ADVERTISEMENT

ಶಿವಮೊಗ್ಗ: ಶಾಲಾ ಗೇಣಿದಾರರಿಗೆ ಭೂ ಹಕ್ಕು ನೀಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2020, 10:41 IST
Last Updated 27 ಅಕ್ಟೋಬರ್ 2020, 10:41 IST
ಮಾಜಿ ಶಾಸಕ ಬಿ.ಸ್ವಾಮಿರಾವ್‌
ಮಾಜಿ ಶಾಸಕ ಬಿ.ಸ್ವಾಮಿರಾವ್‌    

ಶಿವಮೊಗ್ಗ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಗೇಣಿ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವ ಭರವಸೆ ನೀಡಿದ್ದಾರೆ ಎಂದು ರಾಜ್ಯಭೂ ವಿದ್ಯಾದಾನದ ಶಾಲಾ ಜಮೀನು ಗೇಣಿದಾರರ ಹೋರಾಟ ಸಮಿತಿ ಕಾರ್ಯಾಧ್ಯಕ್ಷ, ಮಾಜಿ ಶಾಸಕ ಬಿ.ಸ್ವಾಮಿರಾವ್‌ ಹೇಳಿದರು.

ಶಾಲಾ ಜಮೀನು ಗೇಣಿದಾರರಿಗೆ ಹಕ್ಕುಪತ್ರ ನೀಡಬೇಕು ಎಂದು ಹೋರಾಟ ಸಮಿತಿ ಮುಖ್ಯಮಂತ್ರಿಗೆ ಮನವಿ ಮಾಡಿತ್ತು. ಶಿಕ್ಷಣ, ಕಂದಾಯ, ಕಾನೂನು ಸಚಿವರ ಸಭೆ ಕರೆದು ಚರ್ಚಿಸಿದ ನಂತರ ಬೇಡಿಕೆಗೆ ಈಡೇರಿಸುವ ಭರವಸೆ ನೀಡಿದ್ದಾರೆ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

1956ರಲ್ಲಿ ಕೆಂಗಲ್ ಹನುಮಂತಯ್ಯ ಅವರು ಮುಖ್ಯಮಂತ್ರಿಯಾಗಿದ್ದರು. ಆಗ ಶಾಲೆಗಳ ಅಭಿವೃದ್ಧಿಗೆ ಭೂಮಿ ದಾನ ನೀಡುವಂತೆ ಕರೆ ಕೊಟ್ಟಿದ್ದರು. ಅವರ ಮನವಿಗೆ ಸ್ಪಂದಿಸಿದ ದಾನಿಗಳು ರಾಜ್ಯದಾಧ್ಯಂತ ಸುಮಾರು 10 ಸಾವಿರ ಎಕರೆ ಭೂಮಿಯನ್ನು ಶಾಲೆಗಳಿಗೆ ದಾನ ನೀಡಿದ್ದರು. ಶಿವಮೊಗ್ಗ ಜಿಲ್ಲೆಯಲ್ಲೂ 1,570 ಎಕರೆ ಜಮೀನು ಸರ್ಕಾರಿ ಶಾಲೆಗಳಿಗೆ ದಾನವಾಗಿ ನೀಡಲಾಗಿತ್ತು ಎಂದು ವಿವರ ನೀಡಿದರು.

ADVERTISEMENT

ಕ್ರಮೇಣ ಶಾಲೆಗಳ ಅಭಿವೃದ್ಧಿ ಸಮಿತಿಗಳು, ಊರಿನ ಮುಖಂಡರು ಸೇರಿ ಶಾಲೆಗಳಿಗೆ ದಾನವಾಗಿ ಬಂದ ಜಮೀನು ಗೇಣಿ ನೀಡಿದ್ದರು. ಗೇಣಿ ಮೂಲಕ ಬಂದ ಉತ್ಪನ್ನದ ಕೆಲ ಭಾಗವನ್ನು ಶಾಲೆಗೆ ಬಳಸಿಕೊಳ್ಳಲಾಗುತ್ತಿತ್ತು. ಕಾಲಾಂತರದಲ್ಲಿ ಎಲ್ಲ ಜಮೀನು ರಾಜಪ್ರಮುಖರ ಹೆಸರಿಗೆ ಖಾತೆ ಮಾಡಲಾಗಿತ್ತು. ‘ಉಳುವವನೇ ಭೂ ಒಡೆಯ’ ಸಿದ್ದಾಂತದ ಅಡಿಯಲ್ಲಿ ಗೇಣಿ ಸಾಗುವಳಿದಾರರಿಗೆ ಭೂಮಿ ನೀಡಲಾಯಿತು. ಆದರೆ, ಶಾಲಾ ಜಮೀನು ಗೇಣಿ ಮಾಡುತ್ತಿದ್ದವರಿಗೆ ಹಕ್ಕು ಸಿಗಲಿಲ್ಲ. ಸರ್ಕಾರಕ್ಕೆ ಹೋರಾಟ ಸಮಿತಿ ಮನವಿ ಮಾಡಿತ್ತು. ಹೋರಾಟ ನಡೆಸಿತ್ತು. ಇಂದಿಗೂ ಸಮಸ್ಯೆ ಬಗೆಹರಿದಿಲ್ಲ ಎಂದು ವಿವರ ನೀಡಿದರು.

ಹೋರಾಟ ಸಮಿತಿಯ ಅಧ್ಯಕ್ಷ ಕಲ್ಲೂರು ಮೇಘರಾಜ್ ಮಾತನಾಡಿ, ಶಾಲೆಗಳಿಗೆ ದಾನವಾಗಿ ನೀಡಿದ ಜಮೀನುಗಳ ಮಾಹಿತಿ ಯಾರಿಗೂ ಇಲ್ಲ. ಇಂದಿಗೂ ಶಾಲಾ ಜಮೀನುಗಳ ಖಾತೆಯಲ್ಲಿ ರಾಜಪ್ರಮುಖರ ಹೆಸರು ಇದೆ. ಸರ್ಕಾರಿ ಶಾಲೆಗಳು ಉತ್ತಮ ಸ್ಥಿತಿಯಲ್ಲಿವೆ. ಜಮೀನುಗಳಿಂದ ಯಾವ ವರಮಾನವೂ ಇಲ್ಲ. ಹಾಗಾಗಿ ಆ ಜಮೀನುಗಳನ್ನು ಯಾರು ಗೇಣಿ ಮಾಡುತ್ತಿದ್ದಾರೋ ಅವರಿಗೆ ನೀಡಬೇಕು. ಭೂ ಒಡೆತನದ ಹಕ್ಕು ಕೊಡಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷ ಕಲ್ಲೂರು ವೀರಪ್ಪ, ಉಪಾಧ್ಯಕ್ಷ ಪಿ.ಡಿ.ಮಂಜುನಾಥ್, ಚಿಕ್ಕಮರಸ ಮಲ್ಲೇಶಪ್ಪ, ಎಚ್.ಎಂ.ಸಂಗಯ್ಯ, ಸುವರ್ಣಾ ನಾಗರಾಜ್, ಮಂಜಪ್ಪ, ಚಂದ್ರಶೇಖರ್, ರಾಮಕೃಷ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.