ADVERTISEMENT

ಕನ್ನಡ ಕಲಿಯುತ್ತಿರುವೆ, ಕನ್ನಡದಲ್ಲೇ ವ್ಯವಹರಿಸುವೆ: ಗೆಹ್ಲೋಟ್

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2021, 13:28 IST
Last Updated 24 ನವೆಂಬರ್ 2021, 13:28 IST
ಶಿವಮೊಗ್ಗದ ಪೆಸಿಟ್‌ ಕಾಲೇಜಿನಲ್ಲಿ ಬುಧವಾರ ರಾಜ್ಯಪಾಲ ಥ್ಯಾವರ್ ಚಂದ್ ಗೆಹ್ಲೋಟ್ ಅವರನ್ನು ಸಂಸದ ಬಿ.ವೈ.ರಾಘವೇಂದ್ರ ಸನ್ಮಾನಿಸಿದರು.
ಶಿವಮೊಗ್ಗದ ಪೆಸಿಟ್‌ ಕಾಲೇಜಿನಲ್ಲಿ ಬುಧವಾರ ರಾಜ್ಯಪಾಲ ಥ್ಯಾವರ್ ಚಂದ್ ಗೆಹ್ಲೋಟ್ ಅವರನ್ನು ಸಂಸದ ಬಿ.ವೈ.ರಾಘವೇಂದ್ರ ಸನ್ಮಾನಿಸಿದರು.   

ಶಿವಮೊಗ್ಗ: ಅಧಿಕಾರ ವಹಿಸಿಕೊಂಡ ಕ್ಷಣದಿಂದಲೇ ಕನ್ನಡ ಕಲಿಯಲು ಆರಂಭಿಸಿರುವೆ. ಮುಂದೆ ಕನ್ನಡದಲ್ಲೇ ವ್ಯವಹರಿಸುವ ಇಚ್ಚೆ ಇದೆ ಎಂದು ರಾಜ್ಯಪಾಲ ಥ್ಯಾವರ್ ಚಂದ್ ಗೆಹ್ಲೋಟ್ ಹೇಳಿದರು.

ನಗರದ ಪ್ರೇರಣಾ ಎಜುಕೇಷನಲ್ ಟ್ರಸ್ಟ್‌ನಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಕುರಿತು ಹಮ್ಮಿಕೊಂಡಿದ್ದ ವಿಚಾರಣ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಮಧ್ಯಪ್ರದೇಶದಿಂದ ಕರ್ನಾಟಕಕ್ಕೆ ಬಂದಿರುವುದು ಸಂತಸ ತಂದಿದೆ. ಕನ್ನಡ ಭಾಷೆ, ನೆಲದ ಬಗ್ಗೆ ಗೌರವವಿದೆ. ಕರ್ನಾಟಕ ಭಾರತದಲ್ಲೇ ಅಗ್ರಮಾನ್ಯ ಸ್ಥಾನ ಪಡೆದಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಎಲ್ಲ ರಾಜ್ಯಗಳಿಗಿಂತ ಅನುಷ್ಠಾನಗೊಳಿಸುತ್ತಿದೆ ಎಂದು ಶ್ಲಾಘಿಸಿದರು.

ADVERTISEMENT

ಈ ನೀತಿಯಲ್ಲಿ ದೇಶ ಭಕ್ತಿ, ಗುರುಕುಲ ಶಿಕ್ಷಣ ಅಡಗಿದೆ. ದೇಶದಲ್ಲಿ ಸಾವಿರಾರು ಭಾಷೆಗಳಿವೆ. ಹೊಸ ಶಿಕ್ಷಣ ನೀತಿಯಲ್ಲಿ ಸ್ಥಳೀಯ‌ ಶಿಕ್ಷಣಕ್ಕೂ ಒತ್ತು ನೀಡಲಾಗಿದೆ. ಮಾತೃಭಾಷೆಯಲ್ಲೇ ತಾಂತ್ರಿಕ ವಿಷಯ ಅಧ್ಯನ ಮಾಡಲು ಅವಕಾಶ ನೀಡಲಾಗಿದೆ. ಚೀನಾ, ಜರ್ಮನಿಯಂತೆ ನಮ್ಮಲ್ಲೂ ಮಾತೃಭಾಷೆಯ ಶಿಕ್ಷಣ ಪಡೆಯಲು ಅವಕಾಶ ನೀಡಲಾಗಿದೆ ಎಂದು ವಿವರ ನೀಡಿದರು.

ಪ್ರಾಚೀನ ಶಿಕ್ಷಣ ಇತಿಹಾಸದಲ್ಲಿ ಭಾರತದ ಹೆಸರಿದೆ. ಶೂನ್ಯದ ಕೊಡುಗೆ, ಗಣಿತದಲ್ಲಿ ಭಾರತ ಸಾಧನೆ ಇದೆ. ಬಿಹಾರದ ನಳಂದ ವಿಶ್ವವಿದ್ಯಾಲಯ ಎಷ್ಟು ಪುರಾತನ ಎಂಬುದು ಎಲ್ಲರಿಗೂ ಗೊತ್ತಿದೆ. ಇತಿಹಾಸದ ಅಧ್ಯಯನಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದರು.

ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಗಾಗಿ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಘೋಷಣೆ‌ ಮಾಡಲಾಗಿದ್ದ ಆಯುಷ್ ವಿಶ್ವ ವಿದ್ಯಾಲಯಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಅದಕ್ಕೆ ನಿಮ್ಮ ಅಂಕಿತದ ಅಗತ್ಯವಿದೆ. ಸಹಕಾರ ನೀಡಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಮನವಿ ಮಾಡಿದರು.

ಸಿಂಹಧಾಮ ವೀಕ್ಷಣೆ: ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮ ವೀಕ್ಷಿಸಿದ ರಾಜ್ಯಪಾಲರು ಎರಡು ತಾಸು ಅಲ್ಲಿನ ಪ್ರಾಣಿ, ಪಕ್ಷಿಗಳನ್ನು ವೀಕ್ಷಿಸಿ ಖುಷಿಪಟ್ಟರು. ಧಾಮದ ಹುಲಿಯೊಂದರ ಚಟುವಟಿಕೆಗೆ ಬೆರಗಾದ ಅವರು ಮತ್ತೊಂದು ಸುತ್ತು ತಿರುಗಿದರು. ಧಾಮದ ಒಳಗೆ ಹುಲಿ, ಸಿಂಹಗಳ ವೀಕ್ಷಣೆಗಾಗಿ ಅವರಿಗಾಗಿಯೇ ಪ್ರತ್ಯೇಕ ವಾಹನವನ್ನು ಬಳ್ಳಾರಿಯಿಂದ ತರಿಸಲಾಗಿತ್ತು. ರಾತ್ರಿ ಜೋಗದ ಬ್ರಿಟಿಷ್‌ ಬಂಗ್ಲೆಯಲ್ಲಿ ತಂಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.