ADVERTISEMENT

ಸಾಗರ: ಕನ್ನಡಧ್ವಜ ಸುಟ್ಟವರನ್ನು ಬಂಧಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2021, 4:59 IST
Last Updated 18 ಡಿಸೆಂಬರ್ 2021, 4:59 IST
ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಕನ್ನಡ ಧ್ವಜ ಸುಟ್ಟಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಮತ್ತು ಕನ್ನಡಪರ ಹೋರಾಟಗಾರ ಸಂಪತ್ ದೇಸಾಯಿ ವಿರುದ್ಧ ಹಾಕಿರುವ ಪ್ರಕರಣವನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ಸಾಗರದಲ್ಲಿ ಮಲೆನಾಡು ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ಶುಕ್ರವಾರ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಮನವಿ ಸಲ್ಲಿಸಿದರು.
ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಕನ್ನಡ ಧ್ವಜ ಸುಟ್ಟಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಮತ್ತು ಕನ್ನಡಪರ ಹೋರಾಟಗಾರ ಸಂಪತ್ ದೇಸಾಯಿ ವಿರುದ್ಧ ಹಾಕಿರುವ ಪ್ರಕರಣವನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ಸಾಗರದಲ್ಲಿ ಮಲೆನಾಡು ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ಶುಕ್ರವಾರ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಮನವಿ ಸಲ್ಲಿಸಿದರು.   

ಸಾಗರ: ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಕನ್ನಡ ಧ್ವಜ ಸುಟ್ಟವರ ವಿರುದ್ಧ ಕಟ್ಟುನಿಟ್ಟಿನ ಕಾನೂನುಕ್ರಮ ಜರುಗಿಸಬೇಕು ಮತ್ತು ಕನ್ನಡಪರ ಹೋರಾಟಗಾರ ಸಂಪತ್ ದೇಸಾಯಿ ವಿರುದ್ಧ ಹಾಕಿರುವ ಕೇಸನ್ನು ಹಿಂದಕ್ಕೆ ಪಡೆದು ತಕ್ಷಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಶುಕ್ರವಾರ ಮಲೆನಾಡು ಕರ್ನಾಟಕ ರಕ್ಷಣಾ ವೇದಿಕೆಯಿಂದ ಉಪವಿಭಾಗಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ವೇದಿಕೆ ತಾಲ್ಲೂಕು ಅಧ್ಯಕ್ಷ ವಿ.ಕೆ. ವಿಜಯ ಕುಮಾರ್ ಮಾತನಾಡಿ, ‘ಬೆಳಗಾವಿಯಲ್ಲಿ ಎಂಇಎಸ್ ಪುಂಡರ ಹಾವಳಿ ಮಿತಿಮೀರುತ್ತಿದೆ. ಕನ್ನಡಿಗರ ಆತ್ಮವಿಶ್ವಾಸಕ್ಕೆ ಧಕ್ಕೆ ತರುವ ಕೆಲಸವನ್ನು ಪದೇಪದೇ ಮಾಡಲಾಗುತ್ತಿದೆ. ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಕನ್ನಡ ಧ್ವಜವನ್ನು ಸುಟ್ಟು ಹಾಕುವ ಮೂಲಕ ನೀಚತನ ಮೆರೆದಿದೆ’ ಎಂದು ಆರೋಪಿಸಿದರು.

‘ಕನ್ನಡಪರ ಹೋರಾಟಗಾರ ಸಂಪತ್ ಕುಮಾರ್ ಮತ್ತಿರರರ ಮೇಲೆ ಕೊಲೆ ಪ್ರಕರಣ ದಾಖಲಿಸಿ ಜೈಲಿಗೆ ಕಳಿಸಿರುವ ಪ್ರಕರಣವನ್ನು ವೇದಿಕೆ ತೀವ್ರವಾಗಿ ಖಂಡಿಸುತ್ತೇನೆ. ಸಂಪತ್ ಕುಮಾರ್ ಮತ್ತಿರರ ಮೇಲೆ ಹೂಡಿರುವ ಎಲ್ಲ ಪ್ರಕರಣಗಳನ್ನು ತಕ್ಷಣ ಹಿಂದಕ್ಕೆ ಪಡೆಯಬೇಕು. ಕನ್ನಡ ಧ್ವಜ ಸುಟ್ಟಿರುವ ದುಷ್ಕರ್ಮಿಗಳ ವಿರುದ್ದ ಕಟ್ಟುನಿಟ್ಟಿನ ಕಾನೂನುಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ವೇದಿಕೆಯ ಗೌರವಾಧ್ಯಕ್ಷ ಪುರುಷೋತ್ತಮ್ ಮಾತನಾಡಿ, ‘ಕನ್ನಡ ಧ್ವಜ ಸುಟ್ಟಿರುವ ಎಂಇಎಸ್ ಪುಂಡರ ಕೃತ್ಯವನ್ನು ಸಮಸ್ತ ಕನ್ನಡಿಗರೂ ಖಂಡಿಸಬೇಕು. ಕನ್ನಡ ನಾಡುನುಡಿ, ಧ್ವಜ ಸೇರಿ ಯಾವುದರ ಅಸ್ತಿತ್ವಕ್ಕೂ ಧಕ್ಕೆ ಆಗಬಾರದು. ಅಂತಹ ಘಟನೆ ನಡೆದಾಗ ಸರ್ಕಾರ ಅಂತಹವರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸಬೇಕು. ಬೆಳಗಾವಿಯಲ್ಲಿ ಕನ್ನಡಿಗರ ತಾಳ್ಮೆ ಪರೀಕ್ಷೆ ಮಾಡುವ ಕೆಲಸವನ್ನು ಎಂಇಎಸ್ ಮಾಡುತ್ತಿದೆ. ಸರ್ಕಾರ ಅಂತಹವರ ವಿರುದ್ದ ಅಗತ್ಯ ಕಾನೂನುಕ್ರಮ ಜರುಗಿಸಬೇಕು. ಸರ್ಕಾರದ ಕನ್ನಡಪರ ನಿಲುವಿಗೆ ಮಲೆನಾಡು ಕರ್ನಾಟಕ ರಕ್ಷಣಾ ವೇದಿಕೆ ಸೇರಿ ಎಲ್ಲಾ ಕನ್ನಡಪರ ಸಂಘಟನೆಗಳು ಬೆಂಬಲ ನೀಡುತ್ತವೆ’ ಎಂದು ಹೇಳಿದರು.

ವೇದಿಕೆಯ ನಗರ ಅಧ್ಯಕ್ಷ ರಾಜು ಬಿ. ಮಡಿವಾಳ್, ಪತ್ರಕರ್ತ ನಾಗರಾಜ್, ಲಿಂಗರಾಜ್ ಆರೋಡಿ ಮಾತನಾಡಿದರು. ವೇದಿಕೆಯ ಪ್ರಧಾನ ಕಾರ್ಯದರ್ಶಿ ಶ್ರೀಧರ್ ಸಾಗರ್, ಪ್ರಮುಖರಾದ ಅನಂತ ಹೆಗಡೆ, ಸೌಭಾಗ್ಯ, ಆಶಾ ನಾಗರಾಜ್, ರೇಖಾ, ನಾಗರತ್ನಮ್ಮ, ಅಶೋಕ್ ಬೋಳುಗುಡ್ಡೆ, ಆಟೊ ದಿನೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.