ತೀರ್ಥಹಳ್ಳಿ: ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ಕೈಗೆತ್ತಿಕೊಂಡಿರುವ ಕಾಮಗಾರಿ ಮಲೆನಾಡಿನ ನವಿರುತನಕ್ಕೆ ಮಾದರಿ ಆಗಿದ್ದ ತೀರ್ಥಹಳ್ಳಿ ತಾಲ್ಲೂಕನ್ನು ಹಿಂಡಿ–ಹಿಪ್ಪೆ ಮಾಡುತ್ತಿದೆ. ಇಲ್ಲಿನ ಕಾಡು–ಗುಡ್ಡಗಳು ಅಪ್ಪಚ್ಚಿ ಆಗುತ್ತಿವೆ. ಅರಣ್ಯ, ಕಂದಾಯ ವರ್ಗೀಕೃತ ಪ್ರದೇಶದಲ್ಲಿನ ಸಾವಿರಾರು ಮರಗಳು ಧರೆಗುರುಳುತ್ತಿವೆ.
ತೀರ್ಥಹಳ್ಳಿಯ ಹೆಬ್ಬಾಗಿಲು ಭಾರತೀಪುರದಲ್ಲಿ ₹56 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಮೇಲ್ಸೇತುವೆ (ಪ್ಲೈ ಓವರ್) ಸುತ್ತಮುತ್ತಲಿನ 300 ಮೀಟರ್ ವ್ಯಾಪ್ತಿಯಲ್ಲಿ ಮಂಗಳವಾರ ಭಾರೀ ಮಳೆಗೆ ಗುಡ್ಡ ಕುಸಿತ ಆಗಿದೆ. ಅಲ್ಲದೇ ಗುಡ್ಡದಲ್ಲಿದ್ದ ಅಪರೂಪದ ಮರ, ಗಿಡಗಳು ಧರೆಗುರುಳಿವೆ.
₹537.47 ಕೋಟಿ ವೆಚ್ಚದಲ್ಲಿ ಶಿವಮೊಗ್ಗ-ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ 169 ಮಾರ್ಗದ ವಿಸ್ತರಣೆ ಕಾಮಗಾರಿ ಪ್ರಕ್ರಿಯೆ ಆರಂಭಗೊಂಡಿದೆ. ಇದರಲ್ಲಿ ರಾಷ್ಟ್ರೀಯ ಹೆದ್ದಾರಿ 169 ‘ಎ’ ಮಾರ್ಗದ ಮೇಗರವಳ್ಳಿಯಿಂದ ಆಗುಂಬೆವರೆಗೆ ರಸ್ತೆ ವಿಸ್ತರಣೆ ಕಾಮಗಾರಿಗೆ ₹ 96.2 ಕೋಟಿ, ಕೋಣಂದೂರು ಚತುಷ್ಪತ ರಸ್ತೆ ₹25 ಕೋಟಿ, ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿ ₹8 ಕೋಟಿ ಮಂಜೂರಾಗಿದೆ.
ಮೇಳಿಗೆ ರಸ್ತೆಯ ಹೆಡಗೆದಿಬ್ಬ, ಕುಪ್ಪಳಿ-ಹಿರೇಕೇರೂರು, ಕೆಸರೆ-ಚಿಟ್ಟೇಬೈಲು ಬೈಪಾಸ್ ರಸ್ತೆ ಅಭಿವೃದ್ಧಿ ಪ್ರಕ್ರಿಯೆ ನಡೆಯುತ್ತಿದೆ. ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಕಾಮಗಾರಿಗೆ ಮಣ್ಣು ಸಂಗ್ರಹಣೆ, ಸಾರಿಗೆ ವ್ಯವಸ್ಥೆಗೆ ಅನುಕೂಲವಾಗುವಂತೆ ಗುಡ್ಡ ಕಡಿಯುವ ಪ್ರಕ್ರಿಯೆ ಅಲ್ಲಲ್ಲಿ ಆರಂಭಗೊಂಡಿದೆ. ವಿವಿಧ ರಸ್ತೆ ವಿಸ್ತರಣೆ ಕಾಮಗಾರಿಗೆ ಅಂದಾಜು 50ಕ್ಕೂ ಹೆಚ್ಚು ಗುಡ್ಡಗಳು ಧರೆಗುರುಗಳಿವೆ.
ಕೃಷಿ ಜಮೀನು, ಮನೆ, ಗ್ರಾಮಠಾಣ, ನೆಡುತೋಪು, ಅರಣ್ಯ ಪ್ರದೇಶದಲ್ಲಿ ರಸ್ತೆಯನ್ನು ನೇರಗೊಳಿಸಿ ದೂರವನ್ನು ಕಡಿತಗೊಳಿಸುವ ಕಾಮಗಾರಿ ಎಗ್ಗಿಲ್ಲದೆ ಸಾಗಿದೆ.
ಭಾರತೀಪುರ ಫ್ಲೈ ಓವರ್ ಕಾಮಗಾರಿಗೆ ಕೇಂದ್ರ ಸರ್ಕಾರದ ಅರಣ್ಯ ಪೂರ್ವಾನುಮತಿ (ಎಫ್‌ಸಿ) ಪಡೆದುಕೊಳ್ಳಲಾಗಿದೆ. ಗುಡ್ಡ ಕುಸಿತದ ಸಂಬಂಧ ಪರಿಶೀಲನೆ ನಡೆಸಲಾಗುವುದು. ರಾಷ್ಟ್ರೀಯ ಹೆದ್ದಾರಿ 169 169 ‘ಎ’ ಮಾರ್ಗದಲ್ಲಿ ಸದ್ಯ ಕಂದಾಯ ಜಾಗದಲ್ಲಿ ಕಾಮಗಾರಿ ನಡೆಯುತ್ತಿದೆಇಶಿವಶಂಕರ್ ಶಿವಮೊಗ್ಗ ಡಿಎಫ್‌ಒ
ಕಾಮಗಾರಿಗಳ ಹಿಂದೆ ಗುಡ್ಡದ ಮಣ್ಣು ತೆಗೆಯುವ ಮೋಸ ಅಡಗಿದೆ. ಗುತ್ತಿಗೆದಾರರು ಎಂಜಿನಿಯರ್ ದುರಾಲೋಚನೆ ದುರಂತಕ್ಕೆ ಕಾರಣವಾಗುತ್ತಿದೆ. ಮಳೆನಾಡಿನ ಭೌಗೋಳಿಕ ವೈಶಿಷ್ಟ್ಯತೆಗೆ ಅನುಗುಣವಾಗಿ ಯೋಜನೆ ರೂಪುಗೊಳ್ಳುತ್ತಿಲ್ಲಕಂಬಳಿಗೆರೆ ರಾಜೇಂದ್ರ ರೈತ ಮುಖಂಡ
ಶಾಸಕರು ಕ್ಷೇತ್ರದ ಅಭಿವೃದ್ಧಿಗೆ ತಂದಿರುವ ಅನುದಾನ ಅವೈಜ್ಞಾನಿಕ ಕಾಮಗಾರಿಗೆ ದುರ್ಬಳಕೆಯಾಗಿದೆ. ಲೆಕ್ಕವಿಲ್ಲದಷ್ಟು ಗುಡ್ಡಗಳು ನೆಲಸಮಗೊಳ್ಳುತ್ತಿದೆ. ಹೆದ್ದಾರಿಯಲ್ಲಿ ಆಗಿರುವ ಕಳಪೆ ಕಾಮಗಾರಿ ಬಗ್ಗೆ ಸರ್ಕಾರ ತನಿಖೆ ನಡೆಸಬೇಕುಪಣಿರಾಜ್ ಕಟ್ಟೇಹಕ್ಕಲು ಶೇಡ್ಗಾರು ಗ್ರಾ.ಪಂ. ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.