ADVERTISEMENT

ಅಪ್ಪ–ಮಗ ಮಾಡಿದ ಕೆಲಸಕ್ಕಿಂತ ಪ್ರಚಾರವೇ ಹೆಚ್ಚು: ಆರ್.ಎಂ.ಮಂಜುನಾಥ ಗೌಡ ಟೀಕೆ

ಯಡಿಯೂರಪ್ಪ–ರಾಘವೇಂದ್ರ ವಿರುದ್ಧ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಆರೋ‍ಪ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2019, 13:30 IST
Last Updated 15 ಮಾರ್ಚ್ 2019, 13:30 IST
ಆರ್.ಎಂ.ಮಂಜುನಾಥ ಗೌಡ
ಆರ್.ಎಂ.ಮಂಜುನಾಥ ಗೌಡ   

ಶಿವಮೊಗ್ಗ: ಸಂಸದರಾಗಿ ಬಿ.ಎಸ್. ಯಡಿಯೂರಪ್ಪ ಹಾಗೂ ಅವರ ಪುತ್ರ ಬಿ.ವೈ. ರಾಘವೇಂದ್ರ ಮಾಡಿದ ಕೆಲಸಕ್ಕಿಂತ ಪಡೆದ ಪ್ರಚಾರವೇ ಹೆಚ್ಚು. ಸುಳ್ಳು ಭರವಸೆ ನೀಡುತ್ತಲೇ ಮೂರು ಚುನಾವಣೆ ಎದುರಿಸಿದರು ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಟೀಕಿಸಿದರು.

ಭದ್ರಾವತಿ ವಿಐಎಸ್‌ಎಲ್‌ ಪುನಃಶ್ಚೇತನ ಗೊಳಿಸುವುದಾಗಿ ಪ್ರತಿ ಚುನಾವಣೆಯಲ್ಲೂ ಹುಸಿ ಭರವಸೆ ನಿಡುತ್ತಾರೆ. ಅವರ ಮಾತು ನಂಬಿ ಜನರು ಮತ ಹಾಕುತ್ತಾರೆ. ನಂತರ ಯಾವುದೇ ಪ್ರಯತ್ನ ಮಾಡುವುದಿಲ್ಲ. ಕಾರ್ಖಾನೆ ರೋಗಗ್ರಸ್ಥ ಎಂದು ಕೇಂದ್ರ ಸರ್ಕಾರವೇ ಘೋಷಿಸಿದೆ. ಶವದ ಪೆಟ್ಟಿಗೆಗೆ ಮೊಳೆ ಹೊಡೆದಿದ್ದಾರೆ. ಈಗ ಚುನಾವಣೆ ಕಾರಣಕ್ಕೆ ಪುನಃಶ್ಚೇತನದ ಮಾತು ಆಡುತ್ತಿದ್ದಾರೆ. ಸಂಸದರಾಗಿ ಜಿಲ್ಲೆಗೆ ಎಫ್ಎಂ ರೇಡಿಯೊ ಕೇಂದ್ರ ತರಲಿಲ್ಲ. ವಿಮಾನ ನಿಲ್ದಾಣ ಕಾಮಗಾರಿ ಆರಂಭಿಸಲಿಲ್ಲ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಕುಟುಕಿದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜೆಡಿಎಸ್, ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಮತ್ತೆ ಕಣಕ್ಕೆ ಇಳಿದಿದ್ದಾರೆ. ಉಪ ಚುನಾವಣೆ ವೇಳೆ ಸಮಯದ ಅಭಾವದ ಕಾರಣ ಸೋಲಾಯಿತು. ಈ ಬಾರಿಯ ಚುನಾವಣೆ ಗಂಭೀರವಾಗಿ ಪರಿಗಣಿಸಿದ್ದೇವೆ. ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಯಾವುದೇ ಗೊಂದಲವಿಲ್ಲ. ಜೆಡಿಎಸ್ -ಕಾಂಗ್ರೆಸ್ ಮುಖಂಡರು ಸೇರಿ ಸರ್ವಸಮ್ಮತ ಅಭ್ಯರ್ಥಿ ಆಯ್ಕೆ ಮಾಡಿದ್ದಾರೆ. ಅಧಿಕೃತವಾಗಿ ಮೈತ್ರಿ ಘೋಷಣೆಯಾಗದ ಕಾರಣ ಪ್ರಚಾರ ಆರಂಭಿಸಿರಲಿಲ್ಲ. ಈಗ ಎಲ್ಲವೂ ಸುಖಾಂತ್ಯವಾಗಿದೆ. ಕಾಗೋಡು ತಿಮ್ಮಪ್ಪ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ. ಸಚಿವ ಡಿ.ಕೆ.ಶಿವಕುಮಾರ್ ಉಸ್ತುವಾರಿ ನೋಡಿಕೊಳ್ಳುವರು ಎಂದು ಮಾಹಿತಿ ನೀಡಿದರು.

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಈ ಬಾರಿ ಉತ್ತಮ ಬಜೆಟ್ ಮಂಡಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಏತ ನೀರಾವರಿ ಯೋಜನೆ ಆದ್ಯತೆ ನೀಡಿದ್ದಾರೆ. ಕೆಎಫ್‌ಡಿ ಪ್ರಯೋಗಾಲಯ ಸ್ಥಾಪನೆಗೆ ಹಣ ನೀಡಿದ್ದಾರೆ. ವಿಮಾನ ನಿಲ್ದಾಣ ಕಾಮಗಾರಿ, ಕಾಲು ಸುಂಕ ನಿರ್ಮಾಣ, ಸಾವಯವ ಕೃಷಿ, ರಸ್ತೆಗಳ ನಿರ್ಮಾಣಕ್ಕೂ ಅನುದಾನ ಮೀಸಲಿಟ್ಟಿದ್ದಾರೆ. ಇದು ಪಕ್ಷದ ಅಭ್ಯರ್ಥಿ ಗೆಲುವಿಗೆ ಸಹಕಾರಿಯಾಗುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಶ್ರೀಕಾಂತ್, ಮುಖಂಡರಾದ ರಾಮಕೃಷ್ಣ, ನಾಗರಾಜ ಕಂಕಾರಿ, ಜಿ.ಡಿ. ಮಂಜುನಾಥ್, ಎಚ್. ಫಾಲಾಕ್ಷಿ, ವಿದ್ಯಾಧರ್, ತ್ಯಾಗರಾಜ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.