ADVERTISEMENT

ಪಕ್ಷ ಬಲವರ್ಧನೆಗೆ ಸುವರ್ಣಾವಕಾಶ- ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2022, 4:20 IST
Last Updated 21 ಫೆಬ್ರುವರಿ 2022, 4:20 IST
ಶಿವಮೊಗ್ಗದ ದ್ವಾರಕಾ ಕನ್ವೆನ್ಷನ್ ಹಾಲ್‌ನಲ್ಲಿ ಜಿಲ್ಲಾ ಕಾಂಗ್ರೆಸ್‌ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸದಸ್ಯತ್ವ ನೋಂದಣಿಗೆ ಚಾಲನೆ ನೀಡಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಮಾತನಾಡಿದರು.
ಶಿವಮೊಗ್ಗದ ದ್ವಾರಕಾ ಕನ್ವೆನ್ಷನ್ ಹಾಲ್‌ನಲ್ಲಿ ಜಿಲ್ಲಾ ಕಾಂಗ್ರೆಸ್‌ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸದಸ್ಯತ್ವ ನೋಂದಣಿಗೆ ಚಾಲನೆ ನೀಡಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಮಾತನಾಡಿದರು.   

ಶಿವಮೊಗ್ಗ: ಹೆಚ್ಚು ಸದಸ್ಯತ್ವ ನೋಂದಣಿ ಮಾಡುವ ಮೂಲಕ ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಕಾಂಗ್ರೆಸ್‌ಗೆ ಇದೊಂದು ಸುವರ್ಣ ಅವಕಾಶ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ತಿಳಿಸಿದರು.

ನಗರದ ದ್ವಾರಕಾ ಕನ್ವೆನ್ಷನ್ ಹಾಲ್‌ನಲ್ಲಿ ಜಿಲ್ಲಾ ಕಾಂಗ್ರೆಸ್‌ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಸದಸ್ಯತ್ವ ನೋಂದಣಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕಾಂಗ್ರೆಸ್‌ನಲ್ಲಿ ಕಾರ್ಯಕರ್ತರಿಗಿಂತ ನಾಯಕರೇ ಹೆಚ್ಚಿದ್ದಾರೆ ಎಂಬ ಮಾತಿದೆ. ಹೀಗಾಗಿ ಕೇಡರ್ ಬೇಸ್ ಪಕ್ಷವಾಗಿ ರೂಪಿಸಲು ಸದಸ್ಯತ್ವ ಅಭಿಯಾನ ನಡೆಸಲಾಗುತ್ತಿದೆ ಎಂದು ಹೇಳಿದರು.

ADVERTISEMENT

ಇಷ್ಟು ವರ್ಷಗಳ ಕಾಲ ರಸೀದಿ ಮೂಲಕವೇ ಸದಸ್ಯತ್ವ ನೀಡಲಾಗುತ್ತಿತ್ತು. ಇಂದು ಎಲ್ಲವೂ ಡಿಜಿಟಲೀಕರಣವಾಗಿದ್ದು, ಸದಸ್ಯತ್ವ ನೋಂದಣಿಯೂ ಡಿಜಿಟಲ್ ಮೂಲಕ ನಡೆಯಲಿದೆ. ಯಾವುದೋ ಒಂದು ಬೂತ್‍ನಲ್ಲಿ ನೋಂದಣಿಯಾಗುವ ಸದಸ್ಯರ ವಿವರ ಕೆಪಿಸಿಸಿ ಹಾಗೂ ಎಐಸಿಸಿ ಹಂತದಲ್ಲೂ ದಾಖಲಾಗುವಂತೆ ಆ್ಯಪ್‍ ಅನ್ನು ರೂಪಿಸಲಾಗಿದೆ ಎಂದು ಹೇಳಿದರು.

ಚುನಾವಣೆ ಸಂದರ್ಭದಲ್ಲಿ ಜನರನ್ನು ಭಾವನಾತ್ಮಕವಾಗಿ ಸೆಳೆಯುವ ಬಿಜೆಪಿ ತಂತ್ರಕ್ಕೆ ತಡೆಯೊಡ್ಡಬೇಕು. ಸದಸ್ಯತ್ವ ನೋಂದಣಿ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಯುವಕ, ಯುವತಿಯರನ್ನು ಪಕ್ಷಕ್ಕೆ ಬರಮಾಡಿಕೊಳ್ಳಬೇಕು. ಎಲ್ಲ ಧರ್ಮಿಯರೂ, ಜಾತಿಗಳನ್ನೂ ಒಳಗೊಳ್ಳುವಂತೆ ನೋಡಿಕೊಳ್ಳಬೇಕು. ಸಮಾಜದ ಎಲ್ಲ ಸ್ತರಗಳ ವ್ಯಕ್ತಿಗಳನ್ನು ಒಗ್ಗೂಡಿಸಿಕೊಂಡು ಹೋಗುವ ಶಕ್ತಿ ಕಾಂಗ್ರೆಸ್‍ಗೆ ಮಾತ್ರ ಇದೆ ಎಂದರು.

ಡಿಜಿಟಲ್ ಸದಸ್ಯತ್ವ ನೋಂದಣಿ ಸಂಚಾಲಕ ರಘುನಂದನ್ ರಾಮಣ್ಣ ಮಾತನಾಡಿ, ‘ಡಿಜಿಟಲ್ ಸದಸ್ಯತ್ವ ನೋಂದಣಿ ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರ ಪರಿಕಲ್ಪನೆ. ಮುಂದಿನ 10 ವರ್ಷಗಳಲ್ಲಿ ಎಲ್ಲವೂ ಬದಲಾವಣೆಯಾಗಲಿದೆ. ಯುವ ಕಾಂಗ್ರೆಸ್ ಆಂತರಿಕ ಚುನಾವಣೆ ಆನ್‍ಲೈನ್ ಮೂಲಕ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಚುನಾವಣೆ ಟಿಕೆಟ್ ಹಂಚಿಕೆ, ಸಿಎಂ ಅಭ್ಯರ್ಥಿ ಸ್ಥಾನಕ್ಕೆ ಹೆಸರು ಸೂಚಿಸಲು ಡಿಜಿಟಲ್ ಮಾನದಂಡವನ್ನು ಬಳಸಲಾಗುತ್ತದೆ. ಹೀಗಾಗಿ ಪ್ರತಿಯೊಬ್ಬರೂ ಡಿಜಿಟಲ್ ಸದಸ್ಯತ್ವ ನೋಂದಣಿಗೆ ಒತ್ತು ನೀಡಬೇಕು’ ಎಂದು ಹೇಳಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್. ಸುಂದರೇಶ್, ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ, ಕಾಗೋಡು ತಿಮ್ಮಪ್ಪ, ಮಾಜಿ ಶಾಸಕರಾದ ಕೆ.ಬಿ. ಪ್ರಸನ್ನಕುಮಾರ್, ಗೋಪಾಲಕೃಷ್ಣ ಬೇಳೂರು, ಮಧು ಬಂಗಾರಪ್ಪ, ಎಸ್. ಶಿವಮೂರ್ತಿ ನಾಯ್ಕ್, ವಿಧಾನಪರಿಷತ್ ಮಾಜಿ ಸದಸ್ಯ ಆರ್. ಪ್ರಸನ್ನಕುಮಾರ್, ಪ್ರಮುಖರಾದ ಆರ್.ಎಂ. ಮಂಜುನಾಥ ಗೌಡ, ಲೋಕಸಭೆ ಮಾಜಿ ಸದಸ್ಯ ಚಂದ್ರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.