ADVERTISEMENT

ದಲಿತ ಮಹಿಳೆಗೆ ಮೋಸ ಮಾಡಿದ ಬಿಜೆಪಿಗೆ ತಕ್ಕ ಪಾಠ: ಕಿಮ್ಮನೆ ರತ್ನಾಕರ

​ಪ್ರಜಾವಾಣಿ ವಾರ್ತೆ
Published 4 ಜನವರಿ 2019, 16:40 IST
Last Updated 4 ಜನವರಿ 2019, 16:40 IST
ಹೊಸನಗರ ತಾಲ್ಲೂಕು ಕರಿಮನೆ ಗ್ರಾಮ ಪಂಚಾಯಿತಿಗೆ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪರವಾಗಿ ಮಾಜಿ ಸಚಿವ ಕಿಮ್ಮನೆ ರತ್ನಾಕರ ಹಾಗೂ ಬೆಂಬಲಿಗರು ವಿಜಯೋತ್ಸವ ಆಚರಿಸಿದರು
ಹೊಸನಗರ ತಾಲ್ಲೂಕು ಕರಿಮನೆ ಗ್ರಾಮ ಪಂಚಾಯಿತಿಗೆ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪರವಾಗಿ ಮಾಜಿ ಸಚಿವ ಕಿಮ್ಮನೆ ರತ್ನಾಕರ ಹಾಗೂ ಬೆಂಬಲಿಗರು ವಿಜಯೋತ್ಸವ ಆಚರಿಸಿದರು   

ಹೊಸನಗರ: ‘ತಾಲ್ಲೂಕಿನ ಕರಿಮನೆ ಗ್ರಾಮ ಪಂಚಾಯಿತಿಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ವಿಮಲಾ ಗುಂಡಪ್ಪ ಅವರ ಗೆಲುವು ನಾನು ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಕ್ಕೆ ಸಂದ ಜಯ’ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಹೇಳಿದರು.

‘ಗ್ರಾಮ ಪಂಚಾಯಿತಿಯ ಬಿಜೆಪಿ ಬೆಂಬಲಿತ ಅಧ್ಯಕ್ಷರು ಹಾಗೂ ಶಾಸಕ ಆರಗ ಜ್ಞಾನೇಂದ್ರ ಅವರು ದಲಿತ ಮಹಿಳೆ ವಿಮಲಾ ಗುಂಡಪ್ಪ ಅವರಿಂದ ಮೋಸದಿಂದ ಸಹಿ ಹಾಕಿಸಿಕೊಂಡು ರಾಜೀನಾಮೆ ಪಡೆದಿದ್ದರು ಎಂದು ವಿಜಯೋತ್ಸವದ ನಂತರ ಸುದ್ದಿಗಾರರ ಜತೆ ಮಾತನಾಡಿದರು.

ಖಾಲಿ ಹಾಳೆಗೆ ಸಹಿ ಹಾಕಿಸಿಕೊಂಡಿ ದ್ದಾರೆ. ತಮ್ಮ ರಾಜೀನಾಮೆ ಅಂಗೀಕಾರ ಮಾಡಬೇಡಿ ಎಂದು ಉಪವಿಭಾಗಾಧಿಕಾರಿ, ತಹಶೀಲ್ದಾರ್ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಗಳಿಗೆ ಮನವಿ ಮಾಡಿದ್ದರೂ ಶಾಸಕರ ಒತ್ತಾಯಕ್ಕೆ ಅಧಿಕಾರಿಗಳು ಮಣಿ ದಿದ್ದರು’ ಎಂದು ಅವರು ದೂರಿದರು.

ADVERTISEMENT

‘ದಲಿತ ಮಹಿಳೆಗೆ ಬಲತ್ಕಾರ ಮಾಡಿ ರಾಜೀನಾಮೆ ಪತ್ರಕ್ಕೆ ಸಹಿ ಹಾಕಿಸಿಕೊಂಡ ಪ್ರಕರಣ ಕುರಿತು ತನಿಖೆ ನಡೆಸಬೇಕು. ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಈ ಬಗ್ಗೆ ಜನ ಜಾಗೃತಿಗಾಗಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ’ ಎಚ್ಚರಿಸಿದರು.

‘ಒಟ್ಟು 6 ಸದಸ್ಯರು ಇರುವ ಕರಿಮನೆ ಗ್ರಾಮ ಪಂಚಾಯಿತಿಯಲ್ಲಿ 4 ಕಾಂಗ್ರೆಸ್ ಬೆಂಬಲಿತರು ಹಾಗೂ ಇಬ್ಬರು ಬಿಜೆಪಿ ಬೆಂಬಲಿತರು ಇದ್ದಾರೆ. ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯಿತಿ ಅಧ್ಯಕ್ಷ ನತರ್ಿಕೆ ಸುರೇಶ ಕೂಡಲೆ ರಾಜೀನಾಮೆ ನೀಡಬೇಕು. ಇಲ್ಲವಾದರೆ ಅವಿಶ್ವಾಸ ಗೊತ್ತುವಳಿಯ ನಿರ್ಣಯ ಮಂಡನೆ ಮಾಡಲಾಗುವುದು’ ಎಂದು ಹೇಳಿದರು.

ರಮೇಶ ಹಲಸಿನಹಳ್ಳಿ, ಸತೀಶ ಪಾಟೀಲ್, ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಕರುಣಾಕರ ಶೆಟ್ಟಿ, ಗೋಪಾಲ ಶೆಟ್ಟಿ, ತೋಟಪ್ಪ ಗೌಡ, ದೇವಪ್ಪ, ಗಿರೀಶ, ಪಾಂಡುರಂಗ, ಮಂಜುನಾಥ ಅವರೂ ಇದ್ದರು.

ವಿಮಲಾಗೆ ಗುಂಡಪ್ಪಗೆ ಜಯ
ಹೊಸನಗರ:
ತಾಲ್ಲೂಕಿನ ಕರಿಮನೆ ಗ್ರಾಮ ಪಂಚಾಯತಿಯ ಚಕ್ರಾನಗರ ಮಳಲಿ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ವಿಮಲಾ ಗುಂಡಪ್ಪ 81 ಮತಗಳ ಅಂತರದಿಂದ ಜಯಗಳಿಸಿದ್ದಾರೆ.

ಅನುಸೂಚಿತ ಜಾತಿಗೆ ಮೀಸಲಾದ ಸ್ಥಾನಕ್ಕೆ ವಿಮಲಾ ಗುಂಡಪ್ಪ ಅವರೇ ಈ ಹಿಂದೆ ರಾಜಿನಾಮೆ ನೀಡಿದ್ದರಿಂದ ಜ.2ರಂದು ಮತದಾನ ನಡೆದಿತ್ತು. ವಿಮಲಾ ಗುಂಡಪ್ಪ ಅವರಿಗೆ 269 ಮತ, ಬಿಜೆಪಿ ಬೆಂಬಲಿತ ಸುಮಿತ್ರಾ ರಾಘವೇಂದ್ರ ಇವರಿಗೆ 188 ಮತಗಳು ಲಭಿಸಿವೆ.

ಸಂಪೆಕಟ್ಟೆ ಗ್ರಾಮ ಪಂಚಾಯಿತಿಯ ಒಂದು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಯಶೋಧಾ ಪ್ರಮೋದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಚಂದ್ರಶೇಖರ ನಾಯ್ಕ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.