ಹೊಳೆಹೊನ್ನೂರು: ಪಠ್ಯ ಮತ್ತು ಪಠ್ಯೇತರ ಚಟುವಟಿಕೆ ಜೀವನದಲ್ಲಿ ಉನ್ನತ ಸಾಧನೆಗೆ ಅಗತ್ಯವಾಗಿದ್ದು, ಬದ್ಧತೆ ಇದ್ದಲ್ಲಿ ಯಾವುದೇ ಕ್ಷೇತ್ರದಲ್ಲಿ ಉನ್ನತ ಸಾಧನೆ ಸಾಧ್ಯ ಎಂದು ಏಕಲವ್ಯ ಪ್ರಶಸ್ತಿ ವಿಜೇತ ಎಸ್.ಎಸ್. ಅಶೋಕ್‌ಕುಮಾರ್ ತಿಳಿಸಿದರು.
ಸಮೀಪದ ಜಾವಳ್ಳಿಯ ಜ್ಞಾನದೀಪ ಶಾಲೆಯ ಬೆಳ್ಳಿ ಹಬ್ಬದ ಅಂಗವಾಗಿ ಕ್ರೀಡಾ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಬಹುಮಾನ ವಿತರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ರಂಗಭೂಮಿ ನಟ ಎಸ್. ಸುರೇಶ್, ‘ಮಕ್ಕಳು ಸಾಂಸ್ಕೃತಿಕ ಚಟುವಟಿಕೆಯಲ್ಲಿ ಭಾಗವಹಿಸುವುದರಿಂದ ಆತ್ಮವಿಶ್ವಾಸ ಬೆಳೆಯುತ್ತದೆ. ಜೀವನದಲ್ಲಿ ಸವಾಲುಗಳನ್ನು ಎದುರಿಸಲು ಸಾಧ್ಯವಾಗುತ್ತದೆ. ಜೀವನಕ್ಕೆ ಸೌಂದರ್ಯ ಪ್ರಜ್ಞೆ ಹಾಗೂ ಹಾಸ್ಯ ಪ್ರಜ್ಞೆ ಅವಶ್ಯಕ. ಮಕ್ಕಳು ಉತ್ತಮ ಮಾತುಗಳನ್ನು ಮಾತ್ರ ಸ್ವೀಕರಿಸಬೇಕು. ಯಾವುದಕ್ಕೂ ಪ್ರತಿಕ್ರಿಯಿಸುವ ಮೊದಲು ಆ ಪ್ರದೇಶದ ಸಂಸ್ಕೃತಿಯನ್ನು ತಿಳಿದು ಪ್ರತಿಕ್ರಿಯಿಸಬೇಕು’ ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳು ಶಾಲೆಯಿಂದ ಆಯೋಜಿಸುವ ಎಲ್ಲಾ ಚಟುವಟಿಕೆಯಲ್ಲಿ ಭಾಗವಹಿಸಬೇಕು. ತಮ್ಮ ಬಗ್ಗೆ ಹೆಮ್ಮೆ ಇರಬೇಕು, ಹಿರಿಯ ವಿದ್ಯಾರ್ಥಿಗಳ ಸಾಧನೆಯನ್ನು ನೆನಪಲ್ಲಿಡಬೇಕು ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಶ್ರೀಕಾಂತ ಎಮ್ ಹೆಗ್ಡೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಜ್ಞಾನದೀಪ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಬಿ.ಎಲ್. ನೀಲಕಂಠಮೂರ್ತಿ, ಉಪಪ್ರಾಂಶುಪಾಲ ವಾಣಿ ಕೃಷ್ಣಪ್ರಸಾದ್ ಉಪಸ್ಥಿತರಿದ್ದರು. ಹಿರಿಯ ಉಪಪ್ರಾಂಶುಪಾಲ ರೆಜಿಜೋಸೆಫ್ ಸ್ವಾಗತಿಸಿದರು. ಶಿಕ್ಷಕಿ ಸುಬಿಯಾ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.