ADVERTISEMENT

ಸಮಾಜ ನಿರ್ಮಾಣದಲ್ಲಿ ಆರೋಗ್ಯ, ಶಿಕ್ಷಣಗಳ ಪಾತ್ರ ಹಿರಿದು: ದಿನೇಶ್ ಗುಂಡೂರಾವ್

​ಪ್ರಜಾವಾಣಿ ವಾರ್ತೆ
Published 28 ಮೇ 2025, 15:10 IST
Last Updated 28 ಮೇ 2025, 15:10 IST
ಕೋಣಂದೂರಿನಲ್ಲಿ ನೂತನವಾಗಿ ನಿರ್ಮಾಣಗೊಂಡ ಸಮುದಾಯ ಆರೋಗ್ಯ ಕೇಂದ್ರವನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಿದರು
ಕೋಣಂದೂರಿನಲ್ಲಿ ನೂತನವಾಗಿ ನಿರ್ಮಾಣಗೊಂಡ ಸಮುದಾಯ ಆರೋಗ್ಯ ಕೇಂದ್ರವನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಿದರು   

ಕೋಣಂದೂರು: ‘ಆರೋಗ್ಯ ಮತ್ತು ಶಿಕ್ಷಣ ಇಲಾಖೆಗಳು ಸಮಾಜವನ್ನು ನಿರ್ಮಾಣ ಮಾಡುವ ಪ್ರಮುಖ ಇಲಾಖೆಗಳು. ಸಮಾಜದಲ್ಲಿನ ಜನರಲ್ಲಿ ಶಕ್ತಿ ತುಂಬುವ ಕೆಲಸ ಮಾಡುತ್ತವೆ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಇಲ್ಲಿನ ನೂತನ ಸಮುದಾಯ ಆರೋಗ್ಯ ಕೇಂದ್ರವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಜನರ ಉಪಯೋಗಕ್ಕೆ ಲಭ್ಯವಾಗುವಂತೆ ಎಲ್ಲ ರೀತಿಯ ವ್ಯವಸ್ಥೆಯನ್ನು ಕಟ್ಟಡದಲ್ಲಿ ಮಾಡಲಾಗುವುದು. ತಾಲ್ಲೂಕು ಆಸ್ಪತ್ರೆಯಲ್ಲಿ ಎಂ.ಸಿ.ಎಚ್. ಆಸ್ಪತ್ರೆಯ ಬೇಡಿಕೆಯನ್ನು ಇಟ್ಟಿದ್ದಾರೆ. ಅದರ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗವುದು. ವೈದ್ಯರಿಗೆ ಗ್ರಾಮೀಣ ಮತ್ತು ನಗರ ಸೇವೆಯನ್ನು ಕಡ್ಡಾಯ ಮಾಡಲಾಗಿದೆ. ಸಿಬ್ಬಂದಿ ಕೊರತೆ ಇದ್ದು, ನೇಮಕ ಪ್ರಕ್ರಿಯೆ ನಡೆಯುತ್ತಿದೆ. ತಾಯಿ ಮತ್ತು ಮಗುವಿನ ಆರೋಗ್ಯ ಮುಖ್ಯ. ಹೆಣ್ಣುಮಕ್ಕಳು ಮೊದಲ ಆದ್ಯತೆಯಾಗಬೇಕು. ತಾಲ್ಲೂಕು ಆಸ್ಪತ್ರೆಯಲ್ಲಿ ಕೀಮೊಥೆರಪಿ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗುವುದು’ ಎಂದು ತಿಳಿಸಿದರು.

ADVERTISEMENT

‘ಆರೋಗ್ಯ ಮತ್ತು ಶಿಕ್ಷಣ ದೇಶದ ಪ್ರಗತಿಗೆ ಮುಖ್ಯ. ರಾಜ್ಯದಲ್ಲಿ ಎಸ್ಎಸ್ಎಲ್‌ಸಿಯಲ್ಲಿ ಪ್ರಥಮ ಸ್ಥಾನ ಪಡೆದ ತಾಲ್ಲೂಕು ತೀರ್ಥಹಳ್ಳಿ, ಪಿ.ಯು.ಸಿ. ಪ್ರಥಮ ರ‍್ಯಾಂಕ್ ಪಡೆದ ವಿದ್ಯಾರ್ಥಿನಿ ತೀರ್ಥಹಳ್ಳಿ ತಾಲ್ಲೂಕಿನವರು. ಆದ್ದರಿಂದ ತಾಲ್ಲೂಕಿನ ಎಲ್ಲ ಶಿಕ್ಷಕರಿಗೆ, ಪೋಷಕರಿಗೆ ಶುಭಾಶಯ ಹೇಳ ಬಯಸುತ್ತೇನೆ’ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

‘ನೂತನವಾದ ಸಮುದಾಯ ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಜಾಗವನ್ನು ದಾನವಾಗಿ ಕೊಟ್ಟ ಎರಡು ಕುಟುಂಬಗಳಿಗೆ ದೇವರು ಒಳ್ಳೆಯದು ಮಾಡಲಿ. ಸಿಬ್ಬಂದಿ ಹಾಗೂ ಸಲಕರಣೆಗಳನ್ನು ಆದಷ್ಟು ಬೇಗ ದೊರಕಿಸಿಕೊಡುವ ವ್ಯವಸ್ಥೆ ಮಾಡಿ ಕೊಡಿ ಎಂದು ಸಚಿವರಿಗೆ ಶಾಸಕ ಆರಗ ಜ್ಞಾನೇಂದ್ರ ಮನವಿ ಮಾಡಿದರು.

ಸಾಗರ ಕ್ಷೇತ್ರದ ಶಾಸಕ ಗೋಪಾಲ ಕೃಷ್ಣಬೇಳೂರು, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್, ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಸ್.ಹೇಮಂತ್, ತಹಶೀಲ್ದಾರ್ ಎಸ್.ರಂಜಿತ್, ಡಿ.ಎಚ್.ಒ. ನಟರಾಜ್, ಟಿ.ಎಚ್.ಒ. ಕೆ.ಟಿ.ಅನಿಕೇತನ್, ಕೋಣಂದೂರು ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಮಂಜುನಾಥ್ ,ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನ್ನಪೂರ್ಣ ವಾಸುದೇವ, ಉಪಾಧ್ಯಕ್ಷೆ ಸುಜಾತಾ ಚೂಡಾಮಣಿ, ಪ್ರಮುಖರಾದ ಪ್ರಸನ್ನ ಕುಮಾರ್, ಸುಂದರೇಶ್, ಕಲಗೋಡು ರತ್ನಾಕರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.