
ತೀರ್ಥಹಳ್ಳಿ: ‘ರಾಮೇಶ್ವರ ದೇವರ ಎಳ್ಳಮಾವಾಸ್ಯೆ ಜಾತ್ರೆ ಡಿ. 17ರಿಂದ 22ರವರೆಗೆ ಅದ್ದೂರಿಯಾಗಿ ನಡೆಯಲಿದೆ. ₹ 25ಲಕ್ಷ ವೆಚ್ಚದಲ್ಲಿ ಜಾತ್ರೆಯನ್ನು ಅದ್ದೂರಿಯಾಗಿ ನಡೆಸಲು ತೀರ್ಮಾನಿಸಲಾಗಿದೆ’ ಎಂದು ರಾಮೇಶ್ವರ ಎಳ್ಳಮಾವಾಸ್ಯೆ ಜಾತ್ರೆಯ ಗೌರವಾಧ್ಯಕ್ಷ, ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
‘17ರಂದು ಗಣಪತಿ ಪೂಜೆ, ಧ್ವಜಾರೋಹಣ, 18ರಂದು ಪುರೋತ್ಸವ, 19ರಂದು ಪರಶುರಾಮ ತೀರ್ಥಪೂಜೆ, ತೀರ್ಥಾಭಿಷೇಕ ಮತ್ತು ತೀರ್ಥಸ್ನಾನ ನಡೆಯಲಿದೆ. ಸಾಯಂಕಾಲ ಉದಯಕುಮಾರ್ ಶೆಟ್ಟಿ ತಂಡದಿಂದ ‘ನೃತ್ಯ ವೈಭವ’ ಹಮ್ಮಿಕೊಳ್ಳಲಾಗಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘20ರಂದು ಮನ್ಮಹಾರಥಾರೋಹಣ ಸಂಜೆ ಆರ್.ಜಿ. ಫಿಟ್ನೆಸ್ ಕ್ಲಬ್ ವತಿಯಿಂದ ದೇಹದಾರ್ಢ್ಯ ಸ್ಪರ್ಧೆ, 21ರ ಸಾಯಂಕಾಲ ನಿಶಾ ಸ್ಪೋರ್ಟ್ಸ್ ಕ್ಲಬ್‌ನಿಂದ ತುಂಗಾ ನದಿಯ ದಡದ ಮರಳು ಗುಡ್ಡೆಯ ಮೇಲೆ ವಾಲಿಬಾಲ್ ಪಂದ್ಯಾವಳಿ, ರಾಮಚಂದ್ರ ಹಡಪದ ತಂಡದಿಂದ ಸಂಗೀತ ಸಂಜೆ, ತುಂಗಾ ನದಿಯಲ್ಲಿ ಸಿಡಿಮದ್ದು ಪ್ರದರ್ಶನಗೊಂದಿಗೆ ತೆಪ್ಪೋತ್ಸವ ನಡೆಯಲಿದೆ’ ಎಂದು ವಿವರಿಸಿದರು.
‘ಒಟ್ಟು ₹ 8 ಲಕ್ಷ ವೆಚ್ಚದಲ್ಲಿ 2 ಗಂಟೆಗಳ ಕಾಲ ಸಿಡಿಮದ್ದು ಪ್ರದರ್ಶನ ನಡೆಯಲಿದೆ. ದೇಹದಾರ್ಢ್ಯ ಸ್ಪರ್ಧೆ, ವಾಲಿಬಾಲ್ ವಿಶೇಷವಾಗಿ ಪರಿಚಯಿಸಲಾಗುತ್ತಿದೆ. ಸುಮಾರು 50 ವರ್ಷಗಳಿಂದ ಸಿಡಿಮದ್ದು ಪ್ರದರ್ಶನದ ತೆಪ್ಪೋತ್ಸವನ್ನು ಆಚರಿಸಿಕೊಂಡು ಬರಲಾಗಿದೆ. ತೀರ್ಥಹಳ್ಳಿಯ ಎಳ್ಳಮಾವಾಸ್ಯೆ ಜಾತ್ರೆ ರಾಜ್ಯದಲ್ಲಿಯೇ ನೂರಾರು ವರ್ಷಗಳಿಂದ ಗಮನ ಸೆಳೆಯುತ್ತಿದೆ’ ಎಂದರು.
‘ಎಳ್ಳಮಾವಾಸ್ಯೆ ಜಾತ್ರೆಯ ಅಂಗವಾಗಿ ಸುಮಾರು 50 ಅಡಿ ಎತ್ತರದ ಪರಶುರಾಮನ ಮೂರ್ತಿಯನ್ನು ತುಂಗಾ ನದಿ ತೀರದಲ್ಲಿ ಪ್ರದರ್ಶನಕ್ಕೆ ಇಡಲಾಗುವುದು. ಜಾತ್ರೆಯಲ್ಲಿ ಯಾವುದೇ ಅಹಿತರಕರ ಘಟನೆ ನಡೆಯದಂತೆ ಎಚ್ಚರ ವಹಿಸಲಾಗಿದೆ‘ ಎಂದು ಸಂಚಾಲಕ ಸೊಪ್ಪುಗುಡ್ಡೆ ರಾಘವೇಂದ್ರ ತಿಳಿಸಿದರು.
‘ಈಗಾಗಲೇ ಪಟ್ಟಣ ಪಂಚಾಯಿತಿ ಸ್ವಚ್ಚತೆಯನ್ನು ಮಾಡಿಕೊಟ್ಟಿದೆ. ಸಮಿತಿ ಆರ್ಥಿಕ ಸಹಕಾರವನ್ನು ನೀಡುತ್ತಿದೆ. ಕಾಶಿ ದೀಕ್ಷಿತ್ ಅವರಿಂದ ತುಂಗಾರತಿ ನಡೆಯಲಿದೆ. ಜಾತ್ರೆಯ ಸಂದರ್ಭ 7 ದಿನಗಳ ಕಾಲ ಅನ್ನದಾಸೋಹ ನಡೆಯಲಿದೆ’ ಎಂದು ಸಹ ಸಂಚಾಲಕ ಟಿ.ಎಲ್.ಸುಂದರೇಶ್ ತಿಳಿಸಿದರು.
ಬಿ.ಆರ್.ರಾಘವೇಂದ್ರ ಶೆಟ್ಟಿ, ಪಾಂಡುರಂಗಪ್ಪ, ಗೀತಾ ರಮೇಶ್, ಜಯಪ್ರಕಾಶ್ ಶೆಟ್ಟಿ, ರತ್ನಾಕರ ಶೆಟ್ಟಿ, ಟಿ.ಜೆ.ಅನಿಲ್, ವರಲಕ್ಷ್ಮೀ, ಜ್ಯೋತಿ, ಸುರಭಿ ಕಿಶೋರ್, ನಯನ, ಅಮರನಾಥ ಶೆಟ್ಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.