ADVERTISEMENT

ಯಡೇಹಳ್ಳಿ ಕಸಕ್ಕೆ ಸುತ್ತಲ ರೈತರು ಹೈರಾಣ: ಸಾಕಾರಗೊಳ್ಳದ ಸ್ವಚ್ಛ ಸಂಕೀರ್ಣ

ಸಾಕಾರಗೊಳ್ಳದ ಸ್ವಚ್ಛ ಸಂಕೀರ್ಣ ಘಟಕ, ನನೆಗುದಿಗೆ ಬಿದ್ದ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 8 ಜನವರಿ 2022, 5:02 IST
Last Updated 8 ಜನವರಿ 2022, 5:02 IST
ಆನಂದಪುರ ಸಮೀಪದ ಯಡೇಹಳ್ಳಿ ರಸ್ತೆ ಬದಿ ಕಸದ ರಾಶಿ
ಆನಂದಪುರ ಸಮೀಪದ ಯಡೇಹಳ್ಳಿ ರಸ್ತೆ ಬದಿ ಕಸದ ರಾಶಿ   

ಶಿವಮೊಗ್ಗ: ಜಿಲ್ಲೆಯ ಗ್ರಾಮೀಣ ಪ್ರದೇಶಗಳ ಕಸ ನಿರ್ವಹಣೆ ಪದ್ಧತಿ ರಾಜ್ಯಕ್ಕೇ ಮಾದರಿಯಾಗಿದೆ. ಆದರೆ, ಸಾಗರ ತಾಲ್ಲೂಕು ಆನಂದಪುರ ಹೋಬಳಿ ಯಡೇಹಳ್ಳಿ ಪಂಚಾಯಿತಿ ವ್ಯಾಪ್ತಿಯ ಕಸ ರೈತರ ಬದುಕಿಗೇ ಮಾರಕವಾಗಿದೆ.

ಜಿಲ್ಲಾ ಪಂಚಾಯಿತಿ ಎರಡು ವರ್ಷಗಳ ಹಿಂದೆಯೇ ಎಲ್ಲ ಪಂಚಾಯಿತಿಗಳಲ್ಲೂ ಸ್ವಚ್ಛ ಸಂಕೀರ್ಣ ಘಟಕ ಸ್ಥಾಪಿಸಲು ತಲಾ ₹ 20 ಲಕ್ಷ ವೆಚ್ಚದ ಕ್ರಿಯಾ ಯೋಜನೆ ರೂಪಿಸಿತ್ತು. ವಾಹನ, ಕಸ ಸಂಗ್ರಹ ಪರಿಕರ ಖರೀದಿಸಲು ಆದೇಶಿಸಿತ್ತು. ಜಾಗ ಗುರುತಿಸಲು ವಿಳಂಬವಾದರೆ ಲಭ್ಯವಿರುವ ಹಳೆಯ ಕಟ್ಟಡ,ತಾತ್ಕಾಲಿಕ ಶೆಡ್‌ಗಳಲ್ಲಿ ಕಸ ಸಂಗ್ರಹ, ವಿಂಗಡಣೆ ಕಾರ್ಯ ಮಾಡಲು ಸೂಚಿಸಲಾಗಿತ್ತು.

ಪ್ರತಿ ಪಂಚಾಯಿತಿಯಲ್ಲೂ ಮನೆ ಮನೆಗೆ ತೆರಳಿ ಕಸ ಸಂಗ್ರಹಿಸಲು ವಾಹನದ ಜತೆ ಚಾಲಕ ಸೇರಿ ನಾಲ್ವರು ಸಿಬ್ಬಂದಿ ನಿಯೋಜಿಸುವುದು, ಸಂಗ್ರಹಿಸಿದ ಕಸದಲ್ಲಿ ಪ್ಲಾಸ್ಟಿಕ್‌ ವಸ್ತುಗಳನ್ನು ಪ್ರತ್ಯೇಕಿಸಿ, ತಿಂಗಳಿಗೊಮ್ಮೆ ಮರುಬಳಕೆ ಸಾಮಗ್ರಿ ತಯಾರಿಕೆ ಉದ್ದೇಶಕ್ಕೆ ಮಾರಾಟ ಮಾಡುವುದು, ಕೊಳೆಯುವ ಕಸವನ್ನು ಗೊಬ್ಬರಕ್ಕೆ ಬಳಸುವುದು, ಅದರಿಂದ ಬರುವ ಹಣದಲ್ಲೇ ಸಿಬ್ಬಂದಿ ವೇತನ, ಇತರ ಖರ್ಚು ನಿಭಾಯಿಸಲು ಯೋಜನೆ ರೂಪಿಸಲಾಗಿತ್ತು.

ADVERTISEMENT

ಯಡೇಹಳ್ಳಿ ಪಂಚಾಯಿತಿಯಲ್ಲೂ ಜಾಗ ಗುರುತಿಸಲಾಗಿತ್ತು. ಕಟ್ಟಡ ನಿರ್ಮಾಣ ಕಾರ್ಯವೂ ಆರಂಭವಾಗಿತ್ತು. ಆದರೆ, ಬಹುದಿನಗಳಿಂದ ಕಾಮಗಾರಿ ನನೆಗುದಿಗೆ ಬಿದ್ದಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ 6 ಹಳ್ಳಿಗಳು ಬರುತ್ತವೆ. 4,162 ಜನಸಂಖ್ಯೆ ಇದೆ. ಮನೆಗಳಿಂದ ಸಂಗ್ರಹಿಸುವ ಕಸ ತಂದು ಸರ್ವೆ ನಂಬರ್‌ 14ರ ಜಾಗದಲ್ಲಿ ಸುರಿಯಲಾಗುತ್ತಿದೆ. ಈ ಕಸವೆಲ್ಲ ಗಾಳಿಗೆ ತೂರಿ ಹೋಗಿ ಅಕ್ಕಪಕ್ಕದ ರೈತರ ಜಮೀನುಗಳಿಗೆ ಬೀಳುತ್ತಿದೆ. ರೈತರು ಬೆಳೆ ನಷ್ಟ ಅನುಭವಿಸುತ್ತಿದ್ದಾರೆ. ದುರ್ವಾಸನೆಗೆ ಹೊಲಗಳಲ್ಲಿ ಕೆಲಸ ಮಾಡಲು ಕಷ್ಟವಾಗುತ್ತಿದೆ ಎಂದು ಸಂಕಷ್ಟ ತೋಡಿಕೊಂಡರು ರೈತರಾದ ಧರ್ಮಪ್ಪ, ಸತೀಶ್, ನಾಗರಾಜ್.

ನಾಯಿಗಳು ಕಸ ಎಳೆದು ರಸ್ತೆಗೆ ಬಿಡುತ್ತಿವೆ. ಕಸದಲ್ಲಿನ ಬಾಟಲಿ, ಗಾಜು, ಅಪಾಯಕಾರಿ ವಸ್ತುಗಳು ಅಲ್ಲಿ ಓಡಾಡುವ ರೈತರು, ಇತರೆ ಗ್ರಾಮಗಳ ಜನರ ಕಾಲಿಗೆ ಚುಚ್ಚಿ ಅಪಾಯವಾಗುತ್ತಿದೆ. ಸಮಸ್ಯೆ ಬಗೆಹರಿಸುವಂತೆ ಪಂಚಾಯಿತಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಸ್ಪಂದನ ದೊರೆತಿಲ್ಲ ಎಂದು ಗ್ರಾಮಸ್ಥರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.