ಶಿವಮೊಗ್ಗ ತಾಲ್ಲೂಕು ಪಂಚಾಯ್ತಿ ನೂತನ ಕಚೇರಿಯ ಕಟ್ಟಡವನ್ನು ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್.ಬಂಗಾರಪ್ಪ ಉದ್ಘಾಟಿಸಿದರು
ಶಿವಮೊಗ್ಗ: ಅರಣ್ಯ ಭಾಗದಲ್ಲಿ ಬಹು ಹಿಂದಿನಿಂದಲೂ ಸಾಗುವಳಿ ಮಾಡಿಕೊಂಡು ಬರುತ್ತಿರುವ ರೈತರಿಗೆ ತೊಂದರೆ ಕೊಡದಂತೆ, ಯಾವುದೇ ಕಾರಣಕ್ಕೂ ಅವರನ್ನು ಒಕ್ಕಲೆಬ್ಬಿಸದಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಅರಣ್ಯ, ಲೋಕೋಪಯೋಗಿ, ಕೆಆರ್‌ಐಡಿಎಲ್, ನೀರಾವರಿ ಇಲಾಖೆಗಳ ಪ್ರಗತಿ ಪರಿಶೀಲಿಸಿ ಮಾತನಾಡಿದ ಅವರು, ‘ರೈತರಿಗೆ ನೋಟಿಸ್ ಕೊಡಬೇಡಿ. ಬದಲಿಗೆ ಅವರ ಪರವಾಗಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪುಗಳನ್ವಯ ನಡೆದುಕೊಳ್ಳಿ, ಹೊಸದಾಗಿ ಒತ್ತುವರಿಗೆ ಅವಕಾಶ ಮಾಡಿಕೊಡಬೇಡಿ ಎಂದು ತಿಳಿಸಿದರು.
1978ರ ಏಪ್ರಿಲ್ 27ರ ಪೂರ್ವದ ಅರಣ್ಯ ಒತ್ತುವರಿ ಸಕ್ರಮಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ ಅವರು, ಸರ್ಕಾರದ ವಿವಿಧ ಕಾಯ್ದೆ ಹಾಗೂ ನಿಯಮಗಳ ಅಡಿಯಲ್ಲಿ ಮಂಜೂರು ಮಾಡಲಾದ ರೈತರ ಸಾಗುವಳಿ/ವಸತಿ ಭೂಮಿಯನ್ನು ಅರಣ್ಯ ಭೂಮಿ ಇಂಡೀಕರಣ ಪ್ರಸ್ತಾವನೆಯಿಂದ ಕೈಬಿಡುವ ಸಂಬಂಧ ಕೈಗೊಂಡ ಕ್ರಮದ ಬಗ್ಗೆ ವರದಿ ನೀಡುವಂತೆ ಸೂಚಿಸಿದರು.
ಸಚಿವರು, ಜಿಲ್ಲೆಯ ಎಲ್ಲ ರಾಜ್ಯ ಹೆದ್ದಾರಿ, ಮುಖ್ಯ ರಸ್ತೆಗಳನ್ನು ನವೆಂಬರ್ ಅಂತ್ಯದೊಳಗೆ ಮತ್ತು ಇತರೆ ಎಲ್ಲ ರಸ್ತೆಗಳನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಮಳೆ ಮುಗಿದ ತಕ್ಷಣ ರಸ್ತೆ ಗುಂಡಿಗಳ ಮುಚ್ಚಬೇಕು. ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ಗುಂಡಿಗಳಿಂದಾಗಿ ರಸ್ತೆ ಅಪಘಾತಗಳು ಹೆಚ್ಚುತ್ತಿದ್ದು, ಸಾವು-ನೋವು ಸಂಭವಿಸುತ್ತಿದೆ. ಶೀಘ್ರ ಗುಂಡಿಗಳ ಮುಚ್ಚಬೇಕು. ರಸ್ತೆಯ ತುದಿ ಹಾಗೂ ಮಧ್ಯಭಾಗ ಮಾರ್ಕಿಂಗ್ ಮಾಡಬೇಕು ಎಂದು ಸೂಚಿಸಿದರು. ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಸಾರ್ವಜನಿಕರಿಗೂ ಅರಿವು ಮೂಡಿಸುವಂತೆ ಎಸ್ಪಿಗೆ ಹೇಳಿದರು.
ಸೊರಬ ತಾಲ್ಲೂಕಿನ ಗುಡುವಿ, ಯಡಗೊಪ್ಪ, ದಂಡಾವತಿ ಮತ್ತು ವರದಾ ನದಿಗಳಿಗೆ ಅಡ್ಡಲಾಗಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸುವ ₹160 ಕೋಟಿ ಮೊತ್ತದ ಕಾಮಗಾರಿ ಶೀಘ್ರದಲ್ಲೇ ಪ್ರಾರಂಭಿಸಬೇಕು. ಕಾಲುಸಂಕಗಳ ಕಾಮಗಾರಿ ಸಹ ಕೈಗೆತ್ತಿಕೊಳ್ಳಬೇಕು. ಅಧಿಕಾರಿಗಳ ನಡುವೆ ಸಮನ್ವಯತೆ ಇದ್ದಲ್ಲಿ ಕಾಮಗಾರಿ ಕ್ಷಿಪ್ರಗತಿಯಲ್ಲಿ ನಡೆಯಲು ಸಾಧ್ಯ. ಎಲ್ಲರೂ ಒಂದು ತಂಡವಾಗಿ ಸಮನ್ವಯದೊಂದಿಗೆ ಕೆಲಸ ಮಾಡಬೇಕು ಎಂದರು.
ಸೊರಬ ತಾಲ್ಲೂಕು ಮಾವಿನಹೊಳೆ, ಕೆರೆಹಳ್ಳಿ, ಜಂಗಿನಕೊಪ್ಪ ಗ್ರಾಮಗಳಲ್ಲಿ ವರದಾ ನದಿಗೆ ಅಡ್ಡಲಾಗಿ ಬ್ರಿಡ್ಜ್ ಕಮ್ ಬ್ಯಾರೇಜ್ ನಿರ್ಮಾಣ ಕಾಮಗಾರಿ ಕುರಿತು ಮಾಹಿತಿ ಪಡೆದ ಸಚಿವರು, ಗ್ರಾಮೀಣ ಭಾಗದ ಮನೆಗಳಿಗೆ ಹಕ್ಕುಪತ್ರ ನೀಡುವುದು ಹಾಗೂ ನಗರ ಪ್ರದೇಶದಲ್ಲಿನ ಕೊಳಚೆ ಪ್ರದೇಶಗಳಲ್ಲಿನ ಮನೆಗಳಿಗೆ 94 ಸಿ ಮತ್ತು ಸಿಸಿ ನೀಡುವ ಕುರಿತು ಪರಿಶೀಲನೆ ನಡೆಸಬೇಕು ಎಂದು ತಿಳಿಸಿದರು.
ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಮಲೆನಾಡು ಭಾಗದಲ್ಲಿ ರೈತನ್ನು ಒಕ್ಕಲೆಬ್ಬಿಸುವ ಸಂಬಂಧ ನೋಟಿಸ್ ನೀಡಲಾಗುತ್ತಿದೆ. ಕೆಲವೆಡೆ ತೊಂದರೆ ಕೊಡಲಾಗಿದೆ. ಅದು ಸರಿಯಾದ ಕ್ರಮವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಿಸಿಎಫ್ ಹನುಮಂತಪ್ಪ ಮಾತನಾಡಿ, ಪಿಎಫ್ ಮತ್ತು ಎಂಎಫ್ ಪ್ರಕರಣ ಕಿರು ಅರಣ್ಯ ವ್ಯಾಪ್ತಿಗೆ ಬರುತ್ತವೆ. ಅವುಗಳನ್ನು ಪರಿಹರಿಸಬಹುದು. ಈ ಸಂಬಂಧ ಜಿಲ್ಲೆಯಲ್ಲಿ 375 ಅಧಿಸೂಚನೆಗಳಿವೆ ಎಂದು ತಿಳಿಸಿದರು.
ಶೈಕ್ಷಣಿಕ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯಲ್ಲಿ ಶಿವಮೊಗ್ಗ ಜಿಲ್ಲೆ 6ನೇ ಸ್ಥಾನದಲ್ಲಿದೆ. ಶೇ 96ರಷ್ಟು ಸಮೀಕ್ಷೆ ಮುಗಿದಿದೆ. ನಗರದಲ್ಲಿ ಇನ್ನು 8000 ಮನೆ ಹಾಗೂ ಜಿಲ್ಲೆಯಲ್ಲಿ 15 ಸಾವಿರ ಮನೆಗಳು ಸಮೀಕ್ಷೆಗೆ ಬಾಕಿ ಇದೆ.ಎಸ್. ಮಧು ಬಂಗಾರಪ್ಪ ಜಿಲ್ಲಾ ಉಸ್ತುವಾರಿ ಸಚಿವ
ತಾ.ಪಂ: ₹1.72 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡ
ಶಿವಮೊಗ್ಗ ತಾಲ್ಲೂಕು ಪಂಚಾಯ್ತಿ ನೂತನ ಕಟ್ಟಡವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್.ಬಂಗಾರಪ್ಪ ಲೋಕಾರ್ಪಣೆ ಮಾಡಿದರು. ಈ ವೇಳೆ ಕಾರ್ಯಪಾಲಕ ಎಂಜಿನಿಯರ್ ಬಿ.ಎನ್. ಮಂಜುನಾಥ್ ಮಾತನಾಡಿ ತಾ.ಪಂ. ಕಟ್ಟಡಕ್ಕೆ ₹2 ಕೋಟಿ ಮೊತ್ತ ಅನುಮೋದನೆಗೊಂಡಿತ್ತು. ₹1.72 ಕೋಟಿ ವೆಚ್ಚದಲ್ಲಿಲಿ ಕಾಮಗಾರಿ ಪೂರ್ಣಗೊಳಿಸಲಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.