ADVERTISEMENT

ಶಿವಮೊಗ್ಗದ: ಹೋಟೆಲ್, ಲಾಡ್ಜ್‌ಗಳತ್ತ ಮುಖಮಾಡದ ಗ್ರಾಹಕರು

ಹೋಟೆಲ್‌ ಉದ್ಯಮಿಗಳಿಗೆ ಆರ್ಥಿಕ ಸಂಕಷ್ಟ

ಅರ್ಚನಾ ಎಂ.
Published 14 ಜೂನ್ 2020, 19:30 IST
Last Updated 14 ಜೂನ್ 2020, 19:30 IST
ಶಿವಮೊಗ್ಗದ ಮಥರಾ ರೆಸಿಡೆನ್ಸಿ
ಶಿವಮೊಗ್ಗದ ಮಥರಾ ರೆಸಿಡೆನ್ಸಿ   

ಶಿವಮೊಗ್ಗ: ಕೋವಿಡ್‌–19ನಿಂದಾಗಿ ಉಂಟಾದ ಲಾಕ್‌ಡೌನ್‌ ಪರಿಣಾಮ ಇಡೀ ಹೋಟೆಲ್‌, ವಸತಿ ನಿಲಯಗಳ (ಲಾಡ್ಜ್‌) ಉದ್ಯಮಕ್ಕೆ ಕಾರ್ಮೋಡ ಕವಿದಂತಾಗಿದೆ.

ಲಾಕ್‌ಡೌನ್‌ನಿಂದ ಸಣ್ಣ ಪ್ರಮಾಣದಿಂದ ಹಿಡಿದು ದೊಡ್ಡ ಪ್ರಮಾಣದ ಹೋಟೆಲ್‌ ಉದ್ಯಮಿಗಳು ಇದೀಗ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತೆ ಮಾಡಿದೆ. ಮುಂದಿರುವ ಸವಾಲಿನ ಜತೆಗೆ ಸದ್ಯದ ಆರ್ಥಿಕ ಸಂಕಷ್ಟವನ್ನು ಹೇಗೆ ಎದುರಿಸಬೇಕೆಂಬ ಬಹುದೊಡ್ಡ ಸವಾಲು ಹೋಟೆಲ್‌ ಉದ್ಯಮಿಗಳಿಗೆ ಮತ್ತು ವಸತಿ ನಿಲಯಗಳ ಮಾಲೀಕರಿಗೆ ಎದುರಾಗಿದೆ.

ಸರ್ಕಾರ ಈಗ ಹೋಟೆಲ್‌ ಹಾಗೂ ವಸತಿ ನಿಲಯಗಳನ್ನು ನಡೆಸಲು ಅನುಮತಿ ನೀಡಿದೆ. ಆದರೆ, ಸದ್ಯದ ಬೆಲೆ ಏರಿಕೆಗೆ ಅನುಗುಣವಾಗಿ ಸರಿದೂಗಿಸಿಕೊಂಡು ಗ್ರಾಹಕರನ್ನು ತೃಪ್ತಿಪಡಿಸುವ ಜತೆಗೆ ಲಾಭದ ನಿರೀಕ್ಷೆ ಕಷ್ಟವಾಗಿದೆ.

ಅಲ್ಲದೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಹೋಟೆಲ್‌ ಆರಂಭವಾದರೂ ಗ್ರಾಹಕರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಹೀಗಾಗಿ ಹೋಟೆಲ್‌ ಉದ್ಯಮದ ಚೇತರಿಕೆ ಉದ್ಯಮಿಗಳಿಗೆ ಸವಾಲಿನ ಕೆಲಸವಾಗಿದೆ.ಉದ್ಯಮಿಗಳು ಕಾರ್ಮಿಕರನ್ನು ಕಾಯ್ದುಕೊಳ್ಳುವ ಭರದಲ್ಲಿ ಊಟ, ವಸತಿ ಹಾಗೂ ಅವರ ಕುಟುಂಬ ನಿರ್ವಹಣೆಗಾಗಿ ಅಪಾರ ಪ್ರಮಾಣದಲ್ಲಿ ಆರ್ಥಿಕ ನಷ್ಟ ಅನುಭವಿಸಿದ್ದಾರೆ.

ADVERTISEMENT

ವಸತಿ ನಿಲಯಗಳು ಖಾಲಿ

ಶಾಲೆಗಳು ಬೇಸಿಗೆ ರಜೆ ಬಿಡುತ್ತಿದ್ದಂತೆ ಹಾಗೂಮಳೆಗಾಲದಲ್ಲಿ ಮಲೆನಾಡಿಗೆ ಲಗ್ಗೆ ಇಡುತ್ತಿದ್ದ ಅನೇಕ ಪ್ರವಾಸಿಗರು ನಗರದಲ್ಲಿರುವ ವಸತಿ ನಿಲಯಗಳಲ್ಲೇ ವಾಸ್ತವ್ಯ ಹೂಡುತ್ತಿದ್ದರು. ಆ ಸಮಯದಲ್ಲಿ ಎಲ್ಲಾ ವಸತಿ ನಿಲಯಗಳು ಭರ್ತಿಯಾಗುತ್ತಿದ್ದವು.

ಈಗ ಕೊರೊನಾ ಭೀತಿಯಿಂದ ವಸತಿ ನಿಲಯಗಳಿಗತ್ತ ಯಾರೂ ಸುಳಿಯುತ್ತಲೇ ಇಲ್ಲ. ಕೊರೊನಾದಿಂದಾಗಿ ನಗರಕ್ಕೆ ಪ್ರವಾಸಿಗರು, ಬೇರೆ ಊರುಗಳಿಂದ ಕೆಲಸದ ನಿಮಿತ್ತ ಕೆಲ ದಿನಗಳಿಂದ ಬರುವವರ ಸಂಖ್ಯೆಯೂ ಇಳಿಮುಖವಾಗಿರುವುದರಿಂದ ವಸತಿ ನಿಲಯಗಳು ಖಾಲಿಯಾಗಿಯೇ ಇವೆ.

‘ಬೇರೆ ರಾಜ್ಯಗಳಿಗೆ ಜಿಲ್ಲೆಗೆ ಬಂದವರನ್ನು ವಸತಿ ನಿಲಯಗಳಲ್ಲಿ ಕ್ವಾರಂಟೈನ್‌ ಇಡಲಾಗುತ್ತಿದೆ. ಆ ಕಾರಣದಿಂದ ವಸತಿ ನಿಲಯಗಳಿಗೆ ಹೋದರೆ ನಮಗೂ ಕೊರೊನಾ ಬರುತ್ತದೆ’ ಎಂದು ಜನರು ಅಲ್ಲಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ.

ಹೋಟೆಲ್‌ ಉದ್ಯಮವು ಪ್ರವಾಸೋದ್ಯಮ, ಆತಿಥ್ಯ ಹಾಗೂ ಟ್ರಾವೆಲ್‌ ಕ್ಷೇತ್ರದೊಂದಿಗೆ ತಳುಕು ಹಾಕಿಕೊಂಡಿವೆ. ಇವು ಒಂದನ್ನೊಂದು ಅವಲಂಬಿಸಿದ್ದು, ಅತ್ಯಧಿಕ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಸುವ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ. ಆದರೆ, ಈಗ ಗ್ರಾಹಕರಿಲ್ಲದೆ ಹೋಟೆಲ್ ಹಾಗೂ ವಸತಿ ನಿಲಯಗಳನ್ನು ನಡೆಸುವುದು ಕಷ್ಟವಾಗಿದೆ. ಕೆಲಸ ಮಾಡುವ ಕಾರ್ಮಿಕರಿಗೆ ವೇತನ ನೀಡುವುದು ಕಷ್ಟವಾಗುತ್ತದೆ.

‘ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೂ ಹೋಟೆಲ್‌ ಮತ್ತು ವಸತಿ ನಿಲಯಗಳಿಗೆ ಈಗ ಬರುವ ಗ್ರಾಹಕರ ಸಂಖ್ಯೆ ಇಳಿಮುಖವಾಗಿದೆ. ದಿನಕ್ಕೆ 3ರಿಂದ 4 ಗ್ರಾಹಕರು ವಸತಿ ನಿಲಯಕ್ಕೆ ಬರುತ್ತಾರೆ. ಅಲ್ಲದೆ ಅವರಿಗೆ ಕರೆಂಟ್, ಬಿಸಿ ನೀರು, ಲಿಫ್ಟ್ ಪೂರೈಸಬೇಕು. ರೂಂ ಬಾಯ್‌ ಬೇಕೇ ಬೇಕು. ಅದಕ್ಕಾಗಿ ₹ 75 ಸಾವಿರದಿಂದ ₹80 ಸಾವಿರ ಖರ್ಚಾಗುತ್ತದೆ. ಆದರೆ, ಆದಾಯ ಅಷ್ಟು ಬರುವುದಿಲ್ಲ. ಈ ಉದ್ಯಮ ನಡೆಸುವುದು ಕಷ್ಟವಾಗುತ್ತಿದೆ’ ಎನ್ನುವುದು ಮಥುರಾ ರೆಸಿಡೆನ್ಸಿ ಮಾಲೀಕ ಎನ್. ಗೋಪಿನಾಥ್ ಅವರ ಅಳಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.