ ಪರಿಣಮಿಸಿದೆ.

ಅಪೌಷ್ಟಿಕತೆ ನಿವಾರಣೆಗೆ ಈ ಯೋಜನೆ ವಿದ್ಯಾರ್ಥಿಗಳಿಗೆ ಅನುಕೂಲವೇ ಆದರೂ ಮಾರುಕಟ್ಟೆಯಲ್ಲಿ ಮೊಟ್ಟೆ ಧಾರಣೆಯ ಏರಿಳಿತದಿಂದ ಶಿಕ್ಷಕರು ತಮ್ಮದಲ್ಲದ ತಪ್ಪಿಗೆ ದಂಡ ತೆತ್ತಬೇಕಾಗಿದೆ. 

ಸರ್ಕಾರ ಪ್ರತಿ ಮೊಟ್ಟೆಗೆ ನಿಗದಿಪಡಿಸಿದ ಗರಿಷ್ಠ ದರ ₹ 6. ಇದರಲ್ಲಿ ಸಾಗಾಣಿಕೆಗೆ 20 ಪೈಸೆ, ಗ್ಯಾಸ್‌ಗೆ 50 ಪೈಸೆ, ಮೊಟ್ಟೆಯ ಸಿಪ್ಪೆ ತೆಗೆಯಲು 30 ಪೈಸೆ ಕೊಡಬೇಕಿದೆ. ಹೀಗಾಗಿ ಮೊಟ್ಟೆಯನ್ನು ₹ 5ಕ್ಕೆ ಒಂದರಂತೆ ಖರೀದಿಸಬೇಕಿದೆ. ಮಾರುಕಟ್ಟೆಯಲ್ಲಿ ಮೊಟ್ಟೆಗೆ ₹7.50 ರಿಂದ ₹8 ದರ ಇದೆ. ಹೀಗಾಗಿ ಶಿಕ್ಷಕರು ಪ್ರತಿನಿತ್ಯ ಮಗುವಿಗೆ ನೀಡುವ ಪೌಷ್ಟಿಕ ಆಹಾರಕ್ಕೆ ಕನಿಷ್ಠ ₹ 2.50 ರಿಂದ ₹ 3.50 ಜೇಬಿನಿಂದ ಭರಿಸಬೇಕಾಗಿದೆ.

ADVERTISEMENT

‘ವಿದ್ಯಾರ್ಥಿಗಳಿಗೆ ಹಂಚುವ ಮೊಟ್ಟೆಗೆ ನಿಗದಿಪಡಿಸುವ ಮೊತ್ತಕ್ಕೆ ಮೊಟ್ಟೆ ಸಿಗುವುದಿಲ್ಲ. ದರ ಹೆಚ್ಚೇ ಇರುವುದರಿಂದ ನಿತ್ಯವೂ ₹ 250ರಿಂದ ₹ 300 ಹೆಚ್ಚುವರಿಯಾಗಿ ತೆರಬೇಕಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಮುಖ್ಯ ಶಿಕ್ಷಕರೊಬ್ಬರು ‘ಪ್ರಜಾವಾಣಿ’ ಎದುರು ಅಳಲು ತೋಡಿಕೊಂಡರು.

ಹೊಸನಗರ ತಾಲ್ಲೂಕು ಒಂದರಲ್ಲೇ ಪ್ರತಿನಿತ್ಯ 10,200 ವಿದ್ಯಾರ್ಥಿಗಳು ಪೌಷ್ಟಿಕ ಆಹಾರದ ಪ್ರಯೋಜನ ಪಡೆಯುತ್ತಿದ್ದಾರೆ. 

‘ಅತಿಹೆಚ್ಚು ಕುಕ್ಕುಟೋದ್ಯಮಗಳಿರುವ ಕೋಲಾರದಂತಹ ಕೆಲ ಜಿಲ್ಲೆಗಳಲ್ಲಿ ಈ ದರ ಅನ್ವಯಿಸಬಹುದು. ಆದರೆ, ಇತರೆ ಜಿಲ್ಲೆಗಳಿಗೆ ದರ ಪರಿಷ್ಕರಣೆ ಮಾಡಲಿ’ ಎಂದು ರಿಪ್ಪನ್‌ಪೇಟೆಯ ಸಾಮಾಜಿಕ ಕಾರ್ಯಕರ್ತ ಶಿವರಾಜ ಡಿ. ಪ್ರಭು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.