ADVERTISEMENT

ಪಾರಂಪರಿಕ ಕೃಷಿ ಪದ್ಧತಿಯಲ್ಲಿ ವಾಣಿಜ್ಯ ಬೆಳೆ; ಯುವ ರೈತನ ಸಾಧನೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2021, 9:02 IST
Last Updated 7 ಜುಲೈ 2021, 9:02 IST
ಮೊಹನ್‌ ಕುಮಾರ್‌ ಜೈನ್‌ ತಾವು ಬೆಳೆದಿರುವ ಗಜನಿಂಬೆ ಜತೆ
ಮೊಹನ್‌ ಕುಮಾರ್‌ ಜೈನ್‌ ತಾವು ಬೆಳೆದಿರುವ ಗಜನಿಂಬೆ ಜತೆ   

ಕಾರ್ಗಲ್‌: ಹಿರಿಯರಿಂದ ಬಳುವಳಿಯಾಗಿ ದೊರೆತ ಜಮೀನಿನಲ್ಲಿ ಪಾರಂಪರಿಕ ಕೃಷಿ ಪದ್ಧತಿಯೊಂದಿಗೆ ವಾಣಿಜ್ಯ ಬೆಳೆ ಬೆಳೆದು ಉತ್ತಮ ಆದಾಯ ಕಂಡುಕೊಂಡ ಸಾಗರ ತಾಲ್ಲೂಕು ಭಾರಂಗಿ ಹೋಬಳಿಯ ಬಿದರೂರು ಗ್ರಾಮದ ಯುವ ಕೃಷಿಕ ಮೋಹನ ಕುಮಾರ್ ಜೈನ್ ಗಮನ ಸೆಳೆದಿದ್ದಾರೆ.

ಒಟ್ಟು 3 ಎಕರೆ ಜಮೀನಿನಲ್ಲಿ ಅರ್ಧ ಪಾಲು ಅಡಿಕೆ ಕೃಷಿಗೆ ಮೀಸಲಿಟ್ಟು, ಇನ್ನುಳಿದ ಅರ್ಧಭಾಗದಲ್ಲಿ ತೆಂಗು, ಬಾಳೆ, ಕಾಳುಮೆಣಸು, ಅರಿಸಿನ, ಕಬ್ಬು, ಗಜನಿಂಬೆ, ಲವಂಗ, ಜಾಯಿಕಾಯಿ, ಗೇರು, ಹಲಸು, ಮಾವು ಬೆಳೆಯುವ ಮೂಲಕ ಉತ್ತಮ ಆದಾಯ ಗಳಿಸಿದ್ದಾರೆ.

ಜಮೀನಿನ ಎತ್ತರದ ದಿಣ್ಣೆಯಲ್ಲಿ ಕೆರೆ ತೋಡಿ, ಗಿಡ ಮರಗಳಿಗೆ ನೀರುಣಿಸುವ ಕೆಲಸ ಮಾಡುತ್ತಿದ್ದಾರೆ. 750ಕ್ಕೂ ಹೆಚ್ಚು ಗೇರು ಗಿಡಗಳನ್ನು ಬೆಳೆಯುವ ಮೂಲಕ ವೆಚ್ಚವಿಲ್ಲದೆ ಆದಾಯದ ಮೂಲವನ್ನು ಕಂಡುಕೊಂಡಿದ್ದಾರೆ. 3 ಎಕರೆ ಜಮೀನಿನ ಸುತ್ತಲೂ ಲವಂಗದ ಗಿಡಗಳನ್ನು ಬೆಳೆಸಿ ಕೃಷಿ ಭೂಮಿಯ ಬೇಲಿಗೆ ಬೆಂಗಾವಲಾಗಿ ನಿಲ್ಲುವಲ್ಲಿ ಯಶಸ್ಸು ಕಂಡಿದ್ದಾರೆ.

ADVERTISEMENT

ತಮ್ಮ ಅಡಿಕೆ ತೋಟದಲ್ಲಿ ಬಳಸುವ ಔಷಧಗಳ ಸಿಂಪಡಣೆ ಗಿಡಗಳ ಮೇಲಿನಿಂದ ಕೆಳಗೆ ಬಿದ್ದು ವ್ಯಯವಾಗದ ರೀತಿಯಲ್ಲಿ ಬಾಳೆಗಿಡಗಳನ್ನು ನೆಡಲಾಗಿದೆ.
ಅದೇ ರೀತಿ ಅಡಿಕೆ ಮರದ ಕೆಳಹಂತದ ಸಾಲಿನಲ್ಲಿ ಏಲಕ್ಕಿ ಗಿಡಗಳನ್ನು ಬೆಳೆದು ಶ್ರಮವಿಲ್ಲದೆ ಅವುಗಳನ್ನು ಬೆಳೆಯಲು ಪೂರಕವಾದ ವ್ಯವಸ್ಥೆ ಮಾಡಿಕೊಂಡಿದ್ದಾರೆ.

‘ಕೃಷಿ ಚಟುವಟಿಕೆಯ ಜತೆಗೆ ಕೃಷಿ ಪರಿಕರಗಳ ಮಾರಾಟ ಮಳಿಗೆಯನ್ನು ಕಾರ್ಗಲ್ ಪಟ್ಟಣದಲ್ಲಿ ನಡೆಸುತ್ತಿದ್ದು, ನಾನು ವೃತ್ತಿಯಲ್ಲಿ ಕೃಷಿಕ, ಪ್ರವೃತ್ತಿಯಲ್ಲಿ ವ್ಯಾಪಾರಿ’ ಎಂದು ಮೋಹನ ಕುಮಾರ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ತಂದೆ, ತಾಯಿ, ತಮ್ಮ ಮತ್ತು ಹೆಂಡತಿಯೊಂದಿಗೆ ಸದಾ ಕೃಷಿಪರ ಆಲೋಚನೆಗಳಲ್ಲಿ ತೊಡಗಿಕೊಳ್ಳುವ ಈ ಕುಟುಂಬದ ಪ್ರತಿಯೊಬ್ಬರೂ ಬೇಸಾಯ ಪದ್ಧತಿಯ ಬಗ್ಗೆ ಹೆಚ್ಚಿನ ಅರಿವು ಉಳ್ಳವರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.