ADVERTISEMENT

ಅಂಬೇಡ್ಕರ್ ಹೋರಾಟದಿಂದ ನೆಮ್ಮದಿಯ ಜೀವನ: ಜಿಲ್ಲಾಧಿಕಾರಿ ಕೆ.ಎ. ದಯಾನಂದ

ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2019, 12:22 IST
Last Updated 29 ಏಪ್ರಿಲ್ 2019, 12:22 IST
ಶಿವಮೊಗ್ಗ ಕುವೆಂಪು ರಂಗಮಂದಿರದಲ್ಲಿ ಸೋಮವಾರ ಏರ್ಪಡಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ 128ನೇ ಜಯಂತಿಯಲ್ಲಿ ಜಿಲ್ಲಾಧಿಕಾರಿ ಕೆ.ಎ. ದಯಾನಂದ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು
ಶಿವಮೊಗ್ಗ ಕುವೆಂಪು ರಂಗಮಂದಿರದಲ್ಲಿ ಸೋಮವಾರ ಏರ್ಪಡಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ 128ನೇ ಜಯಂತಿಯಲ್ಲಿ ಜಿಲ್ಲಾಧಿಕಾರಿ ಕೆ.ಎ. ದಯಾನಂದ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು   

ಶಿವಮೊಗ್ಗ: ಅಂಬೇಡ್ಕರ್ ಕೇವಲ ದಲಿತರಲ್ಲದೇ ಹಿಂದುಳಿದ, ಅನ್ಯಾಯ, ದೌರ್ಜನ್ಯ, ತುಳಿತಕ್ಕೊಳಗಾದ ಜನರಿಗೆ ನಿಜವಾದ ದೇವರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಕೆ.ಎ. ದಯಾನಂದ ಅಭಿಪ್ರಾಯಪಟ್ಟರು.

ನಗರದ ಕುವೆಂಪು ರಂಗಮಂದಿರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ, ದಲಿತ ನೌಕರರ ಒಕ್ಕೂಟದಿಂದ ಸೋಮವಾರ ಏರ್ಪಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 128ನೇ ಜನ್ಮದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ವಿವಿಧ ಭಾಷೆ, ಸಂಸ್ಥಾನಗಳಲ್ಲಿ ಒಡೆದು ಹೋಗಿದ್ದ ಹಾಗೂ ನಡೆನುಡಿ, ಸಂಸ್ಕೃತಿ ವಿಚಾರಗಳಲ್ಲಿ ವಿಭಿನ್ನತೆ ಹೊಂದಿದ್ದ ದೇಶದ ವರ್ಣ ವ್ಯವಸ್ಥೆಯೊಳಗೆ ತುಳಿತಕ್ಕೆ ಒಳಗಾದ ಜನರ ಬೆನ್ನೆಲುಬಾಗಿ ಕಂಡವರು ಅಂಬೇಡ್ಕರ್. ಅವರ ಹೋರಾಟ, ತ್ಯಾಗ, ದೂರದೃಷ್ಟಿಯ ಕಲ್ಪನೆಯಿಂದಾಗಿ ಇಂದುತುಳಿತಕ್ಕೊಳಗಾದ ಜನರು ನೆಮ್ಮದಿಯಾಗಿ ಜೀವಿಸುವ ಮತ್ತು ಉನ್ನತ ಹುದ್ದೆಗೆ ತಲುಪಲು ಸಾಧ್ಯವಾಗಿದೆ’ ಎಂದರು.

ADVERTISEMENT

‘ದಲಿತರು, ಹಿಂದುಳಿದವರು ಉನ್ನತ ಶಿಕ್ಷಣ ಪಡೆದು ಹುದ್ದೆಗೆ ತಲುಪಿದ ನಂತರ ಬೀಗುವುದಕ್ಕಿಂತ ಮೊದಲು ತಮ್ಮ ಆತ್ಮವಲೋಕನ ಮಾಡಿಕೊಳ್ಳಬೇಕು. ಹಿಂದಿನ ಇತಿಹಾಸವನ್ನು ಒಮ್ಮೆ ಗಮನಿಸಬೇಕು. ತಮ್ಮ ಹುದ್ದೆ, ಶಿಕ್ಷಣ ಎನ್ನುವುದು ಸುಲುಭವಾಗಿ, ಸ್ವ ಪ್ರಯತ್ನದಿಂದಾಗಿ ಬಂದದ್ದಲ್ಲ ಎಂಬುದನ್ನು ತಿಳಿಯಬೇಕು. ಇದರ ಹಿಂದೆ ಅಂಬೇಡ್ಕರ್ ಹೋರಾಟದ ಪ್ರತಿಫಲವಿದೆ ಎಂಬುದನ್ನು ಗಮನಿಸಬೇಕು’ ಎಂದು ಹೇಳಿದರು.

‘ಇಂದಿನ ಕಾಲಘಟ್ಟದಲ್ಲಿ ನಿಂತು ಸಮಾನತೆಯ ಬಗ್ಗೆ ಹೋರಾಟ ಮಾಡುವುದು ದೊಡ್ಡ ಸಾಧನೆಯೇನಲ್ಲ. ಆದರೆ, ದಲಿತರು ರಸ್ತೆಯಲ್ಲಿ ಓಡಾಡಬಾರದು, ಉಗುಳಬಾರದು, ನೆರಳು, ಹೆಜ್ಜೆ ಗುರುತು ಬೀಳಬಾರದು ಎನ್ನುತ್ತಿದ್ದ ಕಾಲಘಟ್ಟದಲ್ಲಿ ಅಂಬೇಡ್ಕರ್ ಸಮಾಜದಲ್ಲಿ ಧ್ವನಿ ಎತ್ತಿ ತುಳಿತಕ್ಕೊಳಗಾದವರಿಗೆ ನ್ಯಾಯ ದೊರಕಿಸಿಕೊಡುವ ಕನಸು ಕಂಡರು. ಅವರ ಹೋರಾಟ, ತ್ಯಾಗ, ಶ್ರಮದ ಫಲವಾಗಿ ನಾವಿಂದು ನೆಮ್ಮದಿಯಿಂದ ಜೀವಿಸುವಂತಾಗಿದೆ’ ಎಂದು ವಿಶ್ಲೇಷಿಸಿದರು.

ಪ್ರಸ್ತುತ ದಿನಗಳಲ್ಲಿ ಸಂಘಟನಾ ಕೊರತೆ ಎದ್ದು ಕಾಣುತ್ತಿದೆ. ವರ್ಣ ವ್ಯವಸ್ಥೆಯೊಳಗೆ ನಮ್ಮನ್ನು ಬಳಸಿಕೊಂಡು ನಮ್ಮ ಸಂಘಟನೆಯನ್ನು ಒಡೆದುಹಾಕಿ ನಮ್ಮನ್ನು ನಿಯಂತ್ರಿಸುವ ಶಕ್ತಿಗಳು ಅತ್ಯಂತ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿವೆ. ಈ ಬಗ್ಗೆ ದಲಿತ ಸಂಘಟನೆಗಳು ಎಚ್ಚೆತ್ತುಕೊಳ್ಳಬೇಕು. ತಮ್ಮಲ್ಲಿರುವ ತಪ್ಪುಗಳನ್ನು ಕಂಡುಕೊಳ್ಳುವ ಅನಿವಾರ್ಯತೆ ಇದೆ. ವಿವಿಧ ಕಾರಣಗಳಿಂದ ವಿಭಜನೆಗೊಂಡಿರುವ ಸಂಘಟನೆಗಳು ಒಟ್ಟಾಗಬೇಕಿದೆ. ಸಂಘಟನೆಯ ಶಕ್ತಿ ಗಟ್ಟಿಯಾದಾಗ ಹೋರಾಟ, ಧ್ವನಿಗೆ ನಿಜವಾದ ಶಕ್ತಿ ಸಿಗುತ್ತದೆ ಎಂಬುದನ್ನು ತಿಳಿಯಬೇಕಿದೆ ಎಂದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಟಿ.ಶೇಖರ್, ‘ಸಂಘಟನೆಯಲ್ಲಿ ಬಲವಿದೆ. ಹಾಗಾಗಿ ದಲಿತ ಸಂಘಟನೆಗಳು ಒಟ್ಟಾಗಬೇಕು. ತುಳಿತಕ್ಕೊಳಗಾದ ಜನರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಬಲಪಡಿಸುವ ಕಾರ್ಯವನ್ನು ಸಂಘಟನೆಗಳು ಮಾಡಬೇಕು. ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸವಲತ್ತು ದೊರಕಿಸಿಕೊಡಬೇಕು’ ಎಂದು ಕಿವಿಮಾತು ಹೇಳಿದರು.

ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಂಚಾಲಕ ಟಿ.ಎಚ್. ಹಾಲೇಶಪ್ಪ, ಪ್ರಮುಖರಾದ ಹಕ್ಕಿಪಿಕ್ಕಿ ಜಗ್ಗ, ಮಂಜುನಾಥ್, ನಾಗರಾಜ್, ಭಾರತಿ, ಶಿವಬಸಪ್ಪ, ಕುಮಾರಸ್ವಾಮಿ, ಏಳುಕೋಟಿ, ಪಳನಿ, ವಿನೋದ್, ರುದ್ರಪ್ಪ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.