ADVERTISEMENT

ಸಾಗರ: ಜಾನುವಾರುಗಳೊಂದಿಗೆ ರೈತರ ಪ್ರತಿಭಟನೆ

ಅರಣ್ಯ ಪ್ರದೇಶಕ್ಕೆ ಸಾಕು ಪ್ರಾಣಿಗಳ ಪ್ರವೇಶ ನಿರ್ಬಂಧಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 6:56 IST
Last Updated 29 ಜುಲೈ 2025, 6:56 IST
ಸಾಗರದಲ್ಲಿ ರೈತ ಸಂಘದ ಕಾರ್ಯಕರ್ತರು ಅರಣ್ಯ ಇಲಾಖೆ ಅಧಿಕಾರಿಗೆ ಮನವಿ ಸಲ್ಲಿಸಿದರು
ಸಾಗರದಲ್ಲಿ ರೈತ ಸಂಘದ ಕಾರ್ಯಕರ್ತರು ಅರಣ್ಯ ಇಲಾಖೆ ಅಧಿಕಾರಿಗೆ ಮನವಿ ಸಲ್ಲಿಸಿದರು   

ಸಾಗರ: ಸಾಕು ಪ್ರಾಣಿಗಳನ್ನು ಅರಣ್ಯ ಪ್ರದೇಶದಲ್ಲಿ ಮೇಯಲು ಬಿಡಬಾರದು ಎಂಬ ರಾಜ್ಯ ಸರ್ಕಾರದ ಆದೇಶವನ್ನು ಖಂಡಿಸಿ ಇಲ್ಲಿನ ರೈತ ಸಂಘದ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು. 

ರೈತರು ವಿವಿಧ ಗ್ರಾಮಗಳಿಂದ ದನ, ಕರು, ಹೋರಿ, ಎಮ್ಮೆಗಳನ್ನು ನಗರಕ್ಕೆ ಕರೆತಂದು ಅವುಗಳೊಂದಿಗೆ ಪ್ರತಿಭಟನೆ ನಡೆಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಅರಣ್ಯ ಸಚಿವ ಈಶ್ವರ ಖಂಡ್ರೆ, ಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಮುಖವಾಡ ಧರಿಸಿದ ಪ್ರತಿಭಟನಕಾರರು ಮೆರವಣಿಗೆ ನಡೆಸಿ ಅರಣ್ಯ ಇಲಾಖೆ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. 

ADVERTISEMENT

ರೈತರು ತಮ್ಮ ಸಾಕು ಪ್ರಾಣಿಗಳನ್ನು ಅರಣ್ಯ ಪ್ರದೇಶದಲ್ಲಿ ಮೇಯಲು ಬಿಡಬಾರದು ಎಂಬ ರಾಜ್ಯ ಸರ್ಕಾರದ ಆದೇಶ ತೀರಾ ಅವೈಜ್ಞಾನಿಕವಾಗಿದೆ. ಮಲೆನಾಡು ಸೇರಿದಂತೆ ದಟ್ಟವಾದ ಕಾಡು ಇರುವ ಪ್ರದೇಶಗಳಲ್ಲಿ ಲಾಗಾಯ್ತಿನಿಂದ ಸಾಕು ಪ್ರಾಣಿಗಳು ಅರಣ್ಯದಲ್ಲಿ ಮೇಯುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ. ಸರ್ಕಾರ ತನ್ನ ರೈತ ವಿರೋಧಿ ಆದೇಶವನ್ನು ಹಿಂದಕ್ಕೆ ಪಡೆಯಬೇಕು ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದಿನೇಶ್  ಶಿರವಾಳ ಒತ್ತಾಯಿಸಿದರು. 

ರಾಜ್ಯ ಸರ್ಕಾರ ಗೋಮಾಳಗಳನ್ನು ಎಂಪಿಎಂಗೆ ನೀಡಿರುವ ಆದೇಶವನ್ನು ರದ್ದುಗೊಳಿಸಬೇಕು. ನೆಡುತೋಪು ಸಂಸ್ಕೃತಿಯನ್ನು ಕೈಬಿಟ್ಟು ನೈಸರ್ಗಿಕ ಅರಣ್ಯ ಬೆಳೆಸಲು ಮುಂದಾಗಬೇಕು. ರೈತರ ಮೇಲೆ ದಾಖಲಾಗಿರುವ ವಿವಿಧ ಪ್ರಕರಣಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಅವರು ಆಗ್ರಹಿಸಿದರು. 

ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ವ.ಶಂ.ರಾಮಚಂದ್ರ ಭಟ್, ರೈತ ಸಂಘದ ರಮೇಶ್ ಕೆಳದಿ, ರಾಮಚಂದ್ರಪ್ಪ, ಕುಮಾರಗೌಡ, ಭದ್ರೇಶ್ ಬಾಳಗೋಡು, ಶಿವು ಮೈಲಾರಿಕೊಪ್ಪ, ಚಂದ್ರು ಸಿರಿವಂತೆ, ರಾಮಚಂದ್ರ, ಸುದರ್ಶನ್ ಇದ್ದರು.

ಜಾನುವಾರುಗಳೊಂದಿಗೆ ಪ್ರತಿಭಟನೆ ನಡೆಸಿದ ರೈತ ಸಂಘದ ಕಾರ್ಯಕರ್ತರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.