ADVERTISEMENT

ಕಾಡಾನೆ ಹಿಡಿಯಲು ಬಂದ ಸಕ್ರೆಬೈಲು ಗಜಪಡೆ

ಮಂಡಗದ್ದೆ, ಕೀಗಡಿ ಗ್ರಾಮ ಸುತ್ತಮುತ್ತ ಮರಿ ಕಾಡಾನೆ ಹಾವಳಿ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2022, 6:30 IST
Last Updated 12 ಮಾರ್ಚ್ 2022, 6:30 IST
ತೀರ್ಥಹಳ್ಳಿ ತಾಲ್ಲೂಕಿನ ಮಂಡಗದ್ದೆ ಸಮೀಪದ ಕೀಗಡಿ ಗ್ರಾಮದಲ್ಲಿ ಕಾಣಿಸಿಕೊಂಡಿದ್ದ ಮರಿ ಕಾಡಾನೆಯನ್ನು ಹಿಡಿಯಲು ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಸಾಗರ್‌, ಸೋಮಣ್ಣ, ಭಾನುಮತಿ ಆನೆಗಳು.
ತೀರ್ಥಹಳ್ಳಿ ತಾಲ್ಲೂಕಿನ ಮಂಡಗದ್ದೆ ಸಮೀಪದ ಕೀಗಡಿ ಗ್ರಾಮದಲ್ಲಿ ಕಾಣಿಸಿಕೊಂಡಿದ್ದ ಮರಿ ಕಾಡಾನೆಯನ್ನು ಹಿಡಿಯಲು ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಸಾಗರ್‌, ಸೋಮಣ್ಣ, ಭಾನುಮತಿ ಆನೆಗಳು.   

ಶಿವಮೊಗ್ಗ: ತೀರ್ಥಹಳ್ಳಿ ತಾಲ್ಲೂಕಿನ ಮಂಡಗದ್ದೆ ಭಾಗದ ಕೀಗಡಿ ಶೆಟ್ಟಿಹಳ್ಳಿ ಅರಣ್ಯ ಪ್ರದೇಶದಲ್ಲಿ ಹಲವು ದಿನಗಳಿಂದ ಜನರಿಗೆ ಪ್ರಾಣಭಯ ಹುಟ್ಟಿಸಿದ್ದ ಮರಿ ಕಾಡಾನೆಯನ್ನು ಹಿಡಿಯಲು ಸಕ್ರೆಬೈಲು ಆನೆಬಿಡಾರದ ಗಜಪಡೆ ವಾರದಿಂದ ಕಾರ್ಯಾಚರಣೆಯಲ್ಲಿ
ಭಾಗಿಯಾಗಿದೆ.

ಮಂಡಗದ್ದೆ ಸಮೀಪ ಇರುವ ಕೀಗಡಿ ಭಾಗದಲ್ಲಿ ಆಗಾಗ ಆನೆ ಕಾಣಿಸಿಕೊಳ್ಳುತ್ತಿತ್ತು. ರೈತರ ತೋಟ, ಗದ್ದೆಗಳಿಗೆ ಲಗ್ಗೆಯಿಟ್ಟು ಅಪಾರ ಪ್ರಮಾಣದ ಬೆಳೆ ಹಾನಿ ಮಾಡಿದೆ. ಕಾಡಿನ ಭಾಗದ ಅಲ್ಲಲ್ಲಿ ಒಂಟಿ ಮನೆಗಳಲ್ಲಿ ನೆಲೆಸಿರುವ ಜನರಿಗೆ ಕಾಡಾನೆ ಹಾವಳಿ ಭಯ ಹುಟ್ಟುಸಿದೆ. ಹೀಗಾಗಿ ಕಾಡಾನೆಯನ್ನು ಸೆರೆ ಹಿಡಿಯುವಂತೆ ಸ್ಥಳೀಯರು ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಮನವಿ ಮಾಡಿದ್ದರು.

ಗೃಹ ಸಚಿವರ ಆದೇಶದಂತೆ ವನ್ಯಜೀವಿ ವಿಭಾಗದ ಡಿಎಫ್‌ಒ ಐ.ಎಂ. ನಾಗರಾಜ್‌ ಹಾಗೂ ವನ್ಯಜೀವಿ ವೈದ್ಯ ಡಾ.ವಿನಯ್‌ ನೇತೃತ್ವದ ತಂಡ ಕಾಡಾನೆ ಹಿಮ್ಮೆಟ್ಟಿಸಲು ವಾರದಿಂದ ಕಾರ್ಯಾಚರಣೆನಡೆಯುತ್ತಿದೆ.

ADVERTISEMENT

ಕಾಡಾನೆ ಕಾಣುತ್ತಿಲ್ಲ: ಮರಿ ಕಾಡಾನೆಯನ್ನು ಹಿಮ್ಮೆಟ್ಟಿಸಲು ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಸಾಗರ್‌, ಸೋಮಣ್ಣ, ಭಾನುಮತಿ ಆನೆಗಳು ಭಾಗಿಯಾಗಿವೆ. ಕೀಗಡಿ ಆ್ಯಂಟಿ ಪೋಚಿಂಗ್‌ ಕ್ಯಾಂಪ್‌ನಲ್ಲಿಯೇ ಸಾಕಾನೆಗಳಿಗೆ ತಾತ್ಕಾಲಿಕ ಶಿಬಿರ ಮಾಡಲಾಗಿದೆ.

ಎಂಟು ಜನರ ಸಿಬ್ಬಂದಿಯ ತಂಡ ಇಲ್ಲಿಯೇ ಬೀಡುಬಿಟ್ಟು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಕಾರ್ಯಾಚರಣೆ ಮಾಡುತ್ತಿದೆ. ಕಾಡಾನೆ ಸಾಗಿದ ಮಾರ್ಗದಲ್ಲಿ ನಿತ್ಯವೂ ಸಂಚರಿಸಲಾಗುತ್ತಿದೆ. ಸಾಕಾನೆಗಳು ಕಾಡಿಗಿಳಿಯುತ್ತಿದ್ದಂತೆ ಕಾಡಾನೆ ಅಲ್ಲಿಂದ ಓಡಿ ಹೋಗಿದೆ. ವಾರದಿಂದ ಕಾರ್ಯಚಾರಣೆಯಲ್ಲಿ ಎಲ್ಲಿಯೂ ಕಾಡಾನೆ ಕಂಡಿಲ್ಲ.

ಈಗಾಗಲೇ ಸ್ಥಳೀಯರೊಂದಿಗೆ ಮಾತುಕತೆ ನಡೆಸಲಾಗಿದೆ. ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡುವ ಬಗ್ಗೆ ತಿಳಿಸಿದ್ದೇವೆ. ಇನ್ನೂ ಮೂರು ದಿನ ಕಾರ್ಯಚರಣೆ ಮಾಡಲಾಗುವುದು ಎಂದು ವನ್ಯಜೀವಿ ವಿಭಾಗದ ಡಿಎಫ್‌ಒ ಐ.ಎಂ. ನಾಗರಾಜ್‌ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.