ADVERTISEMENT

ಗಣೇಶ ವಿಸರ್ಜನೆ ವೇಳೆ ಮೃತಪಟ್ಟವರಿಗೆ ಪರಿಹಾರ ನೀಡಲು ಮೀನಮೇಷ: ಶೋಭಾ ಕಿಡಿ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2025, 8:52 IST
Last Updated 14 ಸೆಪ್ಟೆಂಬರ್ 2025, 8:52 IST
ಶೋಭಾ ಕರಂದ್ಲಾಜೆ
ಶೋಭಾ ಕರಂದ್ಲಾಜೆ   

ಶಿವಮೊಗ್ಗ : 'ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ವಿಜಯೋತ್ಸವದ ವೇಳೆ ಕಾಲ್ತುಳಿತಕ್ಕೆ ಸಿಲುಕಿ ಮೃತಪಟ್ಟವರಿಗೆ ತಕ್ಷಣ ಪರಿಹಾರ ಕೊಡುತ್ತೀರಿ. ಹಾಸನದಲ್ಲಿ ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ನಡೆದ ಅಪಘಾತದಲ್ಲಿ ಮೃತಪಟ್ಟವರಿಗೆ ಹೆಚ್ಚಿನ ಪರಿಹಾರ ಘೋಷಿಸಲು ಮೀನಾಮೇಷ ಎಣಿಸುತ್ತೀರಿ. ಹಿಂದೂಗಳಿಗೆ ಪರಿಹಾರ ಕೊಡಲು ಸಾಧ್ಯವಿಲ್ಲದಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ತ್ಯಜಿಸಲಿ’ ಎಂದು ಕೇಂದ್ರ ಕಾರ್ಮಿಕ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಆರ್‌ಸಿಬಿ ತಂಡ ಪ್ರತಿನಿಧಿಸಿದ್ದ ಕ್ರೀಡೆ ಒಲಂಪಿಕ್ ನಲ್ಲಿ ಸ್ಥಾನ ಕೂಡ ಪಡೆದಿಲ್ಲ. ಆ ತಂಡ ಸರ್ಕಾರದ ಭಾಗವೂ ಅಲ್ಲ. ಅಲ್ಲಿ ಹಣಕ್ಕಾಗಿ ಆಡಲಾಗಿದೆ. ಆದರೂ ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪೈಪೋಟಿಗೆ ಬಿದ್ದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಘಟನೆ ವೇಳೆ ಕಾಲ್ತುಳಿತದಲ್ಲಿ ಸತ್ತವರಿಗೆ ಪರಿಹಾರ ಕೊಟ್ಟರು' ಎಂದು ಟೀಕಿಸಿದರು.

ರಾಜ್ಯದಲ್ಲಿ ಹಿಂದೂ ವಿರೊಧಿ ಸರ್ಕಾರವಿದೆ. ಅಲ್ಪಸಂಖ್ಯಾತರ ಭಾವನೆ, ನೋವು ಮಾತ್ರ ಅವರಿಗೆ ಕಾಣಿಸುತ್ತದೆ. ಪ್ರತಿ ಬಜೆಟ್ ನಲ್ಲಿ ಅಲ್ಪಸಂಖ್ಯಾತರಿಗೆ ಮಾತ್ರ ಹೆಚ್ಚಿನ ಅನುದಾನ ನೀಡಲಾಗುತ್ತದೆ. ಕೇರಳದಲ್ಲಿ ಪ್ರಾಕೃತಿಕ ಅವಘಡ ನಡೆದರೆ ಸಿದ್ದರಾಮಯ್ಯ ಪರಿಹಾರ ಕೊಡುತ್ತಾರೆ. ಆದರೆ, ರಾಜ್ಯದವರು ಮೃತಪಟ್ಟರೆ ಪರಿಹಾರವಿಲ್ಲ. ಈ ಕಾರಣಕ್ಕೆ ಸರ್ಕಾರ ಏಕೆ ನಡೆಸಬೇಕು ಎಂದು ಪ್ರಶ್ನಿಸಿದರು.

ADVERTISEMENT

ನಾಗಮಂಗಲದಲ್ಲಿ ಗಲಭೆ ನಡೆಸಿದ್ದ ಕೆಲವು ಮುಸ್ಲಿಂ ಕಿಡಿಗೇಡಿಗಳು ಈ ಬಾರಿ ಮದ್ದೂರಿನಲ್ಲಿಯೂ ಗಣಪತಿ ಮೆರವಣಿಗೆ ಮೇಲೆ ಕಲ್ಲು ತೂರಿದ್ದಾರೆ. ಈ ಸರ್ಕಾರದಲ್ಲಿ ಏನೇ ಮಾಡಿದರೂ ನಡೆಯುತ್ತದೆ ಎನ್ನುವುದು ಕಿಡಿಗೇಡಿಗಳ ಭಾವನೆ. ಗಲಭೆ ಪೂರ್ವದಲ್ಲಿ ಪೊಲೀಸರು ಹಾಗೂ ಗುಪ್ತಚರ ಇಲಾಖೆಗೆ ಮಾಹಿತಿ ಇರಲಿಲ್ಲವೆ?, ಈ ಘಟನೆಗೆ ಸರ್ಕಾರವೇ ನೇರ ಹೊಣೆ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.