ಶಿವಮೊಗ್ಗ: ‘ಗ್ಯಾರಂಟಿ ಯೋಜನೆಗಳು ಮತ್ತು ಭದ್ರಾ ಕಾಡಾ ಪ್ರಾಧಿಕಾರದ ಸವಲತ್ತುಗಳನ್ನು ಪ್ರತಿ ಮನೆ ಮನಗಳಿಗೆ ಮುಟ್ಟಿಸುವ ಕೆಲಸ ಸದಸ್ಯರು ಮಾಡಬೇಕು’ ಎಂದು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್ ಸಲಹೆ ನೀಡಿದರು.
ಇಲ್ಲಿನ ಭದ್ರಾ ಕಾಡಾ ಪ್ರಾಧಿಕಾರದ ಸಭಾಂಗಣದಲ್ಲಿ ಸೋಮವಾರ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಪಂಚ ಗ್ಯಾರಂಟಿ ಪ್ರಾಧಿಕಾರದ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯಾದ್ಯಂತ ಮಹಿಳೆಯರು, ಯುವಕರ ಬದುಕಿಗೆ ಗ್ಯಾರಂಟಿ ಯೋಜನೆಗಳು ಆಸರೆಯಾಗಿವೆ. ಇದಕ್ಕೆ ಪೂರಕವಾಗಿ ರಾಜ್ಯಸರ್ಕಾರ ಕೋಟ್ಯಾಂತರ ರೂಪಾಯಿ ಜನರಿಗಾಗಿ ವ್ಯಯಿಸುವ ಮೂಲಕ ಬಡವರ್ಗದ ಜನರಿಗೆ ಅನುಕೂಲ ಮಾಡಿಕೊಟ್ಟಿದೆ ಎಂದು ತಿಳಿಸಿದರು.
ಹೆಚ್ಚು ನೀರು ಬಳಕೆಯಿಂದ ಭೂಮಿ ಹದಗೆಡುವ ಸಾಧ್ಯತೆ ಇದೆ. ಹೀಗಾಗಿ ನಿಯಮಿತ ನೀರಿನ ಬಳಸಿಕೊಂಡು ಭೂಮಿ ಫಲವವತ್ತೆಯಿಂದ ಕೂಡಿರಲು ಬೇರೆ ಬೇರೆ ಯೋಜನೆಗಳ ಜಾರಿಗೊಳಿಸುವ ಮೂಲಕ ಕೃಷಿ ಬೆಳೆಗಳ ಅಧಿಕ ಇಳುವರಿಗೆ ಪ್ರೋತ್ಸಾಹಿಸಲಾಗುತ್ತಿದೆ ಎಂದರು.
ರಾಜ್ಯದ ರೈತರು, ಕಾರ್ಮಿಕರಿಗೆ ಸರ್ಕಾರ ನಿರಂತರವಾಗಿ ಸ್ಪಂದಿಸುವ ಕೆಲಸ ಮಾಡುತ್ತಿದೆ. ಜೊತೆಗೆ ಸಹಕಾರ ಸಂಘದ ಸುಭದ್ರತೆಗೆ ಒತ್ತು ಕೊಡುವ ಜೊತೆಗೆ ಸ್ವಸಹಾಯ ಮಹಿಳಾ ಗುಂಪುಗಳಿಗೆ ಪೂರಕ ಸೌಲಭ್ಯ ಒದಗಿಸಿ, ಸ್ವಾವಲಂಬಿ ಬದುಕಿಗೆ ಆಸರೆಯಾಗಿದೆ ಎಂದು ಹೇಳಿದರು.
'ಅನ್ನಭಾಗ್ಯ ಯೋಜನೆಯಡಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಅಕ್ಕಿ ವಿತರಿಸಿದ್ದು ಮುಂದಿನ ದಿನಗಳಲ್ಲಿ ಹೊಸದಾಗಿ ಆಹಾರ ಕಿಟ್‌ಗಳನ್ನು ವಿತರಿಸುವ ಗುರಿ ಹೊಂದಿದೆ. ಸರ್ಕಾರಿ ನೌಕರರ 7ನೇ ವೇತನ ಆಯೋಗದ ಶಿಫಾರಸುಗಳ ಜಾರಿಗೊಳಿಸಿ ವಿಶ್ವಾಸ ಹಾಗೂ ನಂಬಿಕೆಗೆ ಅರ್ಹವಾಗಿದೆ' ಎಂದು ತಿಳಿಸಿದರು.
ಚಿಕ್ಕಮಗಳೂರು ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನ೦ದಸ್ವಾಮಿ ಮಾತನಾಡಿ, ‘ಪಂಚ ನದಿಗಳ ಉಗಮ ಸ್ಥಾನವಾದ ಜಿಲ್ಲೆಗೆ ವಿಶೇಷ ಗೌರವಿದೆ. ಅಲ್ಲದೇ ಜಿಲ್ಲೆಯಿಂದ ಹರಿಯುವ ನೀರು ಶಿವಮೊಗ್ಗದತ್ತ ಸಾಗಿ ಲಕ್ಷಾಂತರ ಮಂದಿಗೆ ಕುಡಿಯುವ ನೀರಾಗುತ್ತಿದೆ’ ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ್, ಪಂಚ ಗ್ಯಾರಂಟಿ ಯೋಜನೆ ಜಿಲ್ಲೆಯಲ್ಲಿ ಅನುಷ್ಟಾನಗೊಂಡು ಶೇ.98.5ರಷ್ಟು ಪ್ರಗತಿ ಸಾಧಿಸಿದೆ. ಅಲ್ಲದೇ ಉದ್ಯೋಗ ಮೇಳ ನಡೆಸಿ ಶೇ.90 ರಷ್ಟು ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿಕೊಡಲಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಭದ್ರಾ ಕಾಡಾ ಆಡಳಿತಾಧಿಕಾರಿ ಆರ್.ಸತೀಶ್, ಭೂ ಅಭಿವೃದ್ದಿ ಅಧಿಕಾರಿಗಳಾದ ಕೆ.ಪ್ರಶಾಂತ್, ನಾಗೇಶ್ ಡೊಂಗ್ರೆ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.