ಶಿಕಾರಿಪುರ: ‘ಸಮರ್ಪಕ ದಾಖಲೆ ಇಲ್ಲದ ಆಸ್ತಿಗಳಿಗೆ ಬಿ– ಖಾತೆ ನೀಡುವ ಉದ್ದೇಶಕ್ಕೆ ಸರ್ಕಾರ ಘೋಷಿಸಿರುವ ಇ–ಖಾತೆ ಅಭಿಯಾನ ಪಟ್ಟಣದ ಎಲ್ಲರಿಗೂ ದೊರಕಿಸಲು ಸಮರೋಪಾದಿಯಲ್ಲಿ ಕೆಲಸ ಮಾಡಲಾಗುವುದು. ನಾಗರಿಕರು ಅದರ ಸದುಪಯೋಗ ಮಾಡಿಕೊಳ್ಳಿ’ ಎಂದು ಪುರಸಭೆ ಅಧ್ಯಕ್ಷೆ ಶೈಲಾ ಯೋಗೀಶ್ ಮಡ್ಡಿ ಹೇಳಿದರು.
ಪಟ್ಟಣದ ಪುರಸಭೆಯಲ್ಲಿ ಶುಕ್ರವಾರ ನಡೆದ ಇ– ಖಾತೆ ಅಭಿಯಾನ ಸಮಾಲೋಚನೆ ಸಭೆಯಲ್ಲಿ ಅವರು ಮಾತನಾಡಿದರು.
‘ಫೆ. 24ರಿಂದ ಅಭಿಯಾನ ಆರಂಭಿಸಲಾಗುವುದು. ಈ ಕಾರ್ಯಕ್ಕಾಗಿ ಪ್ರತ್ಯೇಕ ಸಿಬ್ಬಂದಿ ನೇಮಕ ಮಾಡಲಾಗುವುದು. ಪ್ರತಿ ಮನೆಗೆ ಮಾಹಿತಿ ನೀಡುವುದಕ್ಕಾಗಿ ಕರಪತ್ರ, ಕಸದ ಗಾಡಿಯಲ್ಲಿ ಪ್ರಚುರ ಪಡಿಸುವುದು, ಆಯಾ ವಾರ್ಡ್ ಸದಸ್ಯರು ಪ್ರತಿ ಮನೆಗೆ ತೆರಳಿ ಸರ್ಕಾರದ ಮಾಹಿತಿ ನೀಡುವ ಮೂಲಕ ಪಟ್ಟಣದ ಎಲ್ಲ ಆಸ್ತಿ ನೋಂದಣಿ ಆಗುವಂತೆ ಮಾಡೋಣ. ಅದಕ್ಕೆ ಎಲ್ಲ ಸದಸ್ಯರು, ಸಿಬ್ಬಂದಿ ಸಹಕರಿಸಬೇಕು’ ಎಂದು ಹೇಳಿದರು.
‘ಟೌನ್ ಪ್ಲಾನ್ ಇಲ್ಲದ ಆಸ್ತಿ, ರೆವಿನ್ಯೂ ಜಾಗದಲ್ಲಿನ ಆಸ್ತಿ, ಆಶ್ರಯ ನಿವೇಶನ, ಹರಾಜಿನಲ್ಲಿ ಪಡೆದಿರುವ ಆಸ್ತಿ ಹೀಗೆ ಎಲ್ಲವನ್ನೂ ಸಕ್ರಮ ಮಾಡುವ ಮೂಲಕ ಜನರ ಚಿಂತೆ ದೂರ ಮಾಡುವುದಕ್ಕೆ ಸರ್ಕಾರ ಉತ್ತಮ ಯೋಜನೆ ಜಾರಿಗೊಳಿಸಿದ್ದು, ಮೂರು ತಿಂಗಳ ಅವಧಿಯಲ್ಲಿ ಅಭಿಯಾನ ಪೂರ್ಣಗೊಳಿಸುವ ಗಡುವು ನೀಡಿದ್ದು, ಅವಧಿಯೊಳಗೆ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು’ ಎಂದು ಸದಸ್ಯ ಉಳ್ಳಿ ದರ್ಶನ್ ಹೇಳಿದರು.
‘ಅಭಿಯಾನಕ್ಕೆ ಬರುವ ಜನರ ಅನುಕೂಲಕ್ಕೆ ಷಾಮಿಯಾನ ಹಾಕಿ ಕುಡಿಯುವ ನೀರು ಒದಗಿಸಿ’ ಎಂದು ಸದಸ್ಯ ಸುರೇಶ್, ಜನರಿಗೆ ಹೆಚ್ಚು ಕಾಯಿಸದಂತೆ ಹಾಗೂ ಸರತಿ ಸಾಲು ಹೆಚ್ಚಾಗದಂತೆ ಮಾಡಲು ಹೆಚ್ಚಿನ ಸಿಬ್ಬಂದಿ ನಿಯೋಜಿಸಬೇಕು’ ಎಂದು ಸದಸ್ಯ ಪ್ರಕಾಶ್ ಗೋಣಿ ಸಲಹೆ ನೀಡಿದರು.
ಪುರಸಭೆ ಮುಖ್ಯಾಧಿಕಾರಿ ಭರತ್ ಮಾತನಾಡಿ, ‘ಖಾತೆ ಅಭಿಯಾನ ಆರಂಭಗೊಂಡ ಒಂದು ವಾರ ಗೊಂದಲವಾದರೂ ಕ್ರಮೇಣ ಏನು ಅಗತ್ಯವಿದೆ ಅದನ್ನು ಬದಲಾಯಿಸಿಕೊಂಡು ಅಭಿಯಾನ ಯಶಸ್ವಿಗೊಳಿಸುವ ಸಿದ್ಧತೆ ಮಾಡಿಕೊಂಡಿದ್ದೇವೆ’ಎಂದರು.
ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್, ಉಪಾಧ್ಯಕ್ಷೆ ರೂಪಾ, ಎಲ್ಲ ಸದಸ್ಯರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.