ಶಿವಮೊಗ್ಗ: ಸೇವಾನ್ಯೂನತೆ ಪರಿಗಣಿಸಿ ಅರ್ಜಿದಾರ ಮಹಿಳೆಗೆ ₹ 24 ಲಕ್ಷ ವಿಮಾ ಪರಿಹಾರ ಮೊತ್ತ ಪಾವತಿಸುವಂತೆ ಎಚ್‌ಡಿಎಫ್‌ಸಿ ಸ್ಟ್ಯಾಂಡರ್ಡ್ ಲೈಫ್ ಇನ್ಶೂರೆನ್ಸ್ ಕಂಪನಿಗೆ ಇಲ್ಲಿನ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಆದೇಶಿಸಿದೆ.
ನಗರದ ನಿವಾಸಿ ಎಸ್. ಪ್ರೇಮಾ ಅವರ ಪತಿ ಎಕ್ಸೈಡ್ ಲೈಫ್ ಸ್ಮಾರ್ಟ್ ಟರ್ಮ್ ಪ್ಲ್ಯಾನ್ ವಿಮಾ ಪಾಲಿಸಿ ಪಡೆದಿದ್ದು, ವಾರ್ಷಿಕ ₹ 12,752 ಕಂತು ಪಾವತಿಸಿದ್ದಾರೆ. ಆದರೆ ಅವರು 2021ರ ಜುಲೈ 19ರಂದು ಹೃದಯಸ್ತಂಭನದಿಂದ ಮೃತಪಟ್ಟಿದ್ದರು.
ಪತಿಯ ಸಾವಿನ ಹಿನ್ನೆಲೆಯಲ್ಲಿ ಎಸ್. ಪ್ರೇಮಾ ಮುಂಬೈನ ಎಚ್.ಡಿ.ಎಫ್.ಸಿ ಸ್ಟ್ಯಾಂಡರ್ಡ್ ಲೈಫ್ ಇನ್ಶೂರೆನ್ಸ್ ಕಂಪನಿ ಸಂಪರ್ಕಿಸಿ ಸೂಕ್ತ ಮಾಹಿತಿ ಮತ್ತು ದಾಖಲೆಗಳನ್ನು ಒದಗಿಸಿ ಪಾಲಿಸಿಗನುಗುಣವಾಗಿ ವಿಮಾ ಪರಿಹಾರ ಮೊತ್ತ ಸಂದಾಯ ಮಾಡುವಂತೆ ಕೋರಿದ್ದರು.
ಆದರೆ ಕಂಪನಿಯವರು ಅರ್ಜಿದಾರರ ಮನವಿಯನ್ನು ತಿರಸ್ಕರಿಸಿದ್ದರು. ಪ್ರೇಮಾ ಅವರ ಪತಿ ಪಾಲಿಸಿ ಪಡೆಯುವ ಪೂರ್ವದಲ್ಲಿ ಬೇರೆ ಪಾಲಿಸಿಗಳನ್ನು ಹೊಂದಿರುವ ವಿಚಾರವನ್ನು ಮರೆಮಾಚಿದ್ದಾರೆ. ಮತ್ತು ಈ ಸಂಗತಿಯು ವಿಮಾ ಪಾಲಿಸಿಯ ನಿಬಂಧನೆಯ ಉಲ್ಲಂಘನೆಯಾಗಿದೆ. ಹೀಗಾಗಿ ಅವರು ವಿಮಾ ಪರಿಹಾರ ಪಡೆಯಲು ಅರ್ಹರಾಗಿರುವುದಿಲ್ಲ ಎಂಬ ಕಾರಣ ನೀಡಲಾಗಿತ್ತು.
ಅದನ್ನು ಪ್ರಶ್ನಿಸಿ ಪ್ರೇಮಾ ಅವರು ಮುಂಬೈನ ಎಚ್.ಡಿ.ಎಫ್.ಸಿ. ಸ್ಟ್ಯಾಂಡರ್ಡ್ ಲೈಫ್ ಇನ್ಶೂರೆನ್ಸ್ ಕಂಪೆನಿಯ ಸೇವಾನ್ಯೂನತೆ ಕುರಿತು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಪ್ರಕರಣ ದಾಖಲಿಸಿದ್ದರು.
ಆಯೋಗವು ಪ್ರಕರಣದ ಅಂಶಗಳು, ದೂರುದಾರರು ಹಾಜರುಪಡಿಸಿದ ದಾಖಲೆಗಳು ಮತ್ತು ವಿಮಾ ಪಾಲಿಸಿಯ ಷರತ್ತು ಮತ್ತು ನಿಬಂಧನೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿ, ವಿಮಾ ಕಂಪೆನಿಯು ಪರಿಹಾರ ಪಾವತಿಸದೆ ಸೇವಾ ನ್ಯೂನತೆ ಎಸಗಿದೆ ನಿರ್ಣಯಿಸಿತ್ತು. ವಿಮಾ ಕಂಪನಿಗೆ ನೋಟಿಸ್ ಜಾರಿ ಮಾಡಿದರೂ, ಆಯೋಗದ ಮುಂದೆ ಗೈರುಹಾಜರಾಗಿರುವುದರಿಂದ ಪ್ರಕರಣವನ್ನು ಏಕ-ಪಕ್ಷೀಯವೆಂದು ಪರಿಗಣಿಸಿ ಅರ್ಜಿದಾರರು ವಿಮಾ ಪರಿಹಾರವನ್ನು ಪಡೆಯಲು ಅರ್ಹರಾಗಿದ್ದಾರೆ ಎಂದು ಪರಿಗಣಿಸಿ ಪ್ರಕರಣವನ್ನು ಭಾಗಶಃ ಪುರಸ್ಕರಿಸಿದೆ.
ಆ ಪ್ರಕಾರ ಎದುರುದಾರ ಅರ್ಜಿದಾರರಿಗೆ ಪಾಲಿಸಿಗೆ ಅನುಗುಣವಾಗಿ ಪಾಲಿಸಿ ಪರಿಹಾರ ₹24 ಲಕ್ಷ ಪಾವತಿಸುವ ಜೊತೆಗೆ ಸೇವಾ ನ್ಯೂನತೆಯಿಂದಾಗಿ ಉಂಟಾದ ಮಾನಸಿಕ ಹಿಂಸೆ ಮತ್ತು ಹಾನಿಗಳಿಗೆ ಸಂಬಂಧಿಸಿದಂತೆ ಪರಿಹಾರ ಮೊತ್ತ ₹15,000 ಮತ್ತು ವ್ಯಾಜ್ಯದ ಖರ್ಚು-ವೆಚ್ಚಗಳ ಬಾಬ್ತು ₹10,000 ಪಾವತಿಸಬೇಕು ಎಂದು ನಿರ್ದೇಶಿಸಿ ಆಯೋಗದ ಅಧ್ಯಕ್ಷ ಟಿ.ಶಿವಣ್ಣ, ಸದಸ್ಯರಾದ ಸವಿತಾ ಬಿ.ಪಟ್ಟಣಶೆಟ್ಟಿ, ಬಿ.ಡಿ.ಯೋಗಾನಂದ ಬಾಂಡ್ಯ ಅವರ ಪೀಠವು ಆದೇಶ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.