ADVERTISEMENT

ಏತ ನೀರಾವರಿ ಕಾಮಗಾರಿ ಚುರುಕುಗೊಳಿಸಿ: ಸಂಸದ ರಾಘವೇಂದ್ರ ಸೂಚನೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2020, 13:16 IST
Last Updated 28 ಜೂನ್ 2020, 13:16 IST
ಶಿಕಾರಿಪುರ ತಾಲ್ಲೂಕಿನ ಹೊಸೂರು, ಉಡುಗಣಿ ಹಾಗೂ ತಾಳಗುಂದ ಹೋಬಳಿಗಳ ಕೆರೆಗಳನ್ನು ತುಂಬಿಸುವ ಏತನೀರಾವರಿ ಯೋಜನೆ ಕಾಮಗಾರಿ ನಡೆಯುವ ಹಿರೇಕೆರೂರು ತಾಲ್ಲೂಕಿನ ಪುರದಕೆರೆಗೆ ಭಾನುವಾರ ಸಂಸದ ಬಿ.ವೈ. ರಾಘವೇಂದ್ರ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು
ಶಿಕಾರಿಪುರ ತಾಲ್ಲೂಕಿನ ಹೊಸೂರು, ಉಡುಗಣಿ ಹಾಗೂ ತಾಳಗುಂದ ಹೋಬಳಿಗಳ ಕೆರೆಗಳನ್ನು ತುಂಬಿಸುವ ಏತನೀರಾವರಿ ಯೋಜನೆ ಕಾಮಗಾರಿ ನಡೆಯುವ ಹಿರೇಕೆರೂರು ತಾಲ್ಲೂಕಿನ ಪುರದಕೆರೆಗೆ ಭಾನುವಾರ ಸಂಸದ ಬಿ.ವೈ. ರಾಘವೇಂದ್ರ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು   

ಶಿಕಾರಿಪುರ: ಏತ ನೀರಾವರಿ ಯೋಜನೆಯ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸಂಸದ ಬಿ.ವೈ. ರಾಘವೇಂದ್ರ ಸೂಚಿಸಿದರು.

ತಾಲ್ಲೂಕಿನ ಹೊಸೂರು, ಉಡುಗಣಿ ಹಾಗೂ ತಾಳಗುಂದ ಹೋಬಳಿಗಳ ಕೆರೆಗಳನ್ನು ತುಂಬಿಸುವ ಏತ ನೀರಾವರಿ ಯೋಜನೆ ಕಾಮಗಾರಿ ನಡೆಯುವ ಹಿರೇಕೆರೂರು ತಾಲ್ಲೂಕಿನ ಪುರದಕೆರೆಗೆ ಭಾನುವಾರ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿ ಮಾತನಾಡಿದರು.

‘ತಾಲ್ಲೂಕಿನ ಹೊಸೂರು ಹಾಗೂ ತಾಳಗುಂದ ಹೋಬಳಿಗಳ ಜನರ ಹಲವು ವರ್ಷಗಳ ಬೇಡಿಕೆಯಂತೆ ಈ ಹೋಬಳಿಗಳ ವ್ಯಾಪ್ತಿಯ ಕೆರೆಗಳನ್ನು ತುಂಬಿಸುವ ಈ ನೀರಾವರಿ ಯೋಜನೆ ಕಾಮಗಾರಿಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅನುದಾನ ನೀಡಿದ್ದಾರೆ. ಬಹುದೊಡ್ಡ ಏತನೀರಾವರಿ ಯೋಜನೆ ಇದಾಗಿದ್ದು, ಒಂದು ವರ್ಷದಲ್ಲಿ ಗ್ರಾಮಗಳ ಕೆರೆಗಳಿಗೆ ನೀರು ಕೊಂಡೊಯ್ಯುವ ನಿರೀಕ್ಷೆ ಹೊಂದಿದ್ದೇವೆ. ನಿರೀಕ್ಷೆಗೆ ತಕ್ಕಂತೆ ಕಾಮಗಾರಿಯನ್ನು ಪೂರ್ಣಗೊಳಿಸಲು ಅಧಿಕಾರಿಗಳು ಮುಂದಾಗಬೇಕು’ ಎಂದರು.

ADVERTISEMENT

ತುಂಗಭದ್ರಾ ನದಿಯಿಂದ ಭರ್ತಿಯಾಗುವ ಪುರದಕೆರೆಯಲ್ಲಿ ಬರಗಾಲದಲ್ಲೂ ನೀರು ಸಂಗ್ರಹವಾಗಿರುತ್ತದೆ. ಈ ನೀರನ್ನು ಮೋಟರ್‌ಗಳ ಮೂಲಕ ಮೇಲೆತ್ತಿ ಪೈಪ್‌ಲೈನ್‌ ಮೂಲಕ ಹೊಸೂರು, ಉಡುಗಣಿ ಹಾಗೂ ತಾಳಗುಂದ ಹೋಬಳಿ ವ್ಯಾಪ್ತಿಯ ಗ್ರಾಮಗಳ ಕೆರೆಗಳನ್ನು ತುಂಬಿಸಲಾಗುತ್ತದೆ. ಕೆರೆಗಳನ್ನು ತುಂಬಿಸುವುದರಿಂದ ಈ ಹೋಬಳಿಗಳಲ್ಲಿ ನೀರಿನ ಸಮಸ್ಯೆ ದೂರವಾಗಲಿದ್ದು, ಅಂತರ್ಜಲ ಮಟ್ಟ ಹೆಚ್ಚಾಗಲಿದೆ ಎಂದು ವಿವರಿಸಿದರು.

ಏತ ನೀರಾವರಿ ಕಾಮಗಾರಿಯನ್ನು ವೀಕ್ಷಿಸಲು ಬಂದಿದ್ದ ತಾಲ್ಲೂಕಿನ ಸುಣ್ಣದಕೊಪ್ಪ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಗ್ರಾಮಸ್ಥರು ಹಾಗೂ ರೈತರೊಂದಿಗೆ ಸಂಸದ ಬಿ.ವೈ. ರಾಘವೇಂದ್ರ ಚರ್ಚೆ ನಡೆಸಿದರು.

ರಾಜ್ಯ ತಾಂಡಾ ಅಭಿವೃದ್ಧಿ ನಿಗಮ ನಿರ್ದೇಶಕಿ ಸವಿತಾ ಶಿವಕುಮಾರ್‌ ನಾಯ್ಕ್‌, ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ನಿರ್ದೇಶಕಿ ತೇಜಸ್ವಿನಿ ರಾಘವೇಂದ್ರ, ಜಿಲ್ಲಾ ಪಂಚಾಯಿತಿ ಸದಸ್ಯೆ ರೇಣುಕಾ ಹನುಮಂತಪ್ಪ, ತಾಲ್ಲೂಕು ಪಂಚಾಯಿತಿ ಪ್ರಭಾರ ಅಧ್ಯಕ್ಷೆ ಪ್ರೇಮಾ ಲೋಕೇಶ್‌, ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಎಂ.ಬಿ. ಚನ್ನವೀರಪ್ಪ, ಮುಖಂಡರಾದ ವೀರೇಂದ್ರ ಪಾಟೀಲ್‌, ಕಲ್ಮನೆ ರಾಜೇಶ್‌, ಹೊಸೂರು ರುದ್ರೇಶ್‌, ನಿವೇದಿತಾ ರಾಜು, ಜ್ಯೋತಿ ರಮೇಶ್, ರೇಣುಕಾಸ್ವಾಮಿ, ಪ್ರವೀಣ್‌ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.