ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಾಸವಿರುವ ಪಾಕಿಸ್ತಾನದ ಪ್ರಜೆಗಳನ್ನು ಗುರುತಿಸಿ 24 ಗಂಟೆಯೊಳಗೆ ದೇಶದಿಂದ ಹೊರಹಾಕುವಂತೆ ಜಿಲ್ಲಾಡಳಿತಕ್ಕೆ ಸಂಸದ ಬಿ.ವೈ. ರಾಘವೇಂದ್ರ ಒತ್ತಾಯಿಸಿದರು.
ಇಲ್ಲಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ಭಯೋತ್ಪಾದಕರ ದಾಳಿ ನಡೆದ ನಂತರ ಪಾಕಿಸ್ತಾನದ ವಿರುದ್ಧ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಹೀಗಾಗಿ ದೇಶದಲ್ಲಿರುವ ಎಲ್ಲಾ ಪಾಕಿಸ್ತಾನಿ ಪ್ರಜೆಗಳನ್ನು ವಾಪಸ್ ಕಳಿಸಲು ಆಯಾ ರಾಜ್ಯಗಳು ಕ್ರಮ ಕೈಗೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ.
ಬಿಜೆಪಿ ಆಡಳಿತದಲ್ಲಿರುವ ರಾಜ್ಯ ಸರ್ಕಾರಗಳು ಪಾಕಿಸ್ತಾನಿಗಳನ್ನು ಹೊರಹಾಕಲು ಈಗಾಗಲೇ ಅಗತ್ಯಕ್ರಮ ಕೈಗೊಂಡಿವೆ. ಕರ್ನಾಟಕ ಸೇರಿದಂತೆ ಬಿಜೆಪಿಯೇತರ ರಾಜ್ಯಗಳು ಇನ್ನೂ ಕ್ರಮ ಕೈಗೊಂಡಿಲ್ಲ. ತಕ್ಷಣವೇ ಕ್ರಮಕ್ಕೆ ಮುಂದಾಗಬೇಕು. ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲೂ ಪಾಕಿಸ್ತಾನಿ ಪ್ರಜೆಗಳು ಇರುವ ಮಾಹಿತಿ ಇದೆ. ಜಿಲ್ಲಾಡಳಿತ ಅವರನ್ನು ಗುರುತಿಸಿ ದೇಶ ಬಿಟ್ಟು ಕಳುಹಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಮೇ 8 ರಂದು ಕೊಲ್ಲೂರಿಗೆ ಬರಲಿದ್ದಾರೆ. ಈ ವೇಳೆ ಕೊಲ್ಲೂರು ಮೂಕಾಂಬಿಕ ಕಾರಿಡಾರ್ ಯೋಜನೆಯ ಪರಿಶೀಲನೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯ ಪ್ರವಾಸಿ ತಾಣಗಳನ್ನು ಅಭಿವೃದ್ದಿಪಡಿಸಲು ಮನವಿ ಅವರಿಗೆ ಮಾಡುವೆ. ಶರಾವತಿ ಹಿನ್ನೀರಿನಲ್ಲಿ ವಾಟರ್ ಬೋಟಿಂಗ್, ಜೈನ ಬಸದಿಗಳ ಸರ್ಕ್ಯೂಟ್ ಮಾಡಿ ಪ್ರವಾಸಿಗರ ಸೆಳೆಯಲು ಸಚಿವರ ಗಮನ ಸೆಳೆಯಲಾಗುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಿ.ಎಸ್ ಅರುಣ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಕೆ.ಜಗದೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರಾಜು, ಹರಿಕೃಷ್ಣ, ಮಾಲತೇಶ್, ಪ್ರಮುಖರಾದ ಚಂದ್ರಶೇಖರ್, ನಾಗರಾಜ್ ಉಪಸ್ಥಿತರಿದ್ದರು.
ಸಿಗಂದೂರು ಸೇತುವೆ ಜೂನ್ ತಿಂಗಳಲ್ಲಿ ಉದ್ಘಾಟಿಸಲು ಸಿದ್ಧತೆ ನಡೆಸಿದ್ದು ಕಾರ್ಯಕ್ರಮಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗಿದೆ. ಪ್ರಧಾನಮಂತ್ರಿ ಕಚೇರಿ ಅಧಿಕಾರಿಗಳು ಈಗಾಗಲೇ ವರದಿ ಪಡೆದಿದ್ದಾರೆ.ಬಿ.ವೈ.ರಾಘವೇಂದ್ರ ಶಿವಮೊಗ್ಗ ಸಂಸದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.