ADVERTISEMENT

ಶಿವಮೊಗ್ಗ | ರೈತರ ಏಳಿಗೆಗಾಗಿ ‘ಜನತಾ ಜಲಧಾರೆ’

ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2022, 5:11 IST
Last Updated 23 ಏಪ್ರಿಲ್ 2022, 5:11 IST
ಹೊಳೆಹೊನ್ನೂರು ಸಮೀಪದ ಶ್ರೀಕ್ಷೇತ್ರ ಕೂಡ್ಲಿಯ ಶಾರದಾಂಬ ಮಠದ ಆವರಣದಲ್ಲಿ ಜೆಡಿಎಸ್‌ ‘ಜನತಾ ಜಲಧಾರೆ’ ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಉದ್ಘಾಟಿಸಿದರು. ಮಾಜಿ ಶಾಸಕಿ ಶಾರದ ಪೂರ‍್ಯಾನಾಯ್ಕ್, ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ. ಶ್ರೀಕಾಂತ್‌ ಇದ್ದರು.
ಹೊಳೆಹೊನ್ನೂರು ಸಮೀಪದ ಶ್ರೀಕ್ಷೇತ್ರ ಕೂಡ್ಲಿಯ ಶಾರದಾಂಬ ಮಠದ ಆವರಣದಲ್ಲಿ ಜೆಡಿಎಸ್‌ ‘ಜನತಾ ಜಲಧಾರೆ’ ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಉದ್ಘಾಟಿಸಿದರು. ಮಾಜಿ ಶಾಸಕಿ ಶಾರದ ಪೂರ‍್ಯಾನಾಯ್ಕ್, ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ. ಶ್ರೀಕಾಂತ್‌ ಇದ್ದರು.   

ಹೊಳೆಹೊನ್ನೂರು: ರೈತರ ಏಳಿಗೆಗಾಗಿ ಜೆಡಿಎಸ್‌ನಿಂದ ‘ಜನತಾ ಜಲಧಾರೆ ರಥಯಾತ್ರೆ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಸಮೀಪದ ಶ್ರೀಕ್ಷೇತ್ರ ಕೂಡ್ಲಿಯ ತುಂಗಭದ್ರಾ ಸಂಗಮದ ಸಂಗಮೇಶ್ವರ ಸನ್ನಿಧಾನದಲ್ಲಿ ಗಂಗೆ ಪೂಜೆ ನೆರವೇರಿಸಿ ಶಾರದಾಂಬಾ ಮಠದ ಆವರಣದಲ್ಲಿ ‘ಜನತಾ ಜಲಧಾರೆ’ಗೆ ನೀರು ತುಂಬಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

‘ಸರ್ಕಾರದ ಖಜಾನೆಯಲ್ಲಿ ಹಣಕ್ಕೆ ದಾರಿದ್ರ್ಯ ಬಂದಿಲ್ಲ. ರೈತರ ಪರ ಕೆಲಸ ಮಾಡದ ಸರ್ಕಾರಗಳಿಂದ ಅನ್ನದಾತ ಯಾವುದನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಕಳೆದ ಸರ್ಕಾರದಲ್ಲಿ ಕಾಂಗ್ರೆಸಿಗರು ನೀಡಿದ ಕಿರುಕುಳದ ನಡುವೆಯೂ 14 ತಿಂಗಳ ಅಧಿಕಾರವಧಿಯಲ್ಲಿ₹ 25 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿ ರೈತರ ಪರ ಪಕ್ಷ ಎಂದು ಸಾಬೀತು ಮಾಡಿದ್ದೇನೆ. ₹ 200 ಇದ್ದ ವೃದ್ಧಾಪ್ಯ ವೇತನವನ್ನು ₹ 1000ಕ್ಕೆ ಏರಿಸಲಾಗಿತ್ತು’ ಎಂದರು.

ADVERTISEMENT

‘ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 40 ಸೀಟು ಗಳಿಸಲು ಇಷ್ಟೊಂದು ಪ್ರಯತ್ನ ಪಡುವ ಅವಶ್ಯಕತೆ ಇಲ್ಲ. ರಾಜ್ಯದಲ್ಲಿರುವ ಪ್ರಮುಖ ನದಿಗಳ ನೀರನ್ನು ರೈತರ ಹೊಲ ಗದ್ದೆಗಳಿಗೆ ಹರಿಯುವಂತೆ ಮಾಡಿ ಪ್ರತಿಯೊಂದು ಮನೆಗೂ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಉದ್ದೇಶದಿಂದ ‘ಜನತಾ ಜಲಧಾರೆ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು.

‘ಕಮಿಷನ್ ಹಣಕ್ಕೆ ಬಾಯಿ ತೆರೆದಿರುವ ಬಿಜೆಪಿ ಸರ್ಕಾರವನ್ನು ಬೇರು ಸಮೇತ ಕಿತ್ತೊಗೆದು ಪ್ರಾದೇಶಿಕ ಪಕ್ಷವನ್ನು ಅಸ್ತಿತ್ವಕ್ಕೆ ತರುವುದೇ ರಾಜ್ಯದ ಸುಭೀಕ್ಷಕ್ಕಿರುವ ದಾರಿ. ರಾಜ್ಯದ ಜನರ ತೆರಿಗೆ ಹಣ ಶೇ 40ರಷ್ಟು ಕಮಿಷನ್ ರೂಪದಲ್ಲಿ ಬಿಜೆಪಿ ಸಚಿವ ಶಾಸಕರ ಮನೆ ಸೇರುತ್ತಿದೆ. 2006ರಿಂದ ಈಚೆಗೆ ಶಿವಮೊಗ್ಗದ ಬಿಜೆಪಿ ಮುಖಂಡರ ಆಸ್ತಿ ಲೆಕ್ಕಕ್ಕೆ ಸಿಗುತ್ತಿಲ್ಲ’ ಎಂದು ದೂರಿದರು.

ಜೆಡಿಎಸ್ ಮುಂದೆ ಅಧಿಕಾರಕ್ಕೆ ಬಂದರೆ ರಾಜ್ಯದ 60 ಸಾವಿರ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಎಲ್‌.ಕೆ.ಜಿಯಿಂದ ಪಿಯುವರೆಗೆ ಇಂಗ್ಲಿಷ್‌ ಮಾಧ್ಯಮದ ಉಚಿತ ಶಿಕ್ಷಣ ನೀಡಲಾಗುವುದು. ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ 30 ಹಾಸಿಗೆಯ ಸುಸಜ್ಜಿತ ಆಸ್ಪತ್ರೆಗಳನ್ನು ತೆರೆಯಲಾಗುವುದು. ವಿಧವೆಯರು, ವೃದ್ಧರಿಗೆ ಪ್ರತಿ ತಿಂಗಳು ₹ 5 ಸಾವಿರ ಹಾಗೂ ತಾಯಿ ಮಗುವಿನ ಆರೋಗ್ಯಕ್ಕೆ ಪ್ರತಿ ತಿಂಗಳು ₹ 6 ಸಾವಿರ ನೀಡುವ ಯೋಜನೆ ಜಾರಿಗೆ ತರಲಾಗುವುದು ಎಂದರು.

ಮಾಜಿ ಶಾಸಕಿ ಶಾರದ ಪೂರ‍್ಯಾನಾಯ್ಕ್ ಮಾತನಾಡಿ, ‘ರಾಜ್ಯಕ್ಕೆ ಪ್ರಾದೇಶಿಕ ಪಕ್ಷಗಳ ಅವಶ್ಯಕತೆ ಇದೆ. ತುಂಗಭದ್ರಾ ಸಂಗಮದ ದೈವ ಸಂಕಲ್ಪದಿಂದ ಮುಂದಿನ ದಿನಗಳಲ್ಲಿ ಕ್ಷೇತ್ರ ಸುಭಿಕ್ಷವಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ರಾಜ್ಯದ ಮುಖ್ಯಮಂತ್ರಿ ಉತ್ತಮವಾಗಿದ್ದರೆ ರಾಜ್ಯ ಉತ್ತಮವಾಗಿರುತ್ತದೆ’ ಎಂದರು.

ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ. ಶ್ರೀಕಾಂತ್, ಮಹಿಳಾ ಘಟಕದ ಅಧ್ಯಕ್ಷೆ ಗೀತಾ ಸತೀಶ್, ಎಪಿಎಂಸಿ ಸದಸ್ಯ ಸತೀಶ್, ಕುಮಾರ್‌ನಾಯ್ಕ್, ಶಿಕಾರಿಪುರ ಬಳಿಗಾರ್, ಸೀತಳ್ಳಿ ರಾಜರಾಂ, ದಾನವಾಡಿ ಗಿರೀಶ್, ಸಹ್ಯಾದ್ರಿ ಹರೀಶ್, ಆನವೇರಿ ಕುಬೇಂದ್ರಪ್ಪ, ಎಂ.ದಾನೇಶ್, ಜಿ.ಎನ್ ಪರುಶುರಾಮ್ ಇದ್ದರು.

ಜೇಬು ತುಂಬಿಸಿಕೊಳ್ಳುತ್ತಿರುವ ಸಚಿವರು: ಆರೋಪ
‘ರೈತರ ಬೆಳೆಗಳ ಬೆಲೆ ದುಪ್ಪಟ್ಟು ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದ ಸಚಿವರು ಕಮಿಷನ್ ಜಾಸ್ತಿ ಮಾಡಿಕೊಂಡು ಜೇಬು ತುಂಬಿಸಿಕೊಳ್ಳುತ್ತಿದ್ದಾರೆ. ರಾಜ್ಯ ಸರ್ಕಾರದಲ್ಲಿ ಲೂಟಿಯಾಗುತ್ತಿರುವ ಹಣದ ಬಗ್ಗೆ ರಾಜ್ಯದ ಜನರಿಗೆ ತಿಳಿದಿದೆ.ಕಮಿಷನ್ ಆರೋಪದಲ್ಲಿ ಸಚಿವರ ತಲೆದಂಡಗಳಾಗುತ್ತಿವೆ. ಎಲ್ಲವನ್ನೂ ಮೂಖ ಪ್ರೇಕ್ಷರಾಗಿ ನೋಡುತ್ತಿರುವ ಜನರು ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠಕಲಿಸುತ್ತಾರೆ. ರಾಜ್ಯದಲ್ಲಿ ಸೌಹಾರ್ದ ಬೆಳೆಸಬೇಕಾದ ಬಿಜೆಪಿ ಸರ್ಕಾರ ಕೋಮು ಸಂಘರ್ಷಗಳ ಹೆಸರಿನಲ್ಲಿ ರಾಜ್ಯದ ಜನರ ನಿದ್ದೆಗೆಡಿಸುತ್ತಿದೆ. ರಾಜ್ಯದಲ್ಲಿಅಶಾಂತಿ ನೆಲೆಸುವಂತೆ ಮಾಡಿ ರಾಜಕೀಯ ಬೆಳೆ ಬೇಯಿಸಿಕೊಳ್ಳುತ್ತಿದೆ’ ಎಂದು ಕುಮಾರಸ್ವಾಮಿ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.