ಹೊಸನಗರ: ತಾಲ್ಲೂಕಿನ ಪ್ರಸಿದ್ಧ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ ಫೆ. 4ರಿಂದ ಆರಂಭವಾಗಲಿದ್ದು, 9 ದಿನಗಳ ಕಾಲ ನೆರವೇರಲಿದೆ.
ಮಂಗಳವಾರ ಬೆಳಿಗ್ಗೆ 8 ಗಂಟೆಯಿಂದ ದೇವಿಯ ತವರು ಮನೆಯೆಂದೇ ಕರೆಯಲ್ಪಡುವ ಹಳೇ ಸಾಗರ ರಸ್ತೆಯಲ್ಲಿರುವ ದುರ್ಗಾಂಬಾ ದೇವಿ ದೇವಸ್ಥಾನದಲ್ಲಿ ಮಾರಿಯಮ್ಮ ದೇವಿಯ ಪ್ರತಿಷ್ಠಾಪನೆ ನಡೆಯಲಿದೆ. ರಾತ್ರಿ 9 ಗಂಟೆವರೆಗೆ ಅಲ್ಲಿ ಪೂಜಾ ಕಾರ್ಯಕ್ರಮಗಳು ನೆರವೇರಲಿವೆ. ತವರು ಮನೆಯಲ್ಲಿ ದೇವಿಯ ದರ್ಶನ ಪಡೆದು ಪೂಜೆ ಮಾಡಿಸಿ ಮಡಿಲು ತುಂಬಿ ಹರಕೆ ಒಪ್ಪಿಸುವುದು ವಾಡಿಕೆ.
ಬಳಿಕ ಮಾರಿಯಮ್ಮ ದೇವಿಯ ಮೂರ್ತಿಯನ್ನು ಮಾರಿಗುಡ್ಡದಲ್ಲಿರುವ ಗಂಡನ ಮನೆಯಲ್ಲಿ 8 ದಿನಗಳ ಕಾಲ ಪ್ರತಿಷ್ಠಾಪಿಸಿ ಅಲ್ಲಿ ಜಾತ್ರಾ ಮಹೋತ್ಸವ ನೆರವೇರಿಸಲಾಗುವುದು.
ಜಾತ್ರೆ ಅಂಗವಾಗಿ ಪ್ರತಿ ದಿನ ರಾತ್ರಿ ದೂರದರ್ಶನ ಕಲಾವಿದರಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ. ಫೆ. 6ರಂದು ಸಾಂಸ್ಕೃತಿಕ ಕಾರ್ಯಕ್ರಮ, 7ರಂದು ಭದ್ರಾವತಿ ತಂಡದಿಂದ ಆರ್ಕೆಸ್ಟ್ರಾ, 8ರಂದು ಲೈವ್ ಮ್ಯೂಸಿಕ್ ಆರ್ಕೆಸ್ಟ್ರಾ, 9ರಂದು ಕುಂದಾಪುರ ರೂಪಕಲಾ ತಂಡದಿಂದ ‘ಇನ್‌ಸ್ಪೆಕ್ಟರ್ ಅಣ್ಣಪ್ಪ’ ನಾಟಕ, 10ರಂದು ಡೆಸ್ಟನಿ ಡಾನ್ಸ್ ಕೊಪ್ಪದ ಅವರಿಂದ ನೃತ್ಯ ಕಾರ್ಯಕ್ರಮ, 11ರಂದು ಮ್ಯೂಸಿಕಲ್ ನೈಟ್ ಹಾಗೂ ವೈವಿಧ್ಯಮಯ ನೃತ್ಯ ಕಾರ್ಯಕ್ರಮಗಳು ನಡೆಯಲಿವೆ ಎಂದು ಸಮಿತಿ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.