ADVERTISEMENT

ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಲು ಸಲಹೆ

ಚುನಾವಣೆಗೆ ನಿಯೋಜಿತ ಅಧಿಕಾರಿ, ಸಿಬ್ಬಂದಿಗಾಗಿ ತರಬೇತಿ ಕಾರ್ಯಾಗಾರದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2021, 5:01 IST
Last Updated 5 ಡಿಸೆಂಬರ್ 2021, 5:01 IST
ಶಿವಮೊಗ್ಗದ ಶನಿವಾರ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾ ಚುನಾವಣಾ ಶಾಖೆ ವಿಧಾನಪರಿಷತ್ ಚುನಾವಣೆಗೆ ನಿಯೋಜಿತ ಅಧಿಕಾರಿ, ಸಿಬ್ಬಂದಿಗಾಗಿ ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಾಗಾರದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್.ಹೊನ್ನಳ್ಳಿ ಮಾತನಾಡಿದರು.
ಶಿವಮೊಗ್ಗದ ಶನಿವಾರ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾ ಚುನಾವಣಾ ಶಾಖೆ ವಿಧಾನಪರಿಷತ್ ಚುನಾವಣೆಗೆ ನಿಯೋಜಿತ ಅಧಿಕಾರಿ, ಸಿಬ್ಬಂದಿಗಾಗಿ ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಾಗಾರದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್.ಹೊನ್ನಳ್ಳಿ ಮಾತನಾಡಿದರು.   

ಶಿವಮೊಗ್ಗ: ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದಡಿ. 10ರಂದು ನಡೆಯಲಿರುವ ವಿಧಾನ ಪರಿಷತ್‍ ಚುನಾವಣಾ ಕಾರ್ಯಕ್ಕೆ ನಿಯೋಜಿತ ಅಧಿಕಾರಿ, ಸಿಬ್ಬಂದಿ ಚುನಾವಣಾ ಆಯೋಗವು ಹೊರಡಿಸಿರುವ ಮಾರ್ಗಸೂಚಿಯಂತೆ ಕಾರ್ಯನಿರ್ವಹಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್. ಹೊನ್ನಳ್ಳಿ ಸೂಚಿಸಿದರು.

ಶನಿವಾರ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾ ಚುನಾವಣಾ ಶಾಖೆ ವಿಧಾನಪರಿಷತ್ ಚುನಾವಣೆಗೆ ನಿಯೋಜಿತ ಅಧಿಕಾರಿ, ಸಿಬ್ಬಂದಿಗಾಗಿ ಏರ್ಪಡಿಸಲಾಗಿದ್ದ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಚುನಾವಣಾ ಕರ್ತವ್ಯಕ್ಕೆ ನಿಯೋಜಿತ ಅಧಿಕಾರಿ ಸಿಬ್ಬಂದಿ ಈ ಹಿಂದಿನ ಅನೇಕ ಚುನಾವಣೆಗಳಲ್ಲಿ ಕಾರ್ಯನಿರ್ವಹಿಸಿದ್ದರೂ ಪ್ರತಿ ಬಾರಿಯ ಚುನಾವಣಾ ಕರ್ತವ್ಯ ಹೊಸ ಅರಿವು, ಅನುಭವ ಮೂಡಿಸುತ್ತದೆ. ಆದ್ದರಿಂದ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ವಿಷಯ ವಿನಿಮಯ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ADVERTISEMENT

ಕರ್ತವ್ಯದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಿ, ಅತ್ಯಂತ ಪಾರದರ್ಶಕವಾಗಿ ಚುನಾವಣಾ ಕರ್ತವ್ಯ ನಿರ್ವಹಿಸಬೇಕು. ಚುನಾವಣಾ ಆಯೋಗದ ಇತ್ತೀಚಿನ ಆಡಳಿತಾತ್ಮಕ ಸುಧಾರಣಾ ಕ್ರಮಗಳಿಂದಾಗಿ ಚುನಾವಣಾ ಕಾರ್ಯ ಸರಳ, ಸುಲಭವೂ ಆಗಿದೆ ಎಂದರು.

ವಿಧಾನ ಪರಿಷತ್‌ ಚುನಾವಣೆಯಲ್ಲಿ ಶಿವಮೊಗ್ಗ ಜಿಲ್ಲೆಯ 7 ತಾಲ್ಲೂಕುಗಳು ಹಾಗೂ ದಾವಣಗೆರೆ ಜಿಲ್ಲೆಯ 3 ತಾಲ್ಲೂಕುಗಳು ಸೇರಿದಂತೆ ಒಟ್ಟು 10 ತಾಲ್ಲೂಕುಗಳ ಗ್ರಾಮ ಪಂಚಾಯಿತಿ ಕೇಂದ್ರಗಳು ಹಾಗೂ ಪಟ್ಟಣ ಪ್ರದೇಶಗಳ ಸ್ಥಳೀಯ ಸಂಸ್ಥೆಗಳ ಆಡಳಿತ ಕೇಂದ್ರಗಳಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಿ, ಚುನಾವಣೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.

ಈ ಚುನಾವಣೆಯಲ್ಲಿ ಮತದಾನ ಮಾಡಲು ಅರ್ಹರಿರುವ ಪ್ರತಿನಿಧಿಗಳ ಸಂಖ್ಯೆ ಅತ್ಯಂತ ಕಡಿಮೆಯಾಗಿದ್ದರೂ, ಚುನಾವಣಾ ಅವಧಿ ಪೂರ್ಣಗೊಳ್ಳುವವರೆಗೆ ನಿಯೋಜಿತ ಸಿಬ್ಬಂದಿ ಮತಗಟ್ಟೆಯಲ್ಲಿದ್ದು ಕಾರ್ಯನಿರ್ವಹಿಸಬೇಕು. ಪ್ರತಿ ಮತಗಟ್ಟೆಯೂ ವಿಡಿಯೊಕಣ್ಗಾವಲಿಗೆ ಒಳಪಟ್ಟಿರುತ್ತವೆ ಎಂದು ತಿಳಿಸಿದರು.

ಅಂತಿಮವಾಗಿ 4 ಅಭ್ಯರ್ಥಿಗಳು ಕಣದಲ್ಲಿ ಉಳಿದಿರುವ ಈ ಚುನಾವಣೆಯಲ್ಲಿ ವಿಧ್ಯುನ್ಮಾನ ಮತ ಯಂತ್ರಗಳ ಬದಲಾಗಿ ಹಳೆಯ ಪದ್ಧತಿಯಂತೆ ಮತಗಟ್ಟೆಗಳನ್ನು ಬಳಸಲಾಗುತ್ತಿದೆ. ಅತ್ಯಂತ ಕಡಿಮೆ ಪ್ರಮಾಣದ ಮತದಾರರಿದ್ದು, ಅತ್ಯಲ್ಪ ಅವಧಿಯಲ್ಲಿ ಮತದಾನ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದರು. ಸಂಪನ್ಮೂಲ ವ್ಯಕ್ತಿ ಕೆ.ಎಚ್. ಶಿವಕುಮಾರ್, ಉಪವಿಭಾಗಾಧಿಕಾರಿ ಟಿ.ಬಿ. ಪ್ರಕಾಶ್ ಮತ್ತಿತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.