ADVERTISEMENT

ಹಣ ಕಟ್ಟಲು ಫಲಾನುಭವಿಗಳಿಗೆ ಸಲಹೆ

ಆಶ್ರಯ ಮನೆ ನಿರ್ಮಾಣ ಕಾಮಗಾರಿಗೆ ಈಶ್ವರಪ್ಪ ಭೂಮಿ ಪೂಜೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2022, 3:54 IST
Last Updated 30 ಸೆಪ್ಟೆಂಬರ್ 2022, 3:54 IST
ಶಿವಮೊಗ್ಗ ಸಮೀಪದ ಗೋಪಶೆಟ್ಟಿಕೊಪ್ಪದಲ್ಲಿ ಗುರುವಾರ ರಾಜೀವ್ ಗಾಂಧಿ ವಸತಿ ಯೋಜನೆಯಡಿಯಲ್ಲಿ ಮನೆಗಳ ನಿರ್ಮಾಣದ ಕಾಮಗಾರಿಯ ಭೂಮಿ ಪೂಜೆಯನ್ನು ಶಾಸಕ ಕೆ.ಎಸ್‌.ಈಶ್ವರಪ್ಪ ನೆರವೇರಿಸಿದರು.
ಶಿವಮೊಗ್ಗ ಸಮೀಪದ ಗೋಪಶೆಟ್ಟಿಕೊಪ್ಪದಲ್ಲಿ ಗುರುವಾರ ರಾಜೀವ್ ಗಾಂಧಿ ವಸತಿ ಯೋಜನೆಯಡಿಯಲ್ಲಿ ಮನೆಗಳ ನಿರ್ಮಾಣದ ಕಾಮಗಾರಿಯ ಭೂಮಿ ಪೂಜೆಯನ್ನು ಶಾಸಕ ಕೆ.ಎಸ್‌.ಈಶ್ವರಪ್ಪ ನೆರವೇರಿಸಿದರು.   

ಶಿವಮೊಗ್ಗ: ‘ಆಶ್ರಯ ಯೋಜನೆಯ ಫಲಾನುಭವಿಗಳು ನಿಗದಿಪಡಿಸಿದ ಹಣ ಕಟ್ಟಬೇಕು. ಇಲ್ಲದಿದ್ದರೆ ಹಂಚಿಕೆಯಾದ ಮನೆ ರದ್ದು ಆಗುವ ಸಾಧ್ಯತೆ ಇದೆ. ಹೀಗಾಗಿ ಯೋಜನೆಯ ಅಶಯ ಈಡೇರುವುದಿಲ್ಲ’ ಎಂದು ಶಾಸಕಕೆ.ಎಸ್.ಈಶ್ವರಪ್ಪ ಹೇಳಿದರು.

ಇಲ್ಲಿನ ಗೋಪಶೆಟ್ಟಿಕೊಪ್ಪದಲ್ಲಿ ಗುರುವಾರ ರಾಜೀವ್ ಗಾಂಧಿ ವಸತಿ ಯೋಜನೆಯಡಿಯಲ್ಲಿ 1,836 ಮನೆಗಳ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಆಶ್ರಯ ಯೋಜನೆಯಡಿ ಮನೆಗಳ ನಿರ್ಮಾಣ ಕಾರ್ಯ ಸಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಇದಕ್ಕೆ ಹಣ ಕೊಡಬೇಕಾಗುತ್ತದೆ. ಆದ್ದರಿಂದ ಫಲಾನುಭವಿಗಳು ನಿಗದಿಪಡಿಸಿದ ಮೊದಲ ಕಂತು ₹ 80 ಸಾವಿರ ಹಣ ತಕ್ಷಣ ಕಟ್ಟಬೇಕು ಎಂದ ಅವರು, ನಗರದ ಎಲ್ಲಾ ಬಡವರಿಗೂ ಮನೆ ಹಂಚಿಕೆಯಾಗುತ್ತದೆ. ಆದರೆಕಾಲ ಕಾಲಕ್ಕೆ ನೀಡುವ ಆದೇಶ ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ಮನವಿ ಮಾಡಿದರು.

ADVERTISEMENT

ಇಲ್ಲಿ ಒಟ್ಟು 1836 ಮನೆಗಳ ನಿರ್ಮಾಣವಾಗುತ್ತದೆ. 400 ಜನರು ಮಾತ್ರ ₹ 80 ಸಾವಿರ ಅಥವಾ ₹ 50 ಸಾವಿರ ಹಣ ಕಟ್ಟಿದ್ದಾರೆ. ಇವರಿಗೆಲ್ಲ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಣ ಕೂಡ ಬಿಡುಗಡೆಯಾಗಿದೆ. ಮನೆಗಳ ನಿರ್ಮಾಣಕ್ಕೆ ಟೆಂಡರ್ ಕೂಡ ಕರೆಯಲಾಗಿದೆ. ಗುತ್ತಿಗೆದಾರ ಕೂಡ ಸಿದ್ಧವಾಗಿದ್ದಾರೆ. ನಾಳೆಯಿಂದಲೇ ಕಾಮಗಾರಿ ಆರಂಭವಾಗುತ್ತದೆ. ಹಣ ಕಟ್ಟದ ಫಲಾನುಭವಿಗಳು ತಕ್ಷಣ ಹಣ ಕಟ್ಟಬೇಕು ಎಂದರು.

ಈಗಾಗಲೇ ರಸ್ತೆಗಳು ಆಗಿವೆ. ಕುಡಿಯುವ ನೀರಿನ ಸರಬರಾಜು ಕೆಲಸ ನಡೆಯುತ್ತಿದೆ. ₹ 11 ಕೋಟಿ ವೆಚ್ಚದಲ್ಲಿ ವಿದ್ಯುತ್ ಸಂಪರ್ಕ ಕೂಡ ಕಲ್ಪಿಸಲಾಗುತ್ತಿದೆ. ಕೆಲಸ ಶೀಘ್ರವೇ ಆರಂಭಗೊಳ್ಳುತ್ತದೆ. ಎಲ್ಲ ಬಡವರಿಗೂ ಮನೆ ನೀಡುವುದೇ ಸರ್ಕಾರದ ಉದ್ದೇಶ. ಫಲಾನುಭವಿಗಳು ಈ ಯೋಜನೆ ವಿಫಲವಾಗದಂತೆ ನೋಡಿಕೊಳ್ಳಬೇಕು ಎಂದರು.

‘ಗೋವಿಂದಾ ಪುರದಲ್ಲಿ ಈಗಾಗಲೇ 3,000 ಮನೆಗಳು ವೇಗವಾಗಿ ನಿರ್ಮಾಣವಾಗುತ್ತಿವೆ. ಅಲ್ಲಿ ಎಲ್ಲರೂ ಹಣ ಕಟ್ಟಿದ್ದಾರೆ.
ರಾಜ್ಯ ಮತ್ತು ಕೇಂದ್ರ ಸರ್ಕಾರದ ಹಣ ಕೂಡ ಬಿಡುಗಡೆಯಾಗಿದೆ. ಅದೇ ರೀತಿ ಇಲ್ಲಿಯೂ ಕೂಡ ಶೀಘ್ರವೇ ಮನೆ ನಿರ್ಮಾಣವಾಗುತ್ತದೆ’ ಎಂದರು.

ಆಶ್ರಯ ಸಮಿತಿಯ ಶಶಿಧರ್, ಸೂಡಾ ಅಧ್ಯಕ್ಷ ಎನ್.ಜಿ.ನಾಗರಾಜ್, ಪಾಲಿಕೆ ಸದಸ್ಯರಾದ ಎಸ್.ಜ್ಞಾನೇಶ್ವರ್, ಈ.ವಿಶ್ವಾಸ್, ಲಕ್ಷ್ಮೀ ಶಂಕರನಾಯ್ಕ, ಮುಖಂಡ ಲಕ್ಷ್ಮಣ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.