ಸಾಗರ: ಭತ್ತಕ್ಕೆ ಬೆಂಬಲ ಬೆಲೆ ನೀಡಬೇಕು, ಭಾಗ್ಯಜ್ಯೋತಿ, ಕುಟಿರ ಜ್ಯೋತಿ ಯೋಜನೆಯಡಿ ನೀಡುತ್ತಿರುವ ವಿದ್ಯುತ್ ಕಡಿತಗೊಳಿಸಬಾರದು ಎಂಬ ಬೇಡಿಕೆಯೂ ಸೇರಿ ರೈತರ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಏ.26ರಂದು ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗ್ವೆ ತಿಳಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸರ್ಕಾರ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿಸುವುದಾಗಿ ಆಶ್ವಾಸನೆ ನೀಡಿತ್ತು. ತಾಲ್ಲೂಕು ಕೇಂದ್ರದಲ್ಲಿ ಖರೀದಿ ಕೇಂದ್ರ ಆರಂಭಿಸುವುದಾಗಿ ನೀಡಿದ್ದ ಭರವಸೆ ಈಡೇರಿಲ್ಲ. ಖರೀದಿ ಕೇಂದ್ರ ಆರಂಭಿಸಿರುವ ಕಡೆ ಕೆಲವೇ ರೈತರಿಗೆ ಮಾತ್ರ ಇದರ ಪ್ರಯೋಜನ ದೊರಕಿದೆ’ ಎಂದು ಅವರು ದೂರಿದರು.
ಸರ್ಕಾರ ವಿದ್ಯುತ್ ಖಾಸಗೀಕರಣಕ್ಕೆ ಮುಂದಾಗಿದ್ದು, ಈ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಬಡವರಿಗೆ ವರದಾನವಾಗಿರುವ ಭಾಗ್ಯಜ್ಯೋತಿ, ಕುಟಿರ ಜ್ಯೋತಿ ಯೋಜನೆಯನ್ನು ರದ್ದುಗೊಳಿಸುವ ಹುನ್ನಾರ ನಡೆದಿದೆ. ಪಾರಂಪರಿಕ ಅರಣ್ಯ ವಾಸಿಗಳು, ಶರಾವತಿ ಮುಳುಗಡೆ ಸಂತ್ರಸ್ತರು ಹಕ್ಕುಪತ್ರ ಪಡೆಯಲು ಹಲವು ವರ್ಷಗಳಿಂದ ಕಾಯುತ್ತಿದ್ದು, ಸರ್ಕಾರ ಅವರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಟೀಕಿಸಿದರು.
ತಾಲ್ಲೂಕಿನ ಭಾರಂಗಿ ಹೋಬಳಿಯ ಉರುಳುಗಲ್ಲು ಗ್ರಾಮಕ್ಕೆ ಈವರೆಗೂ ವಿದ್ಯುತ್, ರಸ್ತೆ ಸೌಲಭ್ಯ ದೊರಕಿಲ್ಲ. ಈ ಭಾಗದ ಜನರಿಗೆ ಮೂಲ ಸೌಕರ್ಯ ಒದಗಿಸಲು ಸರ್ಕಾರ ನಿರಾಸಕ್ತಿ ತೋರುತ್ತಿದೆ. ಸಮೀಪದ ಕಾನೂರು ಕೋಟೆಯನ್ನು ಅಭಿವೃದ್ಧಿಪಡಿಸಿ ಗೇರುಸೊಪ್ಪ ಹಾಗೂ ಭಟ್ಕಳಕ್ಕೆ ಇರುವ ಸಂಪರ್ಕ ರಸ್ತೆಯನ್ನು ನಿರ್ಮಿಸಿದರೆ ಆ ಭಾಗದ ಸಮಗ್ರ ಅಭಿವೃದ್ಧಿಯಾಗುತ್ತದೆ. ಈ ಬಗ್ಗೆ ಆಡಳಿತದ ಮೇಲೆ ಒತ್ತಡ ತರುವ ಕೆಲಸವನ್ನು ರೈತ ಸಂಘ ಮಾಡಲಿದೆ ಎಂದರು.
‘ಉರುಳುಗಲ್ಲು ಗ್ರಾಮಸ್ಥ ಲಕ್ಷ್ಮಣ ಹೆಬ್ಬನಕೆರೆ, ಕಳೆದ ಏಳು ದಶಕಗಳಿಂದ ನಮ್ಮ ಹಾಗೂ ಸುತ್ತಮುತ್ತಲ ಗ್ರಾಮಗಳ ಜನರು ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಅಭಯಾರಣ್ಯದ ವ್ಯಾಪ್ತಿಗೆ ನಮ್ಮ ಗ್ರಾಮಗಳನ್ನು ತಂದಿರುವುದರಿಂದ ಅರಣ್ಯ ಕಾಯ್ದೆ ನಮ್ಮ ಪಾಲಿಗೆ ಮುಳುವಾಗಿದೆ’ ಎಂದು ಹೇಳಿದರು.
ಪ್ರಮುಖರಾದ ಮಂಜಪ್ಪ ಹಿರೇನೆಲ್ಲೂರು, ಎನ್.ಡಿ. ವಸಂತಕುಮಾರ್, ರಮೇಶ ಐಗಿನಬೈಲು, ತಮ್ಮಣ್ಣ ಅಕ್ಕಿಮನೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.