ADVERTISEMENT

ಕೈಮಗ್ಗ ನೇಕಾರಿಕೆ, ಉತ್ಪಾದನಾ ವಿಭಾಗಕ್ಕೆ ಒತ್ತು ನೀಡಿ: ದೇಸಿ ಚಿಂತಕ ಪ್ರಸನ್ನ

ದೇಸಿ ಚಿಂತಕ ಪ್ರಸನ್ನ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2021, 14:04 IST
Last Updated 7 ಫೆಬ್ರುವರಿ 2021, 14:04 IST
ಸಾಗರಕ್ಕೆ ಸಮೀಪದ ಹೊನ್ನೇಸರ ಗ್ರಾಮದಲ್ಲಿ ಚರಕ ಉತ್ಸವ-2021ರ ಅಂಗವಾಗಿ ಭಾನುವಾರ ನಡೆದ ಕೊಡು-ಕೊಳ್ಳುವವರ ಸಮಾವೇಶದಲ್ಲಿ ದೇಸಿ ಚಿಂತಕ ಪ್ರಸನ್ನ ಮಾತನಾಡಿದರು
ಸಾಗರಕ್ಕೆ ಸಮೀಪದ ಹೊನ್ನೇಸರ ಗ್ರಾಮದಲ್ಲಿ ಚರಕ ಉತ್ಸವ-2021ರ ಅಂಗವಾಗಿ ಭಾನುವಾರ ನಡೆದ ಕೊಡು-ಕೊಳ್ಳುವವರ ಸಮಾವೇಶದಲ್ಲಿ ದೇಸಿ ಚಿಂತಕ ಪ್ರಸನ್ನ ಮಾತನಾಡಿದರು   

ಸಾಗರ: ನೈಸರ್ಗಿಕ ಬಣ್ಣಗಾರಿಕೆಯೊಂದಿಗೆ ನಡೆಯುವ ಕೈಮಗ್ಗ ನೇಕಾರಿಕೆ ಕ್ಷೇತ್ರದಲ್ಲಿ ಮಾರುಕಟ್ಟೆ ವಿಭಾಗದ ಜೊತೆಗೆ ಉತ್ಪಾದನಾ ವಿಭಾಗಕ್ಕೂ ಹೆಚ್ಚು ಒತ್ತು ನೀಡಬೇಕಿದೆ ಎಂದು ದೇಸಿ ಚಿಂತಕ ಪ್ರಸನ್ನ ಹೇಳಿದರು.

ಸಮೀಪದ ಹೊನ್ನೇಸರ ಗ್ರಾಮದಲ್ಲಿ ಚರಕ ಉತ್ಸವ-2021ರ ಅಂಗವಾಗಿ ಭಾನುವಾರ ನಡೆದ ಕೊಡು-ಕೊಳ್ಳುವವರ ಸಮಾವೇಶದಲ್ಲಿ ಮಾತನಾಡಿದರು.

‘ಚರಕ ಸಂಸ್ಥೆ ಮಾರುಕಟ್ಟೆ ವಿಸ್ತರಣೆಯ ಜೊತೆಗೆ ಉತ್ಪಾದನಾ ವಿಭಾಗಕ್ಕೆ ಪ್ರಾಮುಖ್ಯತೆ ನೀಡುತ್ತಿರುವುದರಿಂದ ದೇಶದಲ್ಲೆ ಅತೀ ಹೆಚ್ಚು ಪ್ರಮಾಣದಲ್ಲಿ ಕೈಮಗ್ಗ ನೇಕಾರಿಕೆ ನಡೆಸುವ ಸಂಸ್ಥೆಯಾಗಿ ಬೆಳೆದಿದೆ.ಚರಕ ಸಂಸ್ಥೆಯು ಉತ್ಪಾದನಾ, ಮಾರುಕಟ್ಟೆ ವಿಭಾಗದ ಜೊತೆಗೆ ಕೈಮಗ್ಗ ನೇಕಾರಿಕೆಗೆ ಸಂಬಂಧಪಟ್ಟಂತೆ ಹೊಸ ಅವಿಷ್ಕಾರಗಳನ್ನು ನಡೆಸುವತ್ತ ಗಮನ ಹರಿಸಿದೆ. ಧಾರವಾಡ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಇದಕ್ಕೆ ಸಂಬಂಧಪಟ್ಟಂತೆ ನೂತನ ಸಂಶೋಧನಾ ಘಟಕ ಆರಂಭಗೊಳ್ಳಲಿದೆ’ ಎಂದು ತಿಳಿಸಿದರು.

ADVERTISEMENT

‘ಪವಿತ್ರ ವಸ್ತ್ರ’ ಎಂಬ ನೂತನ ಯೋಜನೆಯಡಿ ಕರ್ನಾಟಕದ ಎಲ್ಲಾ ಮಠಗಳಿಗೆ ಕೈಮಗ್ಗ ನೇಕಾರಿಕೆಯ ವಸ್ತ್ರಗಳನ್ನು ಪೂರೈಸಲು ಉದ್ದೇಶಿಸಲಾಗಿದೆ. ಏಕೆಂದರೆ ಎಲ್ಲಾ ಧರ್ಮದ ಮಠ, ಶ್ರದ್ಧಾ ಕೇಂದ್ರಗಳಲ್ಲಿ ನೈಸರ್ಗಿಕ ಬಣ್ಣಗಾರಿಕೆಯ ಬಟ್ಟೆಗಳನ್ನೆ ಬಳಸುತ್ತಾರೆ. ಈ ಯೋಜನೆ ಯಶಸ್ವಿಯಾದರೆ ಕರ್ನಾಟಕದ ಯಾವುದೇ ನೇಕಾರ ಉಪವಾಸದಿಂದ ಇರಬೇಕಾಗುವುದಿಲ್ಲ. ನೇಕಾರರಿಗೆ ಸಂಪೂರ್ಣ ಉದ್ಯೋಗ ಲಭ್ಯವಾಗುತ್ತದೆ ಎಂದರು.

ಗ್ರಾಮೀಣ ಪ್ರದೇಶದಲ್ಲಿ ಕೃಷಿ ವರ್ಷದಲ್ಲಿ 4ರಿಂದ 5 ತಿಂಗಳು ಮಾತ್ರ ಹಳ್ಳಿಗರಿಗೆ ಉದ್ಯೋಗ ನೀಡಬಲ್ಲದು. ಉಳಿದ ಅವಧಿಯಲ್ಲಿ ಅವರು ನಿರುದ್ಯೋಗಿಗಳಾಗಿಯೇ ಇರುತ್ತಾರೆ. ಹೀಗಾಗಿ ಹಳ್ಳಿಗಳಲ್ಲಿ ನೇಕಾರಿಕೆಯಂತಹ ವ್ಯವಸಾಯೇತರ ಚಟುವಟಿಕೆಗೆ ಹೆಚ್ಚು ಮಹತ್ವ ನೀಡಬೇಕಿದೆ. ಗ್ರಾಮೋದ್ಯೋಗ ಎಂದರೆ ಕೃಷಿ ಮಾತ್ರ ಎಂಬ ಭಾವನೆ ಬದಲಾಗಬೇಕು ಎಂದು ಹೇಳಿದರು.

ಜೈಪುರದ ಭಾರತೀಯ ಕರಕುಶಲ ಸಂಸ್ಥೆಯ ನಿರ್ದೇಶಕಿ ತುಲಿಕಾ ಗುಪ್ತಾ, ಕೈಮಗ್ಗ ನೇಕಾರಿಕೆ ಕ್ಷೇತ್ರದಲ್ಲಿ ಕೆಲಸ ಮಾಡುವ ಕುಶಲಕರ್ಮಿಗಳು ಹಾಗೂ ವಿನ್ಯಾಸಕಾರರ ನೆರವಿನ ಕಂದಕವನ್ನು ನಿವಾರಿಸುವ ಅಗತ್ಯವಿದೆ. ಈ ಕಾರಣಕ್ಕಾಗಿಯೇ ರಾಜಸ್ಥಾನ ಸರ್ಕಾರ ಸಂಸ್ಥೆಯೊಂದನ್ನು ಸ್ಥಾಪಿಸಿದೆ ಎಂದು ತಿಳಿಸಿದರು.

ನಬಾರ್ಡ್ ಸಂಸ್ಥೆಯ ನಿರ್ದೇಶಕ ರವಿ, ‘ನಮ್ಮ ಸಂಸ್ಥೆಯು ಕೃಷಿ ಚಟುವಟಿಕೆಗೆ ಮಾತ್ರವಲ್ಲದೆ ಕೃಷಿಯೇತರ ಚಟುವಟಿಕೆಗೂ ವಿವಿಧ ಸರ್ಕಾರಿ ಇಲಾಖೆ ಹಾಗೂ ಬ್ಯಾಂಕ್‌ಗಳ ಮೂಲಕ ನೆರವು ನೀಡುತ್ತಿದೆ. ಈ ಪೈಕಿ ಕೈಮಗ್ಗ ನೇಕಾರಿಕೆ ಕ್ಷೇತ್ರ ಕೂಡ ಒಂದಾಗಿದೆ’ ಎಂದು ಹೇಳಿದರು.

ನೇಕಾರ ವೀರಪ್ಪ ಗೋರಂಠ್ಲಿ, ‘ಯಂತ್ರಗಳಿಂದ ದೊಡ್ಡ ಪ್ರಮಾಣದಲ್ಲಿ ಉತ್ಪಾದನೆ ಸಾಧ್ಯವಾದರೂ ಅದು ಪರಿಸರಕ್ಕೆ ಪೂರಕವಾಗಿಲ್ಲ. ಪರಿಸರ ಸಂರಕ್ಷಣೆ ವಿಷಯ ಈಗ ಮುನ್ನೆಲೆಗೆ ಬಂದಿರುವುದರಿಂದ ಕೈಮಗ್ಗ ನೇಕಾರಿಕೆಯ ಮಹತ್ವ ಹೆಚ್ಚಿದೆ’ ಎಂದರು.

ದೇಸಿ ಸಂಸ್ಥೆಯ ಮಾರಾಟ ವ್ಯವಸ್ಥಾಪಕಿ ಮೈಮುನಾ, ‘ಕೋವಿಡ್ ಸಂದರ್ಭದಲ್ಲಿ ದೇಸಿ ಸಂಸ್ಥೆ ಮಾರಾಟ ವಿಭಾಗ ದೊಡ್ಡ ಸಂಕಷ್ಟಕ್ಕೆ ಸಿಲುಕಿತ್ತು. ಚರಕ ಸಂಸ್ಥೆಗೆ ₹ 1.35 ಕೋಟಿ ಹಣ ಕೊಡುವ ಜವಾಬ್ದಾರಿ ಸಂಸ್ಥೆಯ ಮೇಲಿತ್ತು. ಈಗ ಆ ಜವಾಬ್ದಾರಿಯನ್ನು ಗ್ರಾಹಕರ ನೆರವಿನಿಂದಲೇ ದೇಸಿ ಸಂಸ್ಥೆ ಯಶಸ್ವಿಯಾಗಿ ನಿರ್ವಹಿಸಿದೆ’ ಎಂದು ತಿಳಿಸಿದರು.

ವಿನ್ಯಾಸಕಾರ ಗೋಪಿಕೃಷ್ಣ, ಜಪಾನ್‌ ವಿನ್ಯಾಸಕಾರ್ತಿ ಯೂಕೋ, ಗುಜರಾತ್‌ನ ನೇಕಾರಿಕೆ ಸಂಸ್ಥೆಯ ಭಾವನಾ ಮಾತನಾಡಿದರು. ಪದ್ಮಶ್ರೀ ನಿರೂಪಿಸಿದರು.

ಫಾಶನ್ ಶೋನಲ್ಲಿ ಹೆಜ್ಜೆ ಹಾಕಿದ ಹಳ್ಳಿಯ ಹೆಣ್ಣು ಮಕ್ಕಳು

ಫ್ಯಾಶನ್ ಶೋ ಎಂದರೆ ಕೇವಲ ದೊಡ್ಡ ನಗರಗಳಿಗೆ ಸೀಮಿತವಾದದ್ದು, ಆಧುನಿಕ ಶೈಲಿಯ ಉಡುಪುಗಳು ಇರಲೇಬೇಕು ಎಂಬ ಅಭಿಪ್ರಾಯವನ್ನು ಸುಳ್ಳು ಮಾಡಿದ್ದು ಚರಕ ಸಂಸ್ಥೆಯ ಉದ್ಯೋಗಿಗಳು.

ಚರಕ ಉತ್ಸವ-2021ರ ಅಂಗವಾಗಿ ಭಾನುವಾರ ನಡೆದ ಕೊಡು-ಕೊಳ್ಳುವವರ ಸಮಾವೇಶದಲ್ಲಿ ಚರಕದ ಹೆಣ್ಣು ಮಕ್ಕಳು ಕೈಮಗ್ಗ ನೇಕಾರಿಕೆಯ ಅಪ್ಪಟ ದೇಸಿ ಉಡುಪುಗಳೊಂದಿಗೆ ಲಯಬದ್ಧವಾಗಿ ಹೆಜ್ಜೆ ಹಾಕುವ ಮೂಲಕ ನೆರೆದಿದ್ದವರ ಗಮನ ಸೆಳೆದರು.

ಕೈಮಗ್ಗ ನೇಕಾರಿಕೆಯ ಉಡುಪು ಸರಳತೆ, ಸಾಂಪ್ರದಾಯಿಕತೆಯ ಜೊತೆಗೆ ಆಧುನಿಕತೆಗೂ ಒಗ್ಗುತ್ತದೆ ಎಂಬ ಸಂದೇಶವನ್ನು ಈ ಮೂಲಕ ಚರಕದ ಉದ್ಯೋಗಿಗಳು ನೀಡಿದರು. ಪುಟ್ಟ ಮಕ್ಕಳೂ ಖಾದಿ ಉಡುಪು ಧರಿಸಿ ಫ್ಯಾಶನ್ ಶೋನಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.