ADVERTISEMENT

ಸಾಗರ: ವೈವಿಧ್ಯಮಯ ಸಸ್ಯಗಳ ಕಣಜ ಹಿಂಡೂಮನೆ ಫಾರ್ಮ್

15 ಎಕರೆ ಪ್ರದೇಶದಲ್ಲಿದೆ 1,300 ತಳಿಯ ತರಹೇವಾರಿ ಗಿಡಗಳು

ಎಂ.ರಾಘವೇಂದ್ರ
Published 9 ಫೆಬ್ರುವರಿ 2022, 4:21 IST
Last Updated 9 ಫೆಬ್ರುವರಿ 2022, 4:21 IST
ಹಿಂಡೂಮನೆ ಫಾರ್ಮ್‌ನಲ್ಲಿನ ದೇಶಿ, ವಿದೇಶಿ ತಳಿಯ ಹಣ್ಣಿನ ಗಿಡಗಳ ನರ್ಸರಿ
ಹಿಂಡೂಮನೆ ಫಾರ್ಮ್‌ನಲ್ಲಿನ ದೇಶಿ, ವಿದೇಶಿ ತಳಿಯ ಹಣ್ಣಿನ ಗಿಡಗಳ ನರ್ಸರಿ   

ಸಾಗರ: ಪಟ್ಟಣದಿಂದ 15 ಕಿ.ಮೀ. ದೂರದಲ್ಲಿರುವ ಹೊಸಳ್ಳಿ ಗ್ರಾಮದ ಹಿಂಡೂಮನೆ ಫಾರ್ಮ್‌ನಲ್ಲಿ 600ಕ್ಕೂ ಹೆಚ್ಚು ವಿದೇಶಿ ತಳಿಯ ಹಣ್ಣಿನ ಗಿಡಗಳು, 1,300 ತಳಿಯ ತರಹೇವಾರಿ ಸಸ್ಯಗಳನ್ನು ಕಾಣಬಹುದು.

ಸಾಗರದಿಂದ ಜೋಗಕ್ಕೆ ಹೋಗುವ ಮಾರ್ಗದಲ್ಲಿ 10 ಕಿ.ಮೀ. ಕ್ರಮಿಸಿದರೆ ಆಲಳ್ಳಿ ಸಿಗುತ್ತದೆ. ಅಲ್ಲಿಂದ ಎಡಕ್ಕೆ 5 ಕಿ.ಮೀ. ಹೋದರೆ ಮಲೆನಾಡಿನ ಸುಂದರ ಪರಿಸರದ ನಡುವೆ ಹಸಿರು ಹೊದ್ದು ನಿಂತಿರುವ ಹಿಂಡೂಮನೆ ಫಾರ್ಮ್ ನೋಡುಗರನ್ನು ಸೆಳೆಯುತ್ತದೆ.

15 ಎಕರೆ ಪ್ರದೇಶದಲ್ಲಿರುವ ಹಿಂಡೂಮನೆ ಫಾರ್ಮ್‌ನಲ್ಲಿ ಈ ಭಾಗದ ಸಾಂಪ್ರದಾಯಿಕ ಬೆಳೆಯಾದ ಅಡಿಕೆಯ ಜೊತೆಗೆ ತೆಂಗು, ಮಾವು, ಗೇರು, ಕಾಫಿ, ಕೋಕೋ, ಜಾಯಿಕಾಯಿ, ಲವಂಗ, ಕಾಳುಮೆಣಸು, ಕೋಕಂ, ಬಾಳೆ, ವೆನಿಲಾ, ತರಕಾರಿ ಅಲ್ಲದೆ 600ಕ್ಕೂ ಹೆಚ್ಚು ವಿದೇಶಿ ತಳಿಯ ಹಣ್ಣುಗಳ ಗಿಡಗಳನ್ನು ಬೆಳೆಯಲಾಗಿದೆ. ಔಷಧೀಯ ಗುಣಗಳುಳ್ಳ ಸಸ್ಯಗಳನ್ನೂ ಇಲ್ಲಿ ಕಾಣಬಹುದು.

ADVERTISEMENT

ವಿದೇಶಿ ತಳಿಯ ಹಣ್ಣುಗಳನ್ನು ಮಲೆನಾಡಿನ ವಾತಾವರಣದಲ್ಲೂ ಬೆಳೆಯಬಹುದು ಎಂಬುದನ್ನು ಹಿಂಡೂಮನೆ ಫಾರ್ಮ್‌ನ ರಾಜೇಂದ್ರ ಹಿಂಡೂಮನೆ ಮತ್ತು ಅವರ ಕುಟುಂಬದವರು ಸಾಬೀತುಪಡಿಸಿದ್ದಾರೆ. ವಿವಿಧ ದೇಶಗಳ ಹಣ್ಣಿನ ತಳಿಗಳಾದ ರಾಂಬುಟಾನ್, ಮ್ಯಾಂಗೊಸ್ಟಿನ್, ಬಟರ್ ಫ್ರೂಟ್, ಎಗ್ ಫ್ರೂಟ್, ಅಭಿಯೂ, ಮಿಲ್ಕ್ ಫ್ರೂಟ್, ಪೆರ್ರಿ ಪೀ ನಟ್, ಡೆರೋಸ್ಟಾಮ್, ಮಲಬೇರಿ, ಲಾಂಗ್ ಆನ್ ಪ್ರೂಟ್... ಇಲ್ಲಿರುವ ವಿದೇಶಿ ತಳಿಯ ಹಣ್ಣುಗಳ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತದೆ.

ಇದರ ಜೊತೆಗೆ 150 ಮಾದರಿಯ ಹಲಸಿನ ಹಣ್ಣುಗಳು, 20 ಜಾತಿಯ ಚಕ್ಕೋತಾ, ಸಾಲುಸಾಲು ಸೀತಾಫಲ, ಲಿಂಬು, ಸೀಬೆ, ಕೌಳಿ, ಮೂಸುಂಬೆ, ಕಿತ್ತಲೆ, ಪಪ್ಪಾಯ, 80 ಜಾತಿಯ ಮಾವು ಸೇರಿ ನಮ್ಮ ನೆಲದ ಹಣ್ಣಿನ ಗಿಡ ಮರಗಳು ಇಲ್ಲಿ ಕಣ್ಣು ಮಾತ್ರವಲ್ಲ ಮನಸ್ಸಿಗೂ ಮುದ ನೀಡುತ್ತವೆ.

‘ಎಲ್ಲಾ ರೀತಿಯ ವಿದೇಶಿ ತಳಿಯ ಹಣ್ಣುಗಳಿಗೆ ಮಾರುಕಟ್ಟೆ ಇಲ್ಲದಿರುವುದರಿಂದ ನರ್ಸರಿ ಮೂಲಕ ಗಿಡಗಳ ಮಾರಾಟದಿಂದ ಬರುವ ಆದಾಯವನ್ನು ಹೊಸ ಗಿಡಗಳ ಖರೀದಿ ಮತ್ತು ಆರೈಕೆಗೆ ಬಳಸಲಾಗುತ್ತದೆ’ ಎನ್ನುತ್ತಾರೆ ರಾಜೇಂದ್ರ ಹಿಂಡೂಮನೆ.

ಇದರ ಜೊತೆಗೆ ಹಿಂಡೂಮನೆ ಫಾರ್ಮ್ ಈ ಭಾಗದ ಪಿಕ್ ನಿಕ್ ಸ್ಪಾಟ್ ಕೂಡ ಆಗಿದೆ. ಸರ್ಕಾರ ಏರ್ಪಡಿಸುವ ಕೃಷಿ ಪ್ರವಾಸಕ್ಕೆ ಬರುವ ರೈತರು ಇಲ್ಲಿಗೆ ಭೇಟಿ ನೀಡುತ್ತಾರೆ. ವಿವಿಧ ಕೃಷಿ, ತೋಟಗಾರಿಕೆ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು, ಸಂಶೋಧನಾಸಕ್ತರು ಹೀಗೆ ನಿರಂತರವಾಗಿ ಇಲ್ಲಿಗೆ ತಂಡೋಪತಂಡವಾಗಿ ಬರುತ್ತಾರೆ.

ಸಸ್ಯ, ಹಣ್ಣುಗಳ ಗಿಡಗಳನ್ನು ನೋಡಿ ಅವುಗಳ ಬಗ್ಗೆ ತಿಳಿದುಕೊಳ್ಳಬೇಕು ಎನ್ನುವ ಆಸಕ್ತಿ ಇದ್ದು ಇಲ್ಲಿಗೆ ಬರಲು ಮನಸ್ಸಾದರೆ ಮೊದಲೇ ಕರೆ ಮಾಡಿ ದಿನಾಂಕ ಮತ್ತು ಸಮಯವನ್ನು ನಿಗದಿ ಮಾಡಿಕೊಳ್ಳಬೇಕು. ಪ್ರತಿ ವ್ಯಕ್ತಿಗೆ ₹ 200ರಂತೆ ಶುಲ್ಕ ತುಂಬಿದರೆ ಅರ್ಧ ದಿನಗಳ ಕಾಲ ಫಾರ್ಮ್ ಸುತ್ತಿ ಗೈಡ್ ಮೂಲಕ ಅಗತ್ಯ ಮಾಹಿತಿ ಪಡೆಯಬಹುದು. ಪಕ್ಕಾ ಕೃಷಿಕರು ಎಂದು ಮನವರಿಕೆಯಾದರೆ ಶುಲ್ಕದಿಂದ ವಿನಾಯಿತಿಯೂ ದೊರಕುತ್ತದೆ. ಫಾರ್ಮ್‌ನಲ್ಲಿ ಬೆಳೆಯುವ ಹಣ್ಣುಗಳಿಂದ ಜಾಮ್, ಹಣ್ಣಿನ ರಸ ತಯಾರಿಸಿ ಮಾರಾಟ ಮಾಡಲಾಗುತ್ತಿದೆ.

ಕೃಷಿಯಲ್ಲೇ ತೃಪ್ತಿಕಾಣುತ್ತಿರುವ ಹೊಸ ತಲೆಮಾರು

ಹಿಂಡೂಮನೆ ಫಾರ್ಮ್‌ನ ಕುಟುಂಬದಲ್ಲಿ 9 ಸದಸ್ಯರಿದ್ದಾರೆ. ಫಾರ್ಮ್‌ನ ಬಹುತೇಕ ಕೆಲಸಗಳನ್ನು ಕುಟುಂಬದವರೇ ನಿರ್ವಹಿಸುತ್ತಾರೆ. ಇಬ್ಬರು ಕೂಲಿಯಾಳುಗಳು ಕಾಯಂ ಆಗಿ ಇದ್ದಾರೆ. ಕೊಯ್ಲಿನ ಸಂದರ್ಭದಲ್ಲಿ ಮಾತ್ರ ಹೆಚ್ಚುವರಿ ಕೂಲಿಯಾಳುಗಳ ನೆರವು ಪಡೆಯಲಾಗುತ್ತದೆ. ಹಿಂಡೂಮನೆ ಕುಟುಂಬದ ಹೊಸ ತಲೆಮಾರಿನ ಸದಸ್ಯರಾದ ಮೇಘಾ, ಗಗನ ಎಂಜಿನಿರಿಯಿಂಗ್‌ನಲ್ಲಿ ಉನ್ನತ ಶ್ರೇಣಿ ಪಡೆದಿದ್ದರೂ ನಗರಕ್ಕೆ ವಲಸೆ ಹೋಗದೆ ಕೃಷಿಯಲ್ಲೇ ತೃಪ್ತಿ ಕಂಡುಕೊಂಡಿದ್ದಾರೆ.

ಎರಡು ತೆರೆದ ಬಾವಿ, ಒಂದು ಕೊಳವೆ ಬಾವಿ ಹಾಗೂ ಸಹಜವಾಗಿ ಲಭ್ಯವಿರುವ ಅಬ್ಬಿ ನೀರಿನ ಮೂಲಕವೇ ತಮ್ಮ ವಿಸ್ತಾರವಾದ ಕೃಷಿ ಪ್ರದೇಶದ ನಿರ್ವಹಣೆಯನ್ನು ಮಾಡುತ್ತಿರುವ ಹಿಂಡೂಮನೆ ಕುಟುಂಬ ಪರಿಸರ ಸ್ನೇಹಿ ಮಾದರಿಯ ಕೃಷಿಗೆ ಒತ್ತು ನೀಡಿದೆ. ವಿದೇಶಿ ತಳಿಗಳ ಹಣ್ಣಿನ ಗಿಡಗಳು ಏಳಲು ಆರಂಭದಲ್ಲಿ ಮಾತ್ರ ಒಂದಿಷ್ಟು ಪ್ರಮಾಣದಲ್ಲಿ ರಾಸಾಯನಿಕ ಬಳಸಲಾಗುತ್ತಿದೆ. ಹಣ್ಣಿನ ಗಿಡ ಬೆಳೆದು ಫಸಲು ಬಂದ ನಂತರ ಯಾವುದೇ ಕಾರಣಕ್ಕೂ ರಾಸಾಯನಿಕ ಸಿಂಪಡಿಸುವುದಿಲ್ಲ ಎಂಬ ಬದ್ಧತೆಯನ್ನು ಉಳಿಸಿಕೊಳ್ಳಲಾಗಿದೆ. (ಸಂಪರ್ಕ ಸಂಖ್ಯೆ: 8722129090)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.