
ಸಾಗರ: ದ್ವೇಷ ಭಾಷಣ ತಡೆ ಕಾಯ್ದೆ ಹೆಸರಿನಲ್ಲಿ ರಾಜ್ಯ ಸರ್ಕಾರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಹುನ್ನಾರ ನಡೆಸಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಎಚ್. ಹಾಲಪ್ಪ ಹರತಾಳು ಆರೋಪಿಸಿದ್ದಾರೆ.
ರಾಜ್ಯ ಸರ್ಕಾರ ದ್ವೇಷ ಭಾಷಣ ತಡೆ ಕಾಯ್ದೆ ಜಾರಿಗೆ ತರಲು ಮುಂದಾಗಿರುವುದನ್ನು ವಿರೋಧಿಸಿ ಇಲ್ಲಿನ ಬಿಜೆಪಿ ಕಾರ್ಯಕರ್ತರು ಶನಿವಾರ ಸಾಗರ್ ಹೋಟೆಲ್ ವೃತ್ತದಲ್ಲಿ ನಡೆಸಿದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ದ್ವೇಷ ಭಾಷಣ ತಡೆ ಮಸೂದೆ ಒಂದು ಕರಾಳ ಕಾಯ್ದೆಯಾಗಿದೆ. ಇದು ಜಾರಿಗೆ ಬಂದರೆ ರೈತ ಸಂಘ ಸೇರಿದಂತೆ ಯಾವುದೆ ಸಂಘಟನೆ ಹಾಗೂ ವಿರೋಧ ಪಕ್ಷ ಸರ್ಕಾರದ ವಿರುದ್ಧ ಮಾತನಾಡುವ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತದೆ ಎಂದು ದೂರಿದರು.
ದ್ವೇಷ ಭಾಷಣ ವಿಧೇಯಕದ ಮೂಲಕ ತಮ್ಮ ರಾಜಕೀಯ ವಿರೋಧಿಗಳನ್ನು ಹತ್ತಿಕ್ಕಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಮಾತೆತ್ತಿದರೆ ಅಂಬೇಡ್ಕರ್ ಹೆಸರು ಹೇಳುವ ಕಾಂಗ್ರೆಸ್ ಮುಖಂಡರು ಅಂಬೇಡ್ಕರ್ ರೂಪಿಸಿರುವ ಸಂವಿಧಾನದ ಆಶಯಗಳಿಗೆ ವಿರುದ್ಧವಾದ ಕಾಯ್ದೆಯನ್ನು ಜಾರಿಗೆ ತರಲು ಹೊರಟಿರುವುದು ವಿಪರ್ಯಾಸ ಟೀಕಿಸಿದರು.
ಈ ಹಿಂದೆ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಜಾರಿಗೊಳಿಸಿ ನಂತರ ನಡೆದ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ ಘಟನೆಯಿಂದ ಕಾಂಗ್ರೆಸ್ ಪಾಠ ಕಲಿತಂತಿಲ್ಲ. ಒಂದು ವೇಳೆ ದ್ವೇಷ ಭಾಷಣ ಕಾಯ್ದೆ ಜಾರಿಯಾದರೆ ತುರ್ತು ಪರಿಸ್ಥಿತಿಯ ನಂತರ ಕಾಂಗ್ರೆಸ್‌ಗೆ ಯಾವ ಸ್ಥಿತಿ ಬಂದಿತ್ತೊ ಅದೇ ಸ್ಥಿತಿ ಮರುಕಳಿಸಲಿದೆ ಎಂದು ಬಿಜೆಪಿ ಮುಖಂಡ ಟಿ.ಡಿ. ಮೇಘರಾಜ್ ಹೇಳಿದರು.
ಬಿಜೆಪಿಯ ಪ್ರಮುಖರಾದ ದೇವೇಂದ್ರಪ್ಪ ಯಲಕುಂದ್ಲಿ, ಕೆ.ಆರ್.ಗಣೇಶ್ ಪ್ರಸಾದ್, ಮಧುರಾ ಶಿವಾನಂದ್, ಡಾ.ರಾಜನಂದಿನಿ ಕಾಗೋಡು, ಪ್ರಸನ್ನ ಕೆರೆಕೈ, ಕೆ.ಎಸ್.ಪ್ರಶಾಂತ್, ಮೈತ್ರಿ ಪಾಟೀಲ್, ವಿ.ಮಹೇಶ್, ಸತೀಶ್ ಕೆ. ಸಂತೋಷ್ ಶೇಟ್, ಕೃಷ್ಣ ಶೇಟ್, ಶ್ರೀನಿವಾಸ ಮೇಸ್ತ್ರಿ, ಕೊಟ್ರಪ್ಪ ನೇದರವಳ್ಳಿ, ಪರಶುರಾಮ್, ಭಾವನಾ ಸಂತೋಷ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.