
ಹೊಸನಗರ: ದೀಪಾವಳಿ ಹಬ್ಬದ ಕೊನೆಯ ಆಚರಣೆ ಹೊಸತೊಡಕು ತಾಲ್ಲೂಕಿನಲ್ಲಿ ಸಡಗರ ಹೆಚ್ಚಿಸಿತ್ತು. ಮಲೆನಾಡಿನ ಈ ವಿಶಿಷ್ಟ ಸಂಪ್ರದಾಯಿಕ ಆಚರಣೆಯಲ್ಲಿ ಕೃಷಿಕರು ಪಾಲ್ಗೊಂಡಿದ್ದರು.
ನಸುಕಿನಲ್ಲಿ ರೈತರು ತಮ್ಮ ಹೊಲಗದ್ದೆಗಳಿಗೆ ತೆರಳಿ, ಭೂಮಿ ತಾಯಿಯನ್ನು ಪೂಜಿಸಿ ಹೊಸ ಭತ್ತದ ತೆನೆಯನ್ನು ಕಿತ್ತು ಮನೆಗೆ ತಂದರು. ಹೊಸ ಭತ್ತದ ತೆನೆಯನ್ನು ತುಳಸಿಕಟ್ಟೆ ಹಾಗೂ ಮನೆಯ ಹೆಬ್ಬಾಗಿಲುಗಳಿಗೆ ಕಟ್ಟಿ ಶೃಂಗರಿಸಿದರು. ನಂತರ ಹೊಸ ಭತ್ತದ ಕಾಳನ್ನು ಬಿಡಿಸಿ ಹೊಸ ಅಕ್ಕಿಯ ಪಾಯಸ ಮಾಡಿದರು. ಇದನ್ನು ಊಟಕ್ಕೆ ಮೊದಲು ಅರಿಶಿನ ಎಲೆಯ ಮೇಲೆ ಬಡಿಸಿ ಮನೆ ಮಂದಿಯಲ್ಲ ಸವಿಯುವುದು ವಾಡಿಕೆ. ಈ ಮೂಲಕ ಈ ವರ್ಷದ ಹೊಸ ಪೈರನ್ನು ಮನೆಗೆ ಆಹ್ವಾನಿಸುವ, ಸವಿಯುವ ಕ್ರಮವನ್ನು ಮಲೆನಾಡಿನ ಕೃಷಿಕ ಕುಟುಂಬಗಳು ಹಿಂದಿನಿಂದಲೂ ಆಚರಿಸುತ್ತಿವೆ.
ಕೃಷಿ ಪರಿಕರಗಳಿಗೂ ಪೂಜೆ: ಕೃಷಿ ಕುಟುಂಬಗಳ ಸದಸ್ಯರು ಸಾಂಪ್ರದಾಯಿಕ ಕೃಷಿ ಪರಿಕರಗಳಿಗೂ ವಿಶೇಷ ಪೂಜೆ ಸಲ್ಲಿಸಿದರು. ನೇಗಿಲು, ನೊಗ, ನರಕೋಲು, ಜೊತಗ, ಕೊರಡು, ಹಡಿಮಂಚ, ಹೆಡಿಗೆ, ಬುಟ್ಟಿ, ಹಾರೆ, ಗುದ್ದಲಿ, ಪಿಕಾಸಿ, ಹಗ್ಗಗಳನ್ನು ಮನೆಯ ಅಂಗಳದಲ್ಲಿ ಅಂದವಾಗಿ ಜೋಡಿಸಿಟ್ಟು ಬಗೆ ಬಗೆ ಹೂವುಗಳಿಂದ ಸಿಂಗರಿಸಿದರು. ನಂತರ ಮನೆಯ ಯಜಮಾನ ವಿಶೇಷ ಪೂಜೆ ನೆರವೇರಿಸುವ ಸಂಪ್ರಾದಾಯವಿದೆ. ಈ ಹಿಂದೆ, ಎತ್ತಿನಗಾಡಿಗಳಿಗೆ ಪೂಜೆ ಸಲ್ಲಿಸಿ, ಎತ್ತಿನಗಾಡಿ ಓಟದ ಸ್ಪರ್ಧೆ ನಡೆಸಲಾಗುತ್ತಿತ್ತು. ಈಗ ಎತ್ತಿನಗಾಡಿಗಳು ಕಣ್ಮರೆ ಆಗಿವೆ.
ವಾಹನಗಳಿಗೆ ಪೂಜೆ: ಹೊಸತೊಡಕು ಹಬ್ಬದ ದಿನದಂದು ವಾಹನ ಮಾಲೀಕರು ತಮ್ಮ ವಾಹನಗಳನ್ನು ಹೂವಿನಿಂದ ಅಲಂಕಾರ ಮಾಡಿ ಪೂಜಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.