ADVERTISEMENT

‘ಪರೇಶ್ ಮೇಸ್ತ ಸಾವು: ಮರು ತನಿಖೆ ಆಗಲಿ’

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2022, 5:31 IST
Last Updated 6 ಅಕ್ಟೋಬರ್ 2022, 5:31 IST
   

ಶಿವಮೊಗ್ಗ: ‘ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ವೇಳೆ ದಾಖಲೆಗಳನ್ನು ಮುಚ್ಚಿ ಹಾಕಿದ್ದ ಪರಿಣಾಮವಾಗಿ ಹೊನ್ನಾವರದ ಪರೇಶ್‌ ಮೇಸ್ತ ಕೊಲೆ ಪ್ರಕರಣದ ವರದಿ ಸರಿಯಾಗಿ ಬಂದಿಲ್ಲ. ಹೀಗಾಗಿ ಸಿಬಿಐನಿಂದ ಮತ್ತೊಮ್ಮೆ ಪ್ರಕರಣದ ಮರು ತನಿಖೆ ಮಾಡಿಸಬೇಕು’ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

‘ಪರೇಶ್‌ ಮೇಸ್ತ ಕೊಲೆ ಮುಸ್ಲಿಂ ಗೂಂಡಾಗಳಿಂದ ಆಗಿರುವ ಕೊಲೆ. ಹೀಗಾಗಿ ಪ್ರಕರಣದ ಮರು ಪರಿಶೀಲನೆ ಮಾಡಬೇಕು ಎಂಬುದು ಮೇಸ್ತ ಕುಟುಂಬದ ಆಗ್ರಹ’ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಮಹಾರಾಷ್ಟ್ರ, ಉತ್ತರ ಪ್ರದೇಶ ಸೇರಿದಂತೆ ದೇಶದ ಹಲವೆಡೆ ರಸ್ತೆ, ನಗರ, ಕಟ್ಟಡಗಳ ಹೆಸರನ್ನು ಬಿಜೆಪಿ ಬದಲಾವಣೆ ಮಾಡುತ್ತಿದೆ. ಆ ಮೂಲಕ ಗುಲಾಮಗಿರಿ ಸಂಕೇತಗಳನ್ನು ನಿಧಾನವಾಗಿ ಅಳಿಸಿ
ಹಾಕಲಾಗುತ್ತಿದೆ. ದೂರವಾಣಿ ಸಂಭಾಷಣೆ ವೇಳೆ ‘ಹಲೋ’ ಬದಲು ‘ವಂದೇ ಮಾತರಂ’ ಹೇಳಲು ಆದೇಶ ಹೊರಡಿಸಲಾಗಿದೆ. ಸ್ವಾತಂತ್ರ್ಯ ಬಂದ ತಕ್ಷಣ ಈ ಕೆಲಸವನ್ನು ಕಾಂಗ್ರೆಸ್ ಮಾಡಬೇಕಿತ್ತು. ಅವರು ಮಾಡದ ಕಾರಣ ಬಿಜೆಪಿ ಈಗ ಮಾಡುತ್ತಿದೆ’ ಎಂದು ಈಶ್ವರಪ್ಪ ಹೇಳಿದರು.

ADVERTISEMENT

‘ಪಿಎಫ್‌ಐ ನಿಷೇಧ ಮಾಡಿದಾಗ ಕಾಂಗ್ರೆಸ್ ಒಲ್ಲದ ಮನಸ್ಸಿನಿಂದ ಅದನ್ನು ಸ್ವಾಗತಿಸಿದೆ. ಸಿದ್ದರಾಮಯ್ಯ ಆರ್‌ಎಸ್‌ಎಸ್ ನಿಷೇಧಿಸುವಂತೆ ಒತ್ತಾಯಿಸಿದ್ದಾರೆ. ಆರ್‌ಎಸ್‌ಎಸ್ ರಾಷ್ಟ್ರಪ್ರೇಮ ಜಾಗೃತಿ ಮಾಡುತ್ತಿರುವ ಸಂಘಟನೆ. ಆದರೆ ರಾಷ್ಟ್ರ ದ್ರೋಹಕ್ಕೆ ಬೆಂಬಲ ನೀಡುತ್ತಿರುವುದು ಪಿಎಫ್‌ಐಗೆ ಕಾಂಗ್ರೆಸ್ ಸಾಥ್ ಕೊಡುತ್ತಿದೆ’ ಎಂದು ಆರೋಪಿಸಿದರು.

ಕಲಬುರಗಿಯಲ್ಲಿ ಅ. 30ರಂದು ಹಿಂದುಳಿದ ವರ್ಗದವರ ಸಮಾವೇಶ ನಡೆಯಲಿದ್ದು, ಐದು ಲಕ್ಷ ಜನ ಸೇರಲಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.