ಸಾಗರ: ತಾಲ್ಲೂಕಿನಾದ್ಯಂತ ಕಳೆದ ಕೆಲವು ದಿನಗಳಿಂದ ವರುಣನ ಆರ್ಭಟ ಜೋರಾಗಿದ್ದು ನಿರಂತರ ಮುಸಲಧಾರೆಯಿಂದ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ವರದಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು ತಾಳಗುಪ್ಪ ಹೋಬಳಿಯ ಹಲವು ಗ್ರಾಮಗಳ ಕೃಷಿ ಭೂಮಿಗೆ ನೆರೆಯ ಭೀತಿ ಎದುರಾಗಿದೆ.
ಕೃಷಿ ಇಲಾಖೆ ಮೂಲಗಳ ಪ್ರಕಾರ ತಾಲ್ಲೂಕಿನಲ್ಲಿ ಜುಲೈ 3ರವರೆಗೆ ವಾಡಿಕೆಯಂತೆ 70 ಸೆಂ.ಮೀ. ಮಳೆಯಾಗಬೇಕಿತ್ತು. ಈ ವರ್ಷ 116.8 ಸೆಂ.ಮೀ. ಮಳೆಯಾಗಿದೆ. ಕಳೆದ ಗುರುವಾರ 9.4 ಸೆಂ.ಮೀ. ಮಳೆಯಾಗಿದ್ದು 24 ಗಂಟೆಗಳ ಅವಧಿಯಲ್ಲಿ ಈ ವರ್ಷ ಹೆಚ್ಚು ಮಳೆಯಾಗಿರುವ ದಿನ ಇದಾಗಿದೆ.
ಆಗಾಗ ಬಿಡುವು ನೀಡುತ್ತಿದ್ದರೂ ಮಳೆಯ ಅಬ್ಬರ ಜೋರಾಗಿಯೇ ಇದೆ. ಮಳೆ, ಗಾಳಿಯ ಆರ್ಭಟದ ನಡುವೆಯೂ ಕೃಷಿ ಚಟುವಟಿಕೆ ಬಿರುಸುಗೊಂಡಿದೆ. ತಾಲ್ಲೂಕಿನಲ್ಲಿ 12,450 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದ್ದು ಈ ಪೈಕಿ ಈವರೆಗೆ 700 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಹಾಗೂ ನಾಟಿ ಕಾರ್ಯ ಪೂರ್ಣಗೊಂಡಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ತಾಲ್ಲೂಕಿನ 700 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗುತ್ತಿದ್ದು ಈವರೆಗೆ 650 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಮುಗಿದಿದೆ. ಬಿತ್ತನೆ ಬೀಜ, ರಸಗೊಬ್ಬರ ಅಗತ್ಯ ಪ್ರಮಾಣದಲ್ಲಿ ದಾಸ್ತಾನು ಇದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆ ಅಡಿಕೆ ಆಗಿದ್ದು, ನಿರಂತರವಾಗಿ ಮಳೆಯಾಗುತ್ತಿರುವುದು ಅಡಿಕೆ ತೋಟಗಳಿಗೆ ಕೊಳೆ ನಿಯಂತ್ರಣ ಔಷಧಿ ಸಿಂಪಡಿಸಲು ಬೆಳೆಗಾರರಿಗೆ ಅಡ್ಡಿಯಾಗಿದೆ. ಮಳೆಯ ಪ್ರಮಾಣ ಹೆಚ್ಚಾದರೆ ಕೊಳೆ ರೋಗ ವ್ಯಾಪಿಸಬಹುದು ಎಂಬ ಆತಂಕದಲ್ಲಿ ಬೆಳೆಗಾರರಿದ್ದಾರೆ. ಮಳೆ ಬಿಡುವು ನೀಡಿದರೆ ಕೊಳೆ ನಿಯಂತ್ರಣಕ್ಕೆ ಔಷಧಿ ಸಿಂಪಡಿಸಬಹುದು ಎಂಬ ಲೆಕ್ಕಾಚಾರ ಬೆಳೆಗಾರದ್ದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.