ADVERTISEMENT

ಶಿವಮೊಗ್ಗ: ಸಂತ್ರಸ್ತೆ ಗಂಗಜ್ಜಿಗೆ ನೀಡಿದ್ದ ಮನೆಗೂ ವಿವಾದದ ಬಿಸಿ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2019, 19:45 IST
Last Updated 5 ಅಕ್ಟೋಬರ್ 2019, 19:45 IST
ಶಿವಮೊಗ್ಗದ ಬೊಮ್ಮನಕಟ್ಟೆಯಲ್ಲಿ ಗಂಗಜ್ಜಿಗೆ ನೀಡಿದ್ದ ಆಶ್ರಯ ಮನೆ.
ಶಿವಮೊಗ್ಗದ ಬೊಮ್ಮನಕಟ್ಟೆಯಲ್ಲಿ ಗಂಗಜ್ಜಿಗೆ ನೀಡಿದ್ದ ಆಶ್ರಯ ಮನೆ.   

ಶಿವಮೊಗ್ಗ: ತುಂಗಾ ಪ್ರವಾಹದಿಂದ ಈಚೆಗೆ ಸಂಕಷ್ಟಕ್ಕೆ ಒಳಗಾಗಿದ್ದಗಂಗಜ್ಜಿ ಅವರಿಗೆ ಶುಕ್ರವಾರ ನೀಡಿದ್ದ ಬೊಮ್ಮನಕಟ್ಟೆಯ ಆಶ್ರಯ ಮನೆ ವಿವಾದಕ್ಕೀಡಾಗಿದೆ.

ಸರ್ಕಾರದಿಂದ ಬರುವ ವೃದ್ಧಾಪ್ಯವೇತನ, ಪುತ್ರನ ಅಂಗವಿಕಲ ಮಾಸಾಶನದಲ್ಲೇ ಜೀವನ ಸಾಗಿಸುತ್ತಿದ್ದ ಅವರು ಈಚೆಗೆ ಸುರಿದ ಮಳೆ, ಉಕ್ಕಿ ಹರಿದ ತುಂಗೆಯ ಆರ್ಭಟಕ್ಕೆ ಸಂಕಷ್ಟಕ್ಕೆ ತುತ್ತಾಗಿದ್ದರು.

ವಿವಿಧ ಸಂಘಟನೆಗಳು, ಪತ್ರಕರ್ತರ ಸಹಕಾರದಿಂದ ಜಿಲ್ಲಾಡಳಿತ ಅವರಿಗೆ ಮನೆ ಮಂಜೂರು ಮಾಡಿತ್ತು. ಶುಕ್ರವಾರ ತಹಶೀಲ್ದಾರ್ ಗಿರೀಶ್ ನೇತೃತ್ವದಲ್ಲಿ ಗೃಹ ಪ್ರವೇಶವೂ ನಡೆದಿತ್ತು. ಪುತ್ರ ಶ್ರೀನಿವಾಸ್‌ ಜತೆ ಅಲ್ಲಿ ತಂಗಿದ್ದರು.

ಗೃಹಪ್ರವೇಶ ನಡೆದ ರಾತ್ರಿಯೇ ಅಲ್ಲಿಗೆ ಬಂದ ಮಲವಗೊಪ್ಪದ ಗಿರಿಜಮ್ಮ ಇದು ನಮಗೆ ಹಂಚಿಕೆಯಾದ ಮನೆ ಎಂದು ಪತಿ ಹರೀಶ್ ಹಾಗೂ ಮಗಳು ಚೈತ್ರಾ ಜತೆ ಬಂದು ಠಿಕಾಣಿ ಹೂಡಿದ್ದಾರೆ.

ADVERTISEMENT

2010–11ರಲ್ಲಿ ನಗರ ಪಾಲಿಕೆ ಆಶ್ರಯ ಸಮಿತಿ ಎಚ್‌. ಬ್ಲಾಕ್‌ನ ಆ ಮನೆಯನ್ನು ಗಿರಿಜಮ್ಮ ಅವರಿಗೆ ಹಂಚಿಕೆ ಮಾಡಿತ್ತು. ಆದರೂ ಗಿರಿಜಮ್ಮ ಕುಟುಂಬ ಅಲ್ಲಿಗೆ ಬಂದಿರಲಿಲ್ಲ. ಮೂರು ತಿಂಗಳ ಹಿಂದೆ ನೋಟೀಸ್ ನೀಡಿ ಅವರಿಗೆ ನಿಡಿದ್ದ ಹಕ್ಕುಪತ್ರ ರದ್ದು ಮಾಡಲಾಗಿತ್ತು. ಹಾಗಾಗಿ, ಜಿಲ್ಲಾಧಿಕಾರಿ ಸೂಚನೆಯಂತೆ ಆ ಮನೆಯನ್ನು ಗಂಗಜ್ಜಿಗೆ ನೀಡಿದ್ದರು.

‘ಹಂಚಿಕೆ ರದ್ದಾಗಿರುವ ಕಾರಣ ಗಿರಿಜಮ್ಮ ಅವರಿಗೆ ಮನೆಯ ಹಕ್ಕು ಇಲ್ಲ. ಅದು ಗಂಗಜ್ಜಿಗೆ ನೀಡಲಾಗಿದೆ. ಅಕ್ರಮ ಪ್ರವೇಶ ಮಾಡಿದ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ತಹಶೀಲ್ದಾರ್ ಗಿರೀಶ್ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.