ADVERTISEMENT

ಜಾತ್ರೋತ್ಸವ: ಪ್ರಮುಖ ರಸ್ತೆಗಳ ಅಭಿವೃದ್ಧಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2020, 8:47 IST
Last Updated 13 ಫೆಬ್ರುವರಿ 2020, 8:47 IST
ಸಾಗರದ ನಗರಸಭೆ ಕಚೇರಿ ಹಿಂಭಾಗದ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಬುಧವಾರ ಶಾಸಕ ಎಚ್.ಹಾಲಪ್ಪ ಹರತಾಳು ಪರಿಶೀಲಿಸಿದರು
ಸಾಗರದ ನಗರಸಭೆ ಕಚೇರಿ ಹಿಂಭಾಗದ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಬುಧವಾರ ಶಾಸಕ ಎಚ್.ಹಾಲಪ್ಪ ಹರತಾಳು ಪರಿಶೀಲಿಸಿದರು   

ಸಾಗರ: ಮೂರು ವರ್ಷಗಳಿಗೊಮ್ಮೆ ನಡೆಯುವ ಕರ್ನಾಟಕದ ಅತಿ ದೊಡ್ಡ ಜಾತ್ರೆಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಇಲ್ಲಿನ ಮಾರಿಕಾಂಬಾ ದೇವಿಯ ಜಾತ್ರೆ ಫೆ.18ರಿಂದ 9 ದಿನಗಳ ಕಾಲ ನಡೆಯಲಿದ್ದು, ನಗರದ ಪ್ರಮುಖ ರಸ್ತೆಗಳಿಗೆ ಡಾಂಬರೀಕರಣ ಮಾಡಿ ಅಭಿವೃದ್ಧಿಗೊಳಿಸಲಾಗುತ್ತಿದೆ ಎಂದು ಶಾಸಕ ಎಚ್.ಹಾಲಪ್ಪ ಹರತಾಳು ತಿಳಿಸಿದ್ದಾರೆ.

ಇಲ್ಲಿನ ನಗರಸಭೆ ಕಚೇರಿ ಹಿಂಭಾಗದ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಬುಧವಾರ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಲೋಕೋಪಯೋಗಿ ಇಲಾಖೆ ಕಚೇರಿ ಇರುವ ರಸ್ತೆಯನ್ನು ₹ 20 ಲಕ್ಷ ವಿನಿಯೋಗಿಸಿ ಅಭಿವೃದ್ಧಿಗೊಳಿಸಲಾಗಿದೆ. ರಸ್ತೆಯ ಇಕ್ಕೆಲಗಳಲ್ಲಿ ಪಾದಚಾರಿ ಮಾರ್ಗ ನಿರ್ಮಿಸಲಾಗುವುದು’ ಎಂದರು.

ಕಳೆದ ಮಳೆಗಾಲದಲ್ಲಿ ನಗರ ವ್ಯಾಪ್ತಿಯಲ್ಲಿ ಹಾಳಾಗಿರುವ ರಸ್ತೆಗಳ ದುರಸ್ತಿಗೆ ಮುಖ್ಯಮಂತ್ರಿ ₹ 6.80 ಕೋಟಿ ವಿಶೇಷ ಅನುದಾನ ನೀಡಿದ್ದಾರೆ. ಇದರ ನೆರವಿನಿಂದ 41 ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಬಹುತೇಕವು ಮುಕ್ತಾಯದ ಹಂತದಲ್ಲಿವೆ ಎಂದು ತಿಳಿಸಿದರು.

ADVERTISEMENT

ಗಣಪತಿ ಕೆರೆ ಮೇಲ್ಭಾಗದ ಬಿ.ಎಚ್. ರಸ್ತೆ ಪಕ್ಕದಲ್ಲಿ ₹ 50 ಲಕ್ಷ ವೆಚ್ಚದಲ್ಲಿ 150 ಅಡಿ ಎತ್ತರದ ಬೃಹತ್ ಧ್ವಜಸ್ತಂಭ ನಿರ್ಮಿಸಲಾಗುತ್ತಿದೆ. ವರ್ಷದ 365 ದಿನವೂ ಇಲ್ಲಿ ರಾಷ್ಟ್ರಧ್ವಜ ಹಾರುವ ವ್ಯವಸ್ಥೆ ಮಾಡಲಾಗುವುದು. ಇದರ ಸುತ್ತಲೂ ಉದ್ಯಾನ, ಮಕ್ಕಳ ಆಟಿಕೆ ಸೌಲಭ್ಯಕ್ಕೆ ₹ 40 ಲಕ್ಷ ವಿನಿಯೋಗಿಸಲಾಗುವುದು ಎಂದರು.

ನಗರಸಭೆ ಸದಸ್ಯರಾದ ಟಿ.ಡಿ.ಮೇಘರಾಜ್, ಡಿ.ತುಕಾರಾಂ, ಅಭಿಯಂತರ ಎಚ್.ಕೆ.ನಾಗಪ್ಪ, ವಿ.ಟಿ.ರವೀಂದ್ರ, ವಿನಾಯಕ ರಾವ್, ಗಿರೀಶ್ ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.