ADVERTISEMENT

ಕೃಷಿಯಿಂದ ವಿಮುಖರಾಗಲು ಸರ್ಕಾರದ ಪ್ರೋತ್ಸಾಹ: ಕೋಡಿಹಳ್ಳಿ ಚಂದ್ರಶೇಖರ್ ಆರೋಪ

ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆರೋಪ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2022, 2:40 IST
Last Updated 10 ಏಪ್ರಿಲ್ 2022, 2:40 IST
ಸಾಗರ ತಾಲ್ಲೂಕಿನ ತಾಳಗುಪ್ಪ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಶನಿವಾರ ಏರ್ಪಡಿಸಿದ್ದ ರೈತ ಸಮಾವೇಶದಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿದರು.
ಸಾಗರ ತಾಲ್ಲೂಕಿನ ತಾಳಗುಪ್ಪ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಶನಿವಾರ ಏರ್ಪಡಿಸಿದ್ದ ರೈತ ಸಮಾವೇಶದಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿದರು.   

ಸಾಗರ: ರೈತ ವಿರೋಧಿ, ಜನ ವಿರೋಧಿ ಕೃಷಿ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ರಾಜ್ಯ ಸರ್ಕಾರವೇ ರೈತರು ಕೃಷಿಯಿಂದ ವಿಮುಖರಾಗಲು ಪ್ರೋತ್ಸಾಹ ನೀಡುತ್ತಿದೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ವ್ಯಂಗ್ಯವಾಡಿದರು.

ತಾಲ್ಲೂಕಿನ ತಾಳಗುಪ್ಪ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಶನಿವಾರ ಏರ್ಪಡಿಸಿದ್ದ ರೈತ ಸಮಾವೇಶದಲ್ಲಿ ಮಾತನಾಡಿದರು.

ಉಳುವವನೇ ಹೊಲದೊಡೆಯ ಎಂಬ ಘೋಷಣೆಯ ಮೂಲಕ ರೈತರಿಗೆ ಭೂಮಿಯ ಹಕ್ಕು ದೊರಕಿದ್ದು ಇತಿಹಾಸದಲ್ಲಿ ದಾಖಲಾಗಿರುವ ಮಹತ್ವದ ಸಂಗತಿ. ಆದರೆ ಈಗಿನ ಬಿಜೆಪಿ ಸರ್ಕಾರ ಕಾನೂನಿಗೆ ತಿದ್ದುಪಡಿ ತರುವ ಮೂಲಕ ಭೂ ಸುಧಾರಣೆಯ ಆಶಯಗಳನ್ನೇ ಬುಡಮೇಲು ಮಾಡಲು ಹೊರಟಿದೆ ಎಂದುಟೀಕಿಸಿದರು.

ADVERTISEMENT

ಆಹಾರ ಧಾನ್ಯಗಳ ಹೊರತಾಗಿ ಮಿಕ್ಕ ಎಲ್ಲಾ ಉತ್ಪನ್ನಗಳ ಬೆಲೆ ದಿನೇದಿನೇ ಗಗನಕ್ಕೇರುತ್ತಿದೆ. ಸರ್ಕಾರಕ್ಕೆ ರೈತರ, ಜನರ ಬಗ್ಗೆ ಕನಿಷ್ಠ ಕಾಳಜಿ ಇದ್ದಿದ್ದರೆ ಬೆಲೆ ಏರಿಕೆಗೆ ಕಡಿವಾಣ ಹಾಕಲು ಪ್ರಯತ್ನ ಮಾಡುತ್ತಿತ್ತು. ಆದರೆ ಸರ್ಕಾರಕ್ಕೆ ಕಂಪನಿಗಳ ಹಿತಾಸಕ್ತಿಯನ್ನು ಕಾಯುವ ಆಸಕ್ತಿ ಇದೆಯೆ ಹೊರತು ರೈತರ ಬಗ್ಗೆ ಆಸಕ್ತಿ ಇಲ್ಲ ಎಂದು ದೂರಿದರು.

ಏಪ್ರಿಲ್ 21ರಂದುಬೆಂಗಳೂರಿನಲ್ಲಿ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರ ಬೃಹತ್ ಸಮಾವೇಶ ಆಯೋಜಿಸಲಾಗಿದೆ. ಒಕ್ಕಲುತನ ಉಳಿಯಬೇಕು ಎಂದಾದರೆ ಸರ್ಕಾರ ಕಾಯ್ದೆಗಳನ್ನು ರದ್ದುಗೊಳಿಸಲೇಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಲು ಸಮಾವೇಶ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ರೈತ ಸಂಘದ ಪ್ರಮುಖರಾದ ಎಂ.ಕೆ. ಮಂಜುನಾಥ ಗೌಡ, ಕನ್ನಪ್ಪ, ಚಂದ್ರಶೇಖರ ಗೂರಲಕೆರೆ, ರಾಘವೇಂದ್ರ, ಮಾಲತೇಶ ಪೂಜಾರ್, ನಾಗರಾಜ್, ವೀರಭದ್ರ ನಾಯ್ಕ್, ಈಶ್ವರಪ್ಪ, ಇಂದೂಧರ, ಸುನೀತಾ, ಜಾಕೀರ್, ಶಫಿವುಲ್ಲಾ, ಭೈರೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.