ADVERTISEMENT

ಜಾನಪದ ವಿದ್ವಾಂಸ ಹುಚ್ಚಪ್ಪ ಮಾಸ್ತರ್‌ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 18 ಜುಲೈ 2019, 16:52 IST
Last Updated 18 ಜುಲೈ 2019, 16:52 IST
ಎನ್. ಹುಚ್ಚಪ್ಪ ಮಾಸ್ತರ್.
ಎನ್. ಹುಚ್ಚಪ್ಪ ಮಾಸ್ತರ್.   

ಸಾಗರ: ಹಿರಿಯ ಜಾನಪದ ವಿದ್ವಾಂಸ ಎನ್.ಹುಚ್ಚಪ್ಪ ಮಾಸ್ತರ್ (82) ಬುಧವಾರ ತಡರಾತ್ರಿ ನಿಧನರಾಗಿದ್ದಾರೆ. ಅವರಿಗೆ ಪತ್ನಿ, ಮೂವರು ಪುತ್ರರು ಇದ್ದಾರೆ. ಅಂತ್ಯಸಂಸ್ಕಾರ ಗುರುವಾರ ನಗರದ ಮಾರಿಕಾಂಬಾ ರುದ್ರಭೂಮಿಯಲ್ಲಿ ನಡೆಯಿತು.

ಗಾಂಧಿ ಚಿಂತನೆಗಳಿಂದ ಪ್ರಭಾವಿತರಾಗಿದ್ದ ಹುಚ್ಚಪ್ಪ ಮಾಸ್ತರ್ ತಾಲ್ಲೂಕಿನ ಹಿರೇಮನೆ ಗ್ರಾಮದಲ್ಲಿ ಗಿರಿಜನರಿಗಾಗಿ ಶಿಕ್ಷಣ ಸಂಸ್ಥೆ ಆರಂಭಿಸಿದ್ದರು.

ಜಾನಪದ ಕ್ಷೇತ್ರದಲ್ಲಿ ಪರಿಣತಿ ಗಳಿಸಿದ್ದ ಅವರು ರಂಗಭೂಮಿಯಲ್ಲಿ ನಟರಾಗಿ, ಗಾಯಕರಾಗಿ ಹೆಸರು ಮಾಡಿದ್ದರು.

ADVERTISEMENT

‘ಹಸಲರು’, ‘ಚಂದ್ರಗುತ್ತಿ ರೇಣುಕಾಂಬೆ ಜಾತ್ರೆ’, ‘ಗಿರಿಜನ ಸಂಸ್ಕೃತಿ’, ‘ಗೊಂಡರು ಮತ್ತು ಇತರ ಲೇಖನಗಳು’, ‘ಮಲೆನಾಡು ದೀವರ ಸಾಂಸ್ಕೃತಿಕ ಸಂಕಥನ’ ಕೃತಿಗಳನ್ನು ರಚಿಸಿದ್ದ ಮಾಸ್ತರರು, ‘ಕಾಗೋಡು ಚಳವಳಿ-ಸುವರ್ಣ ಸಂಪುಟ’, ‘ಸಾಧನೆಯ ಹರಿಕಾರ ಕಾಗೋಡು ತಿಮ್ಮಪ್ಪ’ ಕೃತಿಯ ಸಂಪಾದಕರಾಗಿ ಕೆಲಸ ಮಾಡಿದ್ದರು.

ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಜಿಶಂಪ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದ ಅವರು, ಸಾಗರ ತಾಲ್ಲೂಕು ಹಾಗೂ ಶಿವಮೊಗ್ಗ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯರಾಗಿದ್ದ ಅವರು ಕಾಗೋಡು ರಂಗಮಂಚ, ರಂಗಸಂಕುಲ, ಜಾನಪದ ಕಣಜ ಸಂಸ್ಥೆಗಳ ಹುಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.