ADVERTISEMENT

ಶಿವಮೊಗ್ಗ | ನೀರಲ್ಲಿ ಮಿಂದೇಳಲು ಈಜುಕೊಳಗಳ ಮೊರೆ

ಬೇಸಿಗೆ ಶಿಬಿರದಲ್ಲಿ 900 ಜನರಿಗೆ ಈಜು ತರಬೇತಿ, ನುರಿತ ಈಜು ಪಟುಗಳಿಂದ ಮಾರ್ಗದರ್ಶನ

​ಪ್ರಜಾವಾಣಿ ವಾರ್ತೆ
Published 12 ಮೇ 2024, 5:25 IST
Last Updated 12 ಮೇ 2024, 5:25 IST
ಶಿವಮೊಗ್ಗದ ಗೋಪಾಳ ಬಳಿಯಿರುವ ಈಜುಕೊಳದಲ್ಲಿ ತರಬೇತುದಾರರು ಮಕ್ಕಳಿಗೆ ಈಜು ಕಲಿಸುತ್ತಿರುವುದು
ಶಿವಮೊಗ್ಗದ ಗೋಪಾಳ ಬಳಿಯಿರುವ ಈಜುಕೊಳದಲ್ಲಿ ತರಬೇತುದಾರರು ಮಕ್ಕಳಿಗೆ ಈಜು ಕಲಿಸುತ್ತಿರುವುದು   

ಶಿವಮೊಗ್ಗ: ಬಿಸಿಲಿನ ಪ್ರಖರತೆ ದಿನೇ ದಿನೇ ಏರುತ್ತಲೇ ಇದ್ದು, ಇದರಿಂದ ಪಾರಾಗಲು ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಯುವ ಜನರು ಈಜುಕೊಳಗಳತ್ತ ಮುಖಮಾಡುತ್ತಿದ್ದಾರೆ. 

ಜಿಲ್ಲೆಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಬೇಸಿಗೆ ಈಜು ತರಬೇತಿ ಶಿಬಿರ ಆಯೋಜಿಸಲಾಗಿದೆ. ಶಾಲೆ, ಕಾಲೇಜುಗಳಿಗೆ ರಜೆ ಇರುವುದರಿಂದ ಬಹುತೇಕ ಪಾಲಕರು ಮಕ್ಕಳಿಗೆ ಈಜು ಕಲಿಸಲು ಮುಂದಾಗಿದ್ದಾರೆ. ಮಕ್ಕಳ ಮನಸ್ಸು ಉಲ್ಲಾಸಿತವಾಗಿರಲಿ ಎಂಬುದು ಅವರ ಈ ನಡೆಯ ಹಿಂದಿನ ಉದ್ದೇಶ.

900 ಜನರಿಗೆ ತರಬೇತಿ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಇಲ್ಲಿನ ಗೋಪಾಳದ ಈಜುಕೊಳದಲ್ಲಿ ಅನುಭವಿ ಈಜುಪಟುಗಳಿಂದ ಆಸಕ್ತರಿಗೆ ತರಬೇತಿ ನೀಡಲಾಗುತ್ತಿದೆ. ಇದಕ್ಕಾಗಿಯೇ ನಾಲ್ವರು ತರಬೇತುದಾರರನ್ನು ನಿಯೋಜನೆ ಮಾಡಲಾಗಿದೆ. ಹೊಸದಾಗಿ ಈಜು ಕಲಿಯುತ್ತಿರುವವರ ಜೊತೆಗೆ ಈಜು ಬರುವವರೂ ನೀರಿನಲ್ಲಿ ಮಿಂದೇಳಲು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಿದ್ದಾರೆ. 

ADVERTISEMENT

ಇಲಾಖೆಯಿಂದ ಮೊದಲನೇ ಬೇಸಿಗೆ ಶಿಬಿರ ಏ. 1ರಿಂದ 28ರವರೆಗೆ ನಡೆಸಲಾಗಿತ್ತು. ಆಗ 500 ಜನರು ಈಜು ಕಲಿತಿದ್ದರು. ಈಗ ಎರಡನೇ ಹಂತ ಆರಂಭವಾಗಿದೆ. ಮೇ 2ರಿಂದ ಶುರುವಾಗಿರುವ ಈ ಶಿಬಿರ ಮೇ 28ರವರೆಗೆ ನಡೆಯಲಿದೆ. ಈ ತಂಡದಲ್ಲಿ 400 ಜನರಿದ್ದಾರೆ. 

‘4 ವರ್ಷ ಮೇಲ್ಪಟ್ಟವರಿಗೆ ಈಜು ಕಲಿಸಲಾಗುತ್ತದೆ. 4 ರಿಂದ 8 ವರ್ಷದೊಳಗಿನ ಮಕ್ಕಳು ಈಜು ಕಲಿಯಬೇಕಾದರೆ ಅವರ ಪಾಲಕ ಮತ್ತು ಪೋಷಕರು ಕಡ್ಡಾಯವಾಗಿ ಸ್ಥಳದಲ್ಲಿ ಹಾಜರಿರಬೇಕು. ಇದರಿಂದಾಗಿ ಮಕ್ಕಳ ಮೇಲೆ ನಿಗಾ ಇಡಲು ಹಾಗೂ ಸುರಕ್ಷತೆಗೆ ಆದ್ಯತೆ ನೀಡಲು ಅನುಕೂಲವಾಗುತ್ತದೆ’ ಎಂದು ಇಲಾಖೆ ಅಧಿಕಾರಿಗಳು ಹೇಳುತ್ತಾರೆ. 

ಅನುಭವಿ ತರಬೇತುದಾರರಿಂದ ಈಜು ಕಲಿಸಲಾಗುತ್ತಿದೆ. ಸುರಕ್ಷತೆಗೆ ಒತ್ತು ಕೊಡಲಾಗಿದೆ. ಮೊದಲ ಬ್ಯಾಚ್‌ನಲ್ಲಿ 500 ಜನ ಈಜು ಕಲಿತಿದ್ದಾರೆ. 2ನೇ ಬ್ಯಾಚ್‌ನಲ್ಲಿ 400 ಜನರು ತರಬೇತಿ ಪಡೆಯುತ್ತಿದ್ದಾರೆ.
ಮಂಜುನಾಥಸ್ವಾಮಿ, ಸಹಾಯಕ ನಿರ್ದೇಶಕ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ

ಬೆಳಿಗ್ಗೆ 6ರಿಂದ 11ರವರೆಗೆ ಮತ್ತು ಸಂಜೆ 4ರಿಂದ ರಾತ್ರಿ 7ರವರೆಗೆ ತರಬೇತಿ ನಡೆಯುತ್ತದೆ. ಮಕ್ಕಳು ಮತ್ತು ವಯಸ್ಕರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. 

‘ಈಜುಕೊಳದಲ್ಲಿ 10 ಲೇನ್‌ಗಳು ಇವೆ. ಒಂದೊಂದು ಲೇನ್‌ 50 ಮೀಟರ್‌ ಉದ್ದ ಇವೆ. ನೀರಿಗೆ ಧುಮುಕುವ ಸ್ಥಳದಲ್ಲಿ ನೀರಿನ ಆಳ 4 ಅಡಿ ಇರುತ್ತದೆ. ಲೇನ್‌ನ ಮತ್ತೊಂದು ತುದಿಯಲ್ಲಿ ನೀರಿನ ಆಳ 6 ಅಡಿ ಇದೆ. ಒಂದು ತಂಡಕ್ಕೆ ಒಂದು ಗಂಟೆ ನಿಗದಿ ಮಾಡಲಾಗಿದೆ. ಯಾವ ರೀತಿಯ ತೊಂದರೆಯೂ ಆಗದಂತೆ ತರಬೇತಿ ನೀಡಲಾಗುತ್ತದೆ. ತರಬೇತುದಾರರು ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ’ ಎಂದು ಶಿಬಿರಾರ್ಥಿಯ ಪಾಲಕಿ ಪ್ರೇಮಾ ಹೇಳಿದರು. 

ಮನಸ್ಸಿಗೂ ಉಲ್ಲಾಸ 

ಶಾಲೆಗಳಿಗೆ ರಜೆ ಇದೆ. ಹೀಗಾಗಿ ಈಜು ಕಲಿಯಲು ಇಲ್ಲಿಗೆ ಬಂದಿದ್ದೇನೆ. ಬಿಸಿಲು ಕೂಡ ವಿಪರೀತವಾಗಿದೆ. ಈಜಾಡುವುದರಿಂದಾಗಿ ಬಿಸಿಲ ಧಗೆಯಿಂದಲೂ ಪಾರಾಗಬಹುದು. ಮನಸ್ಸಿಗೂ ಉಲ್ಲಾಸ ಸಿಗುತ್ತಿದೆ. ಶಾಲೆ ಆರಂಭವಾದ ಬಳಿಕ ಈಜು ಕಲಿಯಲು ಆಗುವುದಿಲ್ಲ. ಹೀಗಾಗಿ ಬೇಸಿಗೆಯಲ್ಲಿ ತರಬೇತಿ ಪಡೆಯುತ್ತಿದ್ದೇನೆ. –ಎನ್. ನವೀನ್ ವಿದ್ಯಾರ್ಥಿ

ಶಿವಮೊಗ್ಗದ ಗೋಪಾಳ ಬಳಿಯಿರುವ ಈಜುಕೊಳದಲ್ಲಿ ಧುಮುಕುತ್ತಿರುವ ಯುವಕರು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.