ADVERTISEMENT

ತುಂಗಾ ನದಿಯಲ್ಲಿ ಮೀನುಗಳ ಮಾರಣಹೋಮ

ಅನಧಿಕೃತ ಮೀನುಗಾರರು ನದಿಗೆ ಮೈಲುತುತ್ತಾ ಹಾಕಿರುವ ಶಂಕೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2019, 18:48 IST
Last Updated 25 ಏಪ್ರಿಲ್ 2019, 18:48 IST
ಶಿವಮೊಗ್ಗ ಸಮೀಪದ ತುಂಗಾ ನದಿಯಲ್ಲಿ ಮೀನುಗಳು ಮೃತಪಟ್ಟಿರುವ ಹಿನ್ನೆಲೆಯಲ್ಲಿ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಮತ್ತು ಅಧಿಕಾರಿಗಳು ಪರಿಶೀಲಿಸಿದರು
ಶಿವಮೊಗ್ಗ ಸಮೀಪದ ತುಂಗಾ ನದಿಯಲ್ಲಿ ಮೀನುಗಳು ಮೃತಪಟ್ಟಿರುವ ಹಿನ್ನೆಲೆಯಲ್ಲಿ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಮತ್ತು ಅಧಿಕಾರಿಗಳು ಪರಿಶೀಲಿಸಿದರು   

ಶಿವಮೊಗ್ಗ: ತಾಲ್ಲೂಕಿನ ಮತ್ತೂರು ಮತ್ತುಹೊಸಹಳ್ಳಿ ಭಾಗದ ತುಂಗಾ ನದಿಯಲ್ಲಿ ನೂರಾರು ಮೀನುಗಳು ಮೃತಪಟ್ಟಿದ್ದು, ಅವುಗಳನ್ನು ನೀರಿನಿಂದ ಹೊರತೆಗೆಯುವ ಕಾರ್ಯ ನಡೆಯುತ್ತಿದೆ.

ವಿಷಪ್ರಾಶನದಿಂದ ಮೀನುಗಳು ಮೃತಪಟ್ಟಿರುವ ಸಾಧ್ಯತೆಯಿದ್ದು, ಅವುಗಳನ್ನು ಪರೀಕ್ಷೆಗಾಗಿ ಮಂಗಳೂರಿನ ಮೀನುಗಾರಿಕಾ ಕಾಲೇಜಿಗೆ ಕಳುಹಿಸಲಾಗಿದೆ. ಮಾರಾಟದ ಉದ್ದೇಶದಿಂದ ಕೆಲವು ಅನಧಿಕೃತ ಮೀನುಗಾರರು ತುಂಗಾ ನದಿಯೊಳಗೆ ಮೈಲುತುತ್ತಾ (ಬೋರ್ಡೆಕ್ಸ್) ಮಿಶ್ರಣ ಹಾಕಿ ಮೀನುಗಳನ್ನು ಕೊಂದಿರುವ ಸಾಧ್ಯತೆಯಿದೆ ಎಂದು ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು ತಿಳಿಸಿದರು.

ಸಾಮಾನ್ಯವಾಗಿಕೀಟಗಳಿಂದ ರಕ್ಷಿಸಿಕೊಳ್ಳಲು ಬೋರ್ಡೆಕ್ಸ್ ಮಿಶ್ರಣವನ್ನು ಬೆಳೆ, ಗಿಡ, ಮರಗಳಿಗೆ ಸಿಂಪಡಿಸಲಾಗುತ್ತದೆ. ಇದರಲ್ಲಿ ತಾಮ್ರದ ಸಲ್ಫೇಟ್ ಮತ್ತು ಸುಣ್ಣದ ಅಂಶ ಇರುವುದರಿಂದಮೀನುಗಳು ಸಾವನ್ನಪ್ಪಿರುವ ಸಾಧ್ಯತೆಯಿದೆ. ಈ ಬಗ್ಗೆ ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಶಿವರಾಮೇಗೌಡ, ‘ತುಂಗಾ ನದಿಯಿಂದ ಹೊಸಹಳ್ಳಿ ಗ್ರಾಮದ ನಿವಾಸಿಗಳಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ.ಆದರೆ, ಆರೋಗ್ಯ ಇಲಾಖೆಯ ಅಧಿಕಾರಿಗಳು, ನೀರನ್ನು ಪರೀಕ್ಷೆ ಮಾಡಿ ಬಳಸುವುದರಿಂದ ಯಾವುದೇ ಸಾಂಕ್ರಾಮಿಕ ರೋಗ ಹರಡುವುದಿಲ್ಲ. ಹಾಗಾಗಿ ಗ್ರಾಮಸ್ಥರು ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ’ ಎಂದು ತಿಳಿಸಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.