ಶಿವಮೊಗ್ಗ: ‘2041ರ ವೇಳೆಗೆ ಶಿವಮೊಗ್ಗ- ಭದ್ರಾವತಿ ನಗರಗಳ ಜನಸಂಖ್ಯೆ ಗಮನದಲ್ಲಿಟ್ಟುಕೊಂಡು ನಗರಾಭಿವೃದ್ಧಿ ವ್ಯಾಪ್ತಿಯಲ್ಲಿ ಮಹಾಯೋಜನೆ ಸಿದ್ಧಪಡಿಸಲು ಉದ್ದೇಶಿಸಲಾಗಿದೆ’ ಎಂದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ (ಸುಡಾ) ಅಧ್ಯಕ್ಷ ಎಚ್.ಎಸ್.ಸುಂದರೇಶ್ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗ ಜಿಲ್ಲೆ ಹಿಂದೆಂದಿಗಿಂತಲೂ ಈಗ ಹೆಚ್ಚು ವೇಗವಾಗಿ ಅಭಿವೃದ್ಧಿಪಥದತ್ತ ದಾಪುಗಾಲಿಡುತ್ತಿದೆ. ಇಂತಹ ಸಂದರ್ಭದಲ್ಲಿ ಜಿಲ್ಲಾ ಕೇಂದ್ರವನ್ನು ಜನಸಂಖ್ಯೆ, ವಾಹನ ದಟ್ಟಣೆ ಆಧರಿಸಿ, ಆಸ್ಪತ್ರೆ, ಶಾಲಾ-ಕಾಲೇಜು, ಕೆರೆ-ಕಾಲುವೆ, ಸಂಪರ್ಕ ರಸ್ತೆ, ಉದ್ಯಾನವನ ಸೇರಿದಂತೆ ಒಟ್ಟಾರೆ ನಗರದ ಸೌಂದರ್ಯ ಗಮನದಲ್ಲಿಟ್ಟುಕೊಂಡು ಕ್ರಿಯಾಯೋಜನೆ ರೂಪಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಮಹಾಯೋಜನೆ ಸಿದ್ಧಪಡಿಸಲು ಈಗಾಗಲೇ ಜಿಲ್ಲಾಧಿಕಾರಿ ಹಾಗೂ ಸಂಬಂಧಿತ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಎರಡು ಹಂತದಲ್ಲಿ ಸಭೆ ಆಯೋಜಿಸಿ, ವಿಸ್ತೃತವಾಗಿ ಸಮಾಲೋಚನೆ ನಡೆಸಲಾಗಿದೆ ಎಂದರು.
ಪ್ರಸ್ತಾಪಿತ ಕ್ರಿಯಾಯೋಜನೆಯಲ್ಲಿ ನಗರಕ್ಕೆ ಹೊಂದಿಕೊಂಡಂತಿರುವ ಆಯ್ದ 3-4 ಸ್ಥಳಗಳಲ್ಲಿ ಆಸ್ಪತ್ರೆಗಳಿಗಾಗಿ ನಿವೇಶನ ಕಾಯ್ದಿರಿಸಲಾಗಿದೆ. ಕೈಗಾರಿಕಾ ಕ್ಷೇತ್ರದ ವಿಸ್ತರಣೆಗಾಗಿ 100 ಎಕರೆ ಭೂಪ್ರದೇಶ ಕಾಯ್ದಿರಿಸಲೂ ಸಹ ಉದ್ದೇಶಿಸಲಾಗಿದೆ. ನಗರದಲ್ಲಿನ ವಾಹನ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ವರ್ತುಲ ರಸ್ತೆಗಳ ನಿರ್ಮಾಣ, ಪ್ರವಾಸೋದ್ಯಮ ಕ್ಷೇತ್ರದ ಉನ್ನತಿಗೆ ನೀಲನಕ್ಷೆಯಲ್ಲಿ ಸ್ಥಾನ ಕಲ್ಪಿಸಲಾಗಿದೆ. ಅಲ್ಲದೇ ಬಂಡವಾಳ ಹೂಡಿಕೆಗಾಗಿ ಜಿಲ್ಲೆಗೆ ಬರುವವರಿಗೆ ಅನುಕೂಲ ಕಲ್ಪಿಸಲು ಸಹ ಕ್ರಮವಹಿಸಲಾಗಿದೆ ಎಂದರು.
ಅಲ್ಲದೇ ಭಾರೀ ವಾಹನಗಳ ನಿಲುಗಡೆಗೆ ಅನುಕೂಲವಾಗುವಂತೆ ನಗರದ ಹೊರವಲಯದ ವಿಶಾಲವಾದ ಪ್ರದೇಶದಲ್ಲಿ ವ್ಯವಸ್ಥಿತವಾದ ಟ್ರಕ್ ಟರ್ಮಿನಲ್ ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ಕ್ರಿಯಾ ಯೋಜನೆಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ನೀಡುವ ಸಲಹೆ ಪ್ರಾಧಿಕಾರ ಮುಕ್ತವಾಗಿ ಸ್ವೀಕರಿಸಲಿದೆ ಎಂದರು.
ಪ್ರಸ್ತುತ ₹5 ಕೋಟಿ ಅಂದಾಜು ವೆಚ್ಚದಲ್ಲಿ ಸೂಡಾ ವ್ಯಾಪ್ತಿಯಲ್ಲಿನ ನಾಲ್ಕು ಕೆರೆಗಳನ್ನು ಅತ್ಯಾಧುನಿಕವಾಗಿ ಅಭಿವೃದ್ಧಿಪಡಿಸಲಾಗಿದೆ. ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಶೀಘ್ರದಲ್ಲಿ ಕೆರೆಗಳ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ವಿಶ್ವನಾಥ ಮುದ್ದಜ್ಜಿ, ನಿರ್ದೇಶಕರಾದ ಸಿದ್ದಪ್ಪ, ಪ್ರವೀಣ್‌ಕುಮಾರ್ ಉಪಸ್ಥಿತರಿದ್ದರು.
- ಗೋಪಶೆಟ್ಟಿಕೊಪ್ಪ: ಶೀಘ್ರ
ನಿವೇಶನ ಅಭಿವೃದ್ಧಿ ಸೂಡಾ ವತಿಯಿಂದ ಗೋಪಶೆಟ್ಟಿಕೊಪ್ಪದಲ್ಲಿ ಈಗಾಗಲೇ ವಶಪಡಿಸಿಕೊಂಡಿರುವ 104 ಎಕರೆಯಲ್ಲಿ ರೈತರೊಂದಿಗೆ ಒಡಂಬಡಿಕೆ ಮಾಡಿಕೊಂಡ 30 ಎಕರೆ ಪ್ರದೇಶವನ್ನು ಶೀಘ್ರ ಅಭಿವೃದ್ಧಿಪಡಿಸ ಲಾಗುವುದು. ಅಲ್ಲದೇ ಉಳಿದ ಭೂಮಿ ಅಭಿವೃದ್ಧಿಗೂ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದ ಅವರು ನಿದಿಗೆ ಮತ್ತು ಸೋಮಿನಕೊಪ್ಪ ಪ್ರದೇಶದಲ್ಲಿಯೂ ಬಡಾವಣೆಗಳ ಸೃಜಿಸಿ ನಿವೇಶನಗಳ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ₹120 ಕೋಟಿ ವೆಚ್ಚದಲ್ಲಿ ನಗರದ ಹೊರವಲಯ ಊರುಗಡೂರು ಪ್ರದೇಶದಲ್ಲಿ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಅಪಾರ್ಟ್‌ಮೆಂಟ್‌ಗಳನ್ನು ನಿರ‍್ಮಿಸಲು ಉದ್ದೇಶಿಸಲಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.