ADVERTISEMENT

ಶಿವಮೊಗ್ಗ: ಕೃಷಿ ಕಾಯ್ದೆ ವಾಪಸ್‌; ರೈತರು, ಹೋರಾಟಗಾರರ ಹರ್ಷ

ಕರ್ನಾಟಕದಲ್ಲೇ ಮೊದಲು ರೈತರ ಮಹಾ ಪಂಚಾಯತ್ ಆಯೋಜಿಸಿದ್ದ ಶಿವಮೊಗ್ಗ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2021, 7:01 IST
Last Updated 20 ನವೆಂಬರ್ 2021, 7:01 IST
ಶಿವಮೊಗ್ಗದಲ್ಲಿ ಮಾರ್ಚ್‌ 20ರಂದು ನಡೆದಿದ್ದ ರೈತರ ಮಹಾ ಪಂಚಾಯತ್‌ನಲ್ಲಿ ಸಂಯುಕ್ತ ಕಿಸಾನ್ ಮೊರ್ಚಾ ನಾಯಕ ರಾಕೇಶ್ ಟಿಕಾಯತ್ ಮಾತನಾಡಿದ್ದ ಸಂಗ್ರಹ ಚಿತ್ರ.
ಶಿವಮೊಗ್ಗದಲ್ಲಿ ಮಾರ್ಚ್‌ 20ರಂದು ನಡೆದಿದ್ದ ರೈತರ ಮಹಾ ಪಂಚಾಯತ್‌ನಲ್ಲಿ ಸಂಯುಕ್ತ ಕಿಸಾನ್ ಮೊರ್ಚಾ ನಾಯಕ ರಾಕೇಶ್ ಟಿಕಾಯತ್ ಮಾತನಾಡಿದ್ದ ಸಂಗ್ರಹ ಚಿತ್ರ.   

ಶಿವಮೊಗ್ಗ: ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆದಿರುವುದು ಜಿಲ್ಲೆಯ ರೈತರು ಹಾಗೂ ರೈತ ಪರ ಹೋರಾಟಗಳಲ್ಲಿ ಭಾಗಿಯಾಗಿದ್ದವರಿಗೆ ಅತ್ಯಂತ ಹರ್ಷ ತಂದಿದೆ.

ಕೃಷಿ ಕಾಯ್ದೆ ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ದೆಹಲಿ ಗಡಿಯಲ್ಲಿ ಹೋರಾಟ ನಡೆಯುತ್ತಿದ್ದ ಸಮಯದಲ್ಲೇ ಶಿವಮೊಗ್ಗದಲ್ಲೂ ರೈತರ ಮಹಾ ಪಂಚಾಯತ್ ಆಯೋಜಿಸಲಾಗಿತ್ತು. ದೆಹಲಿ ಹೋರಾಟಕ್ಕೆ 100 ದಿನಗಳು ತುಂಬುವ ಸಮಯದಲ್ಲೇ ಸಂಯುಕ್ತ ಕಿಸಾನ್ ಮೋರ್ಚಾದ ನಾಯಕರಾದ ರಾಕೇಶ್‌ ಟಿಕಾಯತ್, ದರ್ಶನ್‌ ಪಾಲ್‌, ಯುದ್‌ವೀರ್ ಸಿಂಗ್‌ ಅವರನ್ನು ಕರೆಸಿ ಪ್ರಸಕ್ತ ವರ್ಷದ ಮಾರ್ಚ್‌ 20ರಂದು ಕರ್ನಾಟಕದಲ್ಲೇ ಮೊದಲ ಮಹಾ ಪಂಚಾಯತ್ ನಡೆಸಿದ ಕೀರ್ತಿ ಇಲ್ಲಿನ ಹೋರಾಟಗಾರರಿಗೆ ಸಲ್ಲುತ್ತದೆ.

ದೆಹಲಿ ಗಡಿಯಲ್ಲಿ ನಡೆಯುತ್ತಿದ್ದ ಹೋರಾಟ ಬೆಂಬಲಿಸಿ ಜಿಲ್ಲೆಯ ರೈತ, ಪ್ರಗತಿಪರ ನಾಯಕರಾದ ಕೆ.ಟಿ. ಗಂಗಾಧರ್, ಎಚ್‌.ಆರ್. ಬಸವರಾಜಪ್ಪ, ಕೆ.ಎಲ್‌. ಅಶೋಕ್, ಎನ್‌. ರಮೇಶ್, ಕೆ.ಪಿ. ಶ್ರೀಪಾಲ್, ಎಂ. ಗುರುಮೂರ್ತಿ, ಎಚ್‌.ಟಿ. ಹಾಲೇಶಪ್ಪ ಮತ್ತಿತರರು ಜಿಲ್ಲೆಯಲ್ಲೂ ಮಹಾ ಪಂಚಾಯತ್ ಆಯೋಜಿಸುವ ನಿರ್ಧಾರ ಮಾಡಿದ್ದರು. ಇಲ್ಲಿನ ಹೋರಾಟದ ನೇತೃತ್ವ ವಹಿಸಿಕೊಂಡು, ಸಮಾವೇಶದ ಜವಾಬ್ದಾರಿ ಹೆಗಲಮೇಲೆ ಹೊತ್ತವರು ಜೆಡಿಎಸ್‌ ಮುಖಂಡ ಎಂ. ಶ್ರೀಕಾಂತ್. ಪಂಚಾಯತ್ ನೆಪದಲ್ಲಿ ವಿವಿಧ ಬಣಗಳಾಗಿದ್ದ ರೈತ, ದಲಿತ ಸಂಘಟನೆಗಳನ್ನು ಒಗ್ಗೂಡಿಸಿ ಐಕ್ಯ ಒಕ್ಕೂಟ ಸಮಿತಿ ರಚಿಸಿಕೊಂಡು ಒಗ್ಗಟ್ಟಿನ ಹೋರಾಟಕ್ಕೆ ಇಳಿದಿದ್ದು ಜಿಲ್ಲೆಯ ಮಟ್ಟಿಗೆ ಮಹತ್ವದ ಬೆಳವಣಿಗೆ.

ADVERTISEMENT

ರೈತ ಹೋರಾಟದಲ್ಲಿ ಯುವಪೀಳಿಗೆಯ ಸಹಭಾಗಿತ್ವ ಅಗತ್ಯ. ಯುವ ಜನರನ್ನು ಭೂಮಿ ಜತೆ ಬೆಸೆಯದ ಹೋರಾಟಗಳಿಗೆ ಭವಿಷ್ಯವಿಲ್ಲ. ಕೇಂದ್ರ ಸರ್ಕಾರ ಕೃಷಿ ಕಾಯ್ದೆ ಹಿಂದಕ್ಕೆ ಪಡೆಯದೇ ಹೋರಾಟ ಕೈಬಿಡುವುದಿಲ್ಲ.ಇದು ಪ್ರೊ.ನಂಜುಂಡಸ್ವಾಮಿ, ಎನ್‌.ಡಿ. ಸುಂದರೇಶ್ ಹೋರಾಟ ಕಟ್ಟಿದ ನೆಲ. ಈ ನೆಲದಿಂದಲೇ ರೈತರ ಹೋರಾಟ ದಕ್ಷಿಣದತ್ತ ಸಾಗುತ್ತಿದೆ. ಮೂರು ಕರಾಳ ಕಾಯ್ದೆ ವಾಪಸ್ ಪಡೆಯುವರೆಗೂ ಹೋರಾಟ ನಿಲ್ಲುವುದಿಲ್ಲ. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯೂ ಕಾಯ್ದೆ ಆಗಬೇಕು. ಅಲ್ಲಿಯವರೆಗೂ ಹೋರಾಟದಿಂದ ಕದಲುವುದಿಲ್ಲ ಎಂದು ನಗರದ ಸೈನ್ಸ್ ಮೈದಾನದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ನಾಯಕ ರಾಕೇಶ್‌ ಟಿಕಾಯತ್ ಗುಡುಗಿದ್ದರು. ಎಲ್ಲ ನಾಯಕರೂ ಒಂದು ದಿನ ಶಿವಮೊಗ್ಗದಲ್ಲೇ ತಂಗಿದ್ದರು.

ಚುಕ್ಕಿ‌ ನಂಜುಂಡಸ್ವಾಮಿ, ನೂರ್ ಶ್ರೀಧರ್, ಶೋಭಾ ಸುಂದರೇಶ್, ಕೋಡಿಹಳ್ಳಿ ಚಂದ್ರಶೇಖರ್, ಕಡಿದಾಳು ಶಾಮಣ್ಣ ಸೇರಿ ನೂರಾರು ನಾಯಕರು ಸಮಾವೇಶದಲ್ಲಿ ಭಾಗವಹಿಸಿದ್ದರು.

***

ದೆಹಲಿಗೆ ಹೋರಾಟಕ್ಕೆ ಶಿವಮೊಗ್ಗದ ಸ್ಪಂದನೆ ಅನನ್ಯ. ದಕ್ಷಿಣ ಭಾರತದಲ್ಲೇ ಮೊದಲ ಬಾರಿ ಜಿಲ್ಲೆಯಲ್ಲಿ ರೈತರ ಮಹಾ ಪಂಚಾಯತ್ ಆಯೋಜಿಸುವ ಮೂಲಕ ಕೃಷಿ ಕಾಯ್ದೆಗಳ ವಿರುದ್ಧದ ಹೋರಾಟಕ್ಕೆ ಬೆಂಬಲ ನೀಡಲಾಗಿತ್ತು. ಕೃಷಿ ಕಾಯ್ದೆ ರದ್ದತಿ ಜಿಲ್ಲೆಯ ಎಲ್ಲರಿಗೂ ಹರ್ಷ ತಂದಿದೆ. ಹೋರಾಟಗಳಿಗೆ ಮತ್ತಷ್ಟು ಬಲ ತುಂಬಿದೆ.

-ಎನ್‌.ರಮೇಶ್, ಐಕ್ಯ ಹೋರಾಟ ಸಮಿತಿ ಮುಖಂಡ.

***

ಕೃಷಿ ಕಾಯ್ದೆಗಳ ವಿರುದ್ಧ ಉತ್ತರ ಭಾರತದ ರೈತರ ಹೋರಾಟ ಬೆರಗು ಮೂಡಿಸಿತ್ತು. ಅಲ್ಲಿಗೆ ತೆರಳಿ ಹೋರಾಟದಲ್ಲಿ ಎರಡು ದಿನಗಳು ಭಾಗಿಯಾಗಿದ್ದೆವು. ಆಗ ಟಿಕಾಯತ್ ಸೇರಿದಂತೆ ಸಂಯುಕ್ತ ಕಿಸಾನ್ ಮೋರ್ಚಾ ಹೋರಾಟಗಾರರು ನಾವಿರುವಲ್ಲೇ ಹೋರಾಟ ಕಟ್ಟಲು ನಿನಂತಿಸಿದ್ದರು. ಅವರ ಕೋರಿಕೆಯಂತೆ ಶಿವಮೊಗ್ಗದಲ್ಲೂ ರೈತರ ಮಹಾ ಪಂಚಾಯತ್ ಆಯೋಜಿಸಿದ್ದೆವು. ಈಗ ಈ ನೆಲದ ಹೋರಾಟವೂ ಸಾರ್ಥಕವೆನಿಸಿದೆ.

–ಎಂ.ಶ್ರೀಕಾಂತ್, ಶಿವಮೊಗ್ಗ ರೈತ ಮಹಾ ಪಂಚಾಯತ್ ರೂವಾರಿ.

***

ಕೃಷಿ ಕಾಯ್ದೆಗಳನ್ನು ವಿರೋಧಿಸಿ ಒಂದು ವರ್ಷ ನಡೆದ ಹೋರಾಟ ಎರಡನೇ ಸ್ವಾತಂತ್ರ್ಯ ಸಂಗ್ರಾಮ. ಪ್ರಪಂಚದಲ್ಲೇ ಇಷ್ಟು ಸುದೀರ್ಘ ಅವಧಿ ರೈತರ ಹೋರಾಟಗಳು ಎಲ್ಲೂ ನಡೆದಿರಲಿಲ್ಲ. ಇದು ಹೋರಾಟಗಾರರ ದಿಗ್ವಿಜಯ.

-ಕೆ.ಎಲ್‌.ಅಶೋಕ್, ರಾಜ್ಯ ಕಾರ್ಯದರ್ಶಿ, ಜನಶಕ್ತಿ–ಕರ್ನಾಟಕ.

***

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನ ಸಂಘಟಿತ ಚಳವಳಿಗಳಿಗೆ ಎಂತಹ ಸರ್ವಾಧಿಕಾರಿಯಾದರೂ ತಲೆ ಬಾಗಲೇಬೇಕು ಎನ್ನುವುದಕ್ಕೆ ಈ ಹೋರಾಟ ಒಂದು ಉತ್ತಮ ಉದಾಹರಣೆ. ದೇಶದ ಇತಿಹಾಸದಲ್ಲೇ ಇದು ಮಾದರಿ ಹೋರಾಟ.

–ಕೆ.ಪಿ.ಶ್ರೀಪಾಲ್, ಅಧ್ಯಕ್ಷರು, ನಮ್ಮಹಕ್ಕು ಸಂಘಟನೆ.

***

ಕೊರೊನಾ ಸಂಕಷ್ಟದಲ್ಲಿ ದೇಶ ಇದ್ದಾಗಲೇ ಕೇಂದ್ರ ಸರ್ಕಾರ ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ಜಾರಿಗೆ ತಂದದ್ದು ಅಕ್ಷಮ್ಯ. ಸುಪ್ರೀಂಕೋರ್ಟ್ ಸೂಚಿಸಿದರೂ ಹಠಮಾರಿ ಧೋರಣೆ ಬಿಟ್ಟಿರಲಿಲ್ಲ. ಸಂಧಾನಕ್ಕೂ ಬಗ್ಗಿರಲಿಲ್ಲ. ಕೊನೆಗೂ ಹೋರಾಟಕ್ಕೆ ಮಣಿದಿರುವುದು ಸಂತಸ ತಂದಿದೆ.

–ವೈ.ಜಿ.ಮಲ್ಲಿಕಾರ್ಜುನ್, ರೈತ ಮುಖಂಡರು.

***

ಕನಿಷ್ಠ ಬೆಂಬಲ ಬೆಲೆ ಕಾಯ್ದೆಗೆ ಗಂಗಾಧರ್ ಆಗ್ರಹ

ಶಿವಮೊಗ್ಗ: ದೇಶ ಮತ್ತು ರೈತರ ಹಿತದೃಷ್ಟಿಯಿಂದ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರ ಸ್ವಾಗತಾರ್ಹ ಎಂದು ರಾಜ್ಯ ರೈತ ಸಂಘದ ಮುಖಂಡ ನಾಯಕ ಕೆ.ಟಿ.ಗಂಗಾಧರ್ ಪ್ರತಿಕ್ರಿಯಿಸಿದ್ದಾರೆ.

ಒಂದು ವರ್ಷದಿಂದ ಆಂದೋಲನ ನಡೆಸುತ್ತಿರುವ ರೈತರ ತಾಳ್ಮೆಯ ವಿಜಯ. ಮೋದಿ ಸರ್ಕಾರದ ದೂರದೃಷ್ಟಿ, ಅಭಿಮಾನಕ್ಕೆ ನೂರಾರು ರೈತರು ಪ್ರಾಣ ಕಳೆದುಕೊಂಡಿರುವುದನ್ನು ದೇಶ ಎಂದಿಗೂ ಮರೆಯಲು ಸಾಧ್ಯವಿಲ್ಲ. ರೈತ ಚಳವಳಿಯಲ್ಲಿ ಪ್ರಾಣ ತ್ಯಾಗ ಮಾಡಿದ ಎಲ್ಲ ರೈತರಿಗೆ ನಮನ. ಇದು ಅವರ ತ್ಯಾಗದ ಜಯ ಎಂದರು.

ಕನಿಷ್ಠ ಬೆಂಬಲ ಬೆಲೆ ಕಾನೂನು ಬೇಡಿಕೆ ಬಾಕಿ ಇದೆ. ಮುಂಬರುವ ಸಂಸತ್ತಿನ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಕಾನೂನು ತರಬೇಕು ಎಂದು ಒತ್ತಾಯಿಸಿದರು.

24 ತಸುಗಳ ಒಳಗೆ ರಾಜ್ಯವೂ ನಿರ್ಧಾರ ಪ್ರಕಟಿಸಬೇಕು

ಕೇಂದ್ರಕ್ಕೆ ಪೂರಕವಾಗಿ ರಾಜ್ಯ ಸರ್ಕಾರವೂ ಜಾರಿಗೆ ತಂದ ಎಲ್ಲ ವಿವಾದಾತ್ಮಕ ಕೃಷಿ ಕಾಯ್ದೆಗಳನ್ನೂ 24 ಗಂಟೆಗಳ ಒಳಗೆ ರದ್ದು ಮಾಡಬೇಕುರಾಜ್ಯ ರೈತ ಸಂಘದ ಗೌರವಾಧ್ಯಕ್ಷ, ಸಂಯುಕ್ತ ಕಿಸಾನ್ ಮೋರ್ಚಾ ಸಂಚಾಲಕ ಎಚ್‌.ಆರ್.ಬಸವರಾಜಪ್ಪ ಆಗ್ರಹಿಸಿದರು.

ಪ್ರಧಾನಿ ಘೋಷಣೆ ಸಂಸತ್‌ನಲ್ಲಿ ಮಂಡನೆಯಾಗಿ ಅಧಿಕೃತವಾಗಿ ರದ್ದಾಗಬೇಕು. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾನೂನು ಬದ್ಧಗೊಳಿಸಬೇಕು. ಮೊದಲೇ ಇಂತಹ ನಿರ್ಧಾರ ತೆಗೆದುಕೊಂಡಿದ್ದಾರೆ ಅಮಾಯಕ ರೈತರ ಜೀವಗಳು ಉಳಿಯುತ್ತಿದ್ದವು. ಮೊದಲೇ ನಿರ್ಧಾರ ತೆಗೆದುಕೊಂಡಿದ್ದರೆ 700 ರೈತರ ಜೀವಗಳನ್ನು ಉಳಿಸಬಹುದಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಖಾಸಗಿ ಬಸ್‌ನಿಲ್ದಾಣದ ಬಳಿ ನ.20ರಂದು ಮಧ್ಯಾಹ್ನ 12ಕ್ಕೆ ವಿಜಯೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.