ADVERTISEMENT

ಹೋರಿ ಬೆದರಿಸುವ ಹಬ್ಬ: ಯುವ ರೈತರ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2025, 6:30 IST
Last Updated 25 ಅಕ್ಟೋಬರ್ 2025, 6:30 IST
ಶಿಕಾರಿಪುರದ ದೊಡ್ಡಕೇರಿಯಲ್ಲಿ ಶುಕ್ರವಾರ ದೀಪಾವಳಿ ಅಂಗವಾಗಿ ಹೋರಿ ಬೆದರಿಸುವ ಹಬ್ಬದಲ್ಲಿ ಪಾಲ್ಗೊಂಡಿದ್ದ ಹೋರಿ ಓಡುತ್ತಿರುವುದು
ಶಿಕಾರಿಪುರದ ದೊಡ್ಡಕೇರಿಯಲ್ಲಿ ಶುಕ್ರವಾರ ದೀಪಾವಳಿ ಅಂಗವಾಗಿ ಹೋರಿ ಬೆದರಿಸುವ ಹಬ್ಬದಲ್ಲಿ ಪಾಲ್ಗೊಂಡಿದ್ದ ಹೋರಿ ಓಡುತ್ತಿರುವುದು   

ಶಿಕಾರಿಪುರ: ದೀಪಾವಳಿ ಹಬ್ಬದ ಅಂಗವಾಗಿ ನಡೆಯುವ ಹೋರಿ ಬೆದರಿಸುವ ಹಬ್ಬವು ಪಟ್ಟಣದ ದೊಡ್ಡಕೇರಿಯಲ್ಲಿ ಶುಕ್ರವಾರ ನೂರಾರು ಯುವಕರ ಹಷೋದ್ಗಾರದ ನಡುವೆ ಅದ್ದೂರಿಯಾಗಿ ನಡೆಯಿತು.

ವಿಶೇಷ ಅಲಂಕಾರ: ದೀಪಾವಳಿ ಪ್ರಯುಕ್ತ ಎತ್ತುಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಎತ್ತಿನ ಕೊಂಬಿಗೆ ಬಣ್ಣ ಹಚ್ಚಲಾಗಿತ್ತು.  ಮೈಮೇಲೆ ವಿವಿಧ ಬಣ್ಣಗಳಿಂದ ಬಿಡಿಸಿದ ಚಿತ್ತಾರ, ಕೊರಳು ಹಾಗೂ ಕಾಲಿಗೆ ಗೆಜ್ಜೆ ಕಟ್ಟಿ, ಬಣ್ಣದ ಟೇಪ್‌ಗಳಿಂದ ಸಿಂಗರಿಸಲಾಗಿತ್ತು. ಎತ್ತುಗಳ ಕೊರಳು ಹಾಗೂ ಹೊಟ್ಟೆಗೆ ಕೊಬ್ಬರಿ ಸರ, ಪೀಪಿ, ಆಲಂಕಾರಿಕ ಹೂವುಗಳನ್ನು ಕಟ್ಟಿ, ಸಿಂಗರಿಸಿ ಅವುಗಳನ್ನು ಹೋರಿ ಬೆದರಿಸುವ ಸ್ಥಳಕ್ಕೆ ಕರೆತರುವ ದೃಶ್ಯ ಸಾಮಾನ್ಯವಾಗಿತ್ತು.

ಯುವ ರೈತರ ಸಾಹಸ ಕ್ರೀಡೆಗಳಲ್ಲಿ ಒಂದಾದ ಹೋರಿ ಬೆದರಿಸುವ ಹಬ್ಬದಲ್ಲಿ ಕೇಳಿ ಬರುವ ಘೋಷಣೆ ‘ಹಾಕ್ರೋ ಕೈ, ಮುಟ್ರೋ ಮೈ...’ ಎಂದು ಕೂಗುತ್ತಾ ತಮ್ಮ ಹೋರಿಯನ್ನು ಓಡಿಸುತ್ತಾರೆ. ಅದನ್ನು ಹಿಡಿಯುವುದಕ್ಕಾಗಿ ಯುವಕರ ದಂಡು ಮುಂದಾಗುತ್ತದೆ. ಹೋರಿಯನ್ನು ಬೆದರಿಸಿ, ಅದನ್ನು ಹಿಡಿಯುವ ಸಾಹಸಿಗೆ ಬಹುಮಾನ ಘೋಷಿಸಲಾಗಿತ್ತು. ಇದು ಸಾಂಪ್ರದಾಯಿಕ ಆಚರಣೆ ಆಗಿದ್ದರಿಂದ ಯಾವುದೇ ಸಂಘಟನೆ ಆಯೋಜನೆ ಮಾಡದೇ, ರೈತರೇ ಸ್ವತಃ ತಮ್ಮ ಖುಷಿಗಾಗಿ ಬಹುಮಾನ ನೀಡಿದರು.

ADVERTISEMENT

ಹೊಸ ಟ್ರೆಂಡ್: ರೈತರು ತಮ್ಮ ಹೊಲಗಳನ್ನು ಉಳುವುದರ ಜೊತೆಗೆ ಹೋರಿ ಬೆದರಿಸುವ ಸಂದರ್ಭದಲ್ಲೂ ಬಳಸುವುದು ಸಾಮಾನ್ಯ. ಆದರೆ ತಾಲೂಕಿನಲ್ಲಿ ಇದೀಗ ಹೊಸ ಪ್ರವೃತ್ತಿ ಆರಂಭಗೊಂಡಿದೆ. ಹೋರಿ ಬೆದರಿಸುವ ಹಬ್ಬಕ್ಕಾಗಿಯೇ ಹತ್ತಾರು ಯುವ ಕೃಷಿಕರು ಸೇರಿಕೊಂಡು ಹಣ ಹಾಕಿ ಎತ್ತನ್ನು ಖರೀದಿಸಿ ಅದನ್ನು ಸ್ಪರ್ಧೆಗೆ ಸಜ್ಜುಗೊಳಿಸುತ್ತಿದ್ದಾರೆ. ತಾಲ್ಲೂಕಿನಲ್ಲಿ ಕೃಷಿ ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಸಂತೆ ವ್ಯಾಪಾರ ಮಾಡುವವರು, ಹಮಾಲಿಗಳು ಹಣ ಒಟ್ಟುಗೂಡಿಸಿ, ಎತ್ತನ್ನು ಖರೀದಿಸಿದ್ದಾರೆ. ಅಂತಹ ಹಲವು ಎತ್ತುಗಳು ಸ್ಪರ್ಧೆðಯಲ್ಲಿ ಪಾಲ್ಗೊಂಡಿದ್ದವು.

ನಾಮ ವಿಶೇಷ: ಹೋರಿ ಬೆದರಿಸುವ ಹಬ್ಬದಲ್ಲಿ ಪಾಲ್ಗೊಳ್ಳುವ ಎತ್ತುಗಳನ್ನು ಬಗೆ ಬಗೆಯ ಹೆಸರಿನಿಂದ ಕರೆಯಲಾಗುತ್ತದೆ. ಅಘೋರ, ರಾಮ ಪರಶುರಾಮ, ಚಂದ್ರಗುತ್ಯೆಮ್ಮ, ಗೋಣೆರ ಅಧಿಕಾರ, ಗೋಣೆರ ಆಡಳಿತ, ಲಕ್ಷಾಧಿಪತಿ, ಗಾಂಧಿನಗರದ ಮಹಾರಾಜ, ಶಿರಾಳಕೊಪ್ಪದ ಕನಕ, ಸಿಕ್ಸ್‌ಪ್ಯಾಕ್ ಶಿವ, ಭಂಡಾರದ ಒಡೆಯ, ಹೈಸ್ಪೀಡ್ ಛತ್ರಪತಿ, ಸಂಡದ ಕಿಂಗ್, ಚನ್ನಳ್ಳಿ ಅಶ್ವಮೇಧ, ಗೌಡರ ಹುಲಿ, ಸೃಷ್ಟಿಕರ್ತ, ಯಮರಾಜ, ಹೈಸ್ಪೀಡ್ ಕ್ರಾಂತಿವೀರ, 7 ಸ್ಟಾರ್, ಕ್ರಾಂತಿವೀರ ಕಿಂಗ್, ಐಬಿ ಕಿಂಗ್, ಭಸ್ಮಾಸುರ, ಭೀಮಣ್ಣಾರ ಹುಲಿ, ಪಚ್ಚೇರ ಶಿವನಂದಿ, ದೂಪದಹಳ್ಳಿ ರಾಜರತ್ನ, ದೊಡ್ಡಕೇರಿ ಪೈಲ್ವಾನ್, ದಂತಚೋರ ವೀರಪ್ಪನ್ ಇತರೆ ಹಲವು ಹೆಸರುಗಳು ಗಮನ ಸೆಳೆದವು.

ಪ್ರಾಯೋಜಿತ: ಹಬ್ಬದಲ್ಲಿ ವಿಶೇಷ ಎತ್ತುಗಳೊಂದಿಗೆ ಗುರುತಿಸಿಕೊಳ್ಳುವುದಕ್ಕಾಗಿಯೇ ಯುವಕ ದಂಡೇ ನೆರೆದಿರುತ್ತದೆ. ಹೋರಿಗಳೊಂದಿಗೆ ಬರುವ ಮಾಲೀಕರು, ತಮ್ಮ ಹೋರಿಗೆ ದಾರಿ ತೋರಿಸುವ ಯುವಕರಿಗೆ ಪ್ರತ್ಯೇಕ ಟೀಶರ್ಟ್, ಬಾವುಟ, ಎತ್ತಿನ ಹೆಸರಿರುವ ನಾಮಫಲಕ ನೀಡುತ್ತಾರೆ. ಇಂತಹ ಯುವಕರ ತಂಡ ಇತ್ತೀಚಿನ ದಿನಗಳಲ್ಲಿ ಹೆಚ್ಚಿದ್ದು, ಹೋರಿ ಬೆದರಿಸುವ ಹಬ್ಬವು ಪ್ರಾಯೋಜಿತ ಹಂತಕ್ಕೆ ಬೆಳೆಯುತ್ತಿರುವುದು ಈ ಬಾರಿ ಕಂಡುಬಂದಿದ್ದು ವಿಶೇಷ.

ಹಾವೇರಿ, ಹಾನಗಲ್, ಹಿರೇಕೆರೂರು, ಹೊನ್ನಾಳಿ ಸೇರಿದಂತೆ ಸುತ್ತಮುತ್ತಲಿನ ನೂರಕ್ಕೂ ಹೆಚ್ಚು ಹೋರಿಗಳು ಹಬ್ಬದಲ್ಲಿ ಪಾಲ್ಗೊಂಡಿದ್ದವು. 15ಕ್ಕೂ ಹೆಚ್ಚು ಯುವಕರಿಗೆ ಸಣ್ಣ ಪುಟ್ಟ ಗಾಯಗಾಳಾಗಿದ್ದು, ಹರಗುವಳ್ಳಿಯ ಹೋರಿ ಸಾವನ್ನಪ್ಪಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.