ADVERTISEMENT

ಜೋಗ: ಅಧಿಕಾರಿಗಳ ಹಾಗೂ ಪ್ರವಾಸಿಗರ ಸಂಘರ್ಷಕ್ಕೆ ಕಾರಣವಾದ ಕೋವಿಡ್ ದೃಢೀಕರಣ ಪತ್ರ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2021, 3:08 IST
Last Updated 7 ಆಗಸ್ಟ್ 2021, 3:08 IST
ಕಾರ್ಗಲ್ ಸಮೀಪದಲ್ಲಿರುವ ಜೋಗ ಜಲಪಾತದ ಪ್ರವೇಶ ದ್ವಾರದ ಎದುರು ಶುಕ್ರವಾರ ಸೇರಿದ್ದ ಪ್ರವಾಸಿಗರು.
ಕಾರ್ಗಲ್ ಸಮೀಪದಲ್ಲಿರುವ ಜೋಗ ಜಲಪಾತದ ಪ್ರವೇಶ ದ್ವಾರದ ಎದುರು ಶುಕ್ರವಾರ ಸೇರಿದ್ದ ಪ್ರವಾಸಿಗರು.   

ಕಾರ್ಗಲ್: ಜೋಗ ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ಕೋವಿಡ್ ನೆಗೆಟಿವ್ ದೃಢೀಕರಣ ಕಡ್ಡಾಯಗೊಳಿಸಿರುವ ಜಿಲ್ಲಾಧಿಕಾರಿ ಆದೇಶ ಶುಕ್ರವಾರ ಸಂಘರ್ಷಕ್ಕೆ ಕಾರಣವಾಗಿತ್ತು.

ಉತ್ತರ ಕರ್ನಾಟಕ ಮತ್ತು ಉತ್ತರ ಕನ್ನಡ ಜಿಲ್ಲೆಯಿಂದ ಬಂದಿದ್ದ ಭಾರಿ ಸಂಖ್ಯೆಯ ಪ್ರವಾಸಿಗರು, ‘ಆರ್‌ಟಿಪಿಸಿಆರ್ ಪರೀಕ್ಷಾ ವರದಿ ಕಡ್ಡಾಯ ಎಂದು ಸರ್ಕಾರ ಘೋಷಣೆ ಮಾಡಿಲ್ಲ. ಈ ಬಗ್ಗೆ ಎಲ್ಲಿಯೂ ಮುಂಚಿತವಾಗಿ ಮಾಹಿತಿ ನೀಡಿಲ್ಲ. ಪ್ರಕೃತಿ ಸೌಂದರ್ಯವನ್ನು ವೀಕ್ಷಿಸುವ ಆಶಯದಿಂದ ನೂರಾರು ಕಿ.ಮೀ. ದೂರದಿಂದ ನಿರೀಕ್ಷೆಯೊಂದಿಗೆ ಬರುವ ನಮಗೆ ನಿರಾಸೆ ಮೂಡಿಸಿದಂತಾಗಿದೆ. ಮಾಹಿತಿ ಪ್ರಚುರ ಪಡಿಸದೆ ಈ ರೀತಿಯ ಕ್ರಮಕ್ಕೆ ಮುಂದಾಗಿರುವುದು ಸರಿಯಲ್ಲ’ ಎಂದು ಭದ್ರತಾ ಸಿಬ್ಬಂದಿಯೊಂದಿಗೆ ಸಂಘರ್ಷಕ್ಕಿಳಿದರು.

ಪ್ರವಾಸಿಗರೊಂದಿಗೆ ಅತ್ಯಂತ ಸಂಯಮದಿಂದ ವರ್ತಿಸಿದ ಭದ್ರತಾ ಸಿಬ್ಬಂದಿಯ ಮಾತನ್ನು ಮೀರಿ ಒಳ ಪ್ರವೇಶಿಸಲು ಪ್ರವಾಸಿಗರು ಮುಂದಾದರು.

ADVERTISEMENT

ಕೂಡಲೇ ಮಧ್ಯೆ ಪ್ರವೇಶಿಸಿದ ಜೋಗದ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ನಿರ್ಮಲಾ, ಪ್ರವಾಸಿಗರಿಗೆ ಸರಿಯಾದ ರೀತಿಯಲ್ಲಿ ಮಾಹಿತಿ ನೀಡಿ, ಕಾನೂನು ಉಲ್ಲಂಘನೆ ಮಾಡಿದಲ್ಲಿ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.

‘ಜೋಗಕ್ಕೆ ಬಂದಿದ್ದ ಸಾವಿರಾರು ಪ್ರವಾಸಿಗರಲ್ಲಿ 945 ಮಂದಿ ಮಾತ್ರ ಆರ್‌ಟಿಪಿಸಿಆರ್ ನೆಗಟಿವ್ ವರದಿ ಹಾಜರುಪಡಿಸಿದ ಕಾರಣ ಅವರಿಗೆ ಮಾತ್ರ ಜಲಪಾತ ಪ್ರದೇಶದ ಒಳಗೆ ಪ್ರವೇಶ ನೀಡಲಾಯಿತು’ ಎಂದು ಪ್ರವಾಸೋದ್ಯಮ ಇಲಾಖೆ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.