ಶಿವಮೊಗ್ಗ : ‘ಚಿಕ್ಕಮಗಳೂರು, ಚಿತ್ರದುರ್ಗ ಹಾಗೂ ವಿಜಯನಗರ ಜಿಲ್ಲೆಗಳ 1166 ಗ್ರಾಮಗಳಿಗೆ ಜಲಜೀವನ್‌ಮಿಷನ್ ಅಡಿ ಕುಡಿಯುವ ನೀರು ಪೂರೈಸಲು ಲಕ್ಕವಳ್ಳಿ ಬಳಿ ಭದ್ರಾ ಬಲದಂಡೆ ನಾಲೆಯನ್ನು ಸೀಳಿ ನೀರು ಒಯ್ಯಲಾಗುತ್ತಿದೆ. ಇದು ಅತ್ಯಂತ ಅವೈಜ್ಞಾನಿಕ ಯೋಜನೆ’ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೆ.ಟಿ.ಗಂಗಾಧರ ಆಕ್ರೋಶ ವ್ಯಕ್ತಪಡಿಸಿದರು.
ನಾಲೆಯನ್ನು ಸೀಳುವುದರಿಂದ ಅದರಲ್ಲಿ ಗುರುತ್ವಾಕರ್ಷಣೆಗೆ ಅನುಗುಣವಾಗಿ ಸಹಜವಾಗಿ ನೀರಿನ ರಭಸದ ಹರಿವಿಗೆ ಅಡ್ಡಿ ಆಗಲಿದೆ. ಇದರಿಂದ ದಾವಣಗೆರೆ ಜಿಲ್ಲೆಯ ಕೊನೆಯ ಭಾಗದ ರೈತರಿಗೆ ಕೃಷಿ ಉದ್ದೇಶಕ್ಕೆ ನೀರು ಸಿಗುವುದು ಕಷ್ಟವಾಗಲಿದೆ ಎಂದು ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಆತಂಕ ವ್ಯಕ್ತಪಡಿಸಿದರು.
ಈಗಲೇ ಭದ್ರಾ ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗದ ರೈತರು ನೀರು ಸಿಗದೇ ತೊಂದರೆ ಅನುಭವಿಸುತ್ತಿದ್ದಾರೆ. ಈಗ ಭದ್ರಾ ಜಲಾಶಯದ ಬುಡದಲ್ಲಿಯೇ ನಾಲೆಯನ್ನು ಸೀಳಿ ನೀರು ಒಯ್ದರೆ ಅವರ ಪಾಡು ಏನಾಗಲಿದೆ ಎಂದು ಪ್ರಶ್ನಿಸಿದರು.
ಬಾಯಾರಿಕೆಯಿಂದ ಬಳಲುತ್ತಿರುವ ಹಳ್ಳಿಗಳಿಗೆ ಭದ್ರಾ ಜಲಾಶಯದಿಂದ ಕುಡಿಯಲು ನೀರು ಕೊಡಲು ನಮ್ಮ ವಿರೋಧವಿಲ್ಲ. ಆದರೆ ಒಮ್ಮೆ ನಾಲೆಗೆ ಬಿಟ್ಟ ನೀರನ್ನು ನಡುವೆಯೇ ಬೇರೆ ಕಡೆ ವರ್ಗಾಯಿಸಿದರೆ ನೀರು ಮುಂದಕ್ಕೆ ಹೋಗುವುದಾದರೂ ಹೇಗೆ? ನಾಲೆಯನ್ನೇ ಸೀಳುವ ಅವೈಜ್ಞಾನಿಕ ಯೋಜನೆಯನ್ನು ಸರ್ಕಾರ ಕೈಬಿಟ್ಟು ಬದಲಿಗೆ ಜಲಾಶಯದಿಂದ ನೇರವಾಗಿ ಜಾಕ್‌ವೆಲ್ ಮೂಲಕ ನೀರು ಕೊಂಡೊಯ್ಯಲಿ ಎಂದು ಒತ್ತಾಯಿಸಿದರು.
ಜಲಸಂಪನ್ಮೂಲ ಸಚಿವರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಕ್ಷಣವೇ ಈ ಯೋಜನೆಯ ಸಾಧಕ ಬಾಧಕಗಳನ್ನು ಗಮನಿಸಿ, ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗದ ರೈತರ ನೆರವಿಗೆ ಬರಲಿ ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರಾದ ಯಶವಂತರಾವ್ ಘೋರ್ಪಡೆ, ಕೆ.ಎಸ್.ಪುಟ್ಟಪ್ಪ, ಸೀನಪ್ಪ ಹಾರೋಬೆನವಳ್ಳಿ, ಮಂಜುನಾಥೇಶ್ವರ, ಬಸವರಾಜ್ ಎಮ್ಮೆಹಟ್ಟಿ, ಕೃಷ್ಣಮೂರ್ತಿ ಅಗಸವಳ್ಳಿ, ಮಂಜುನಾಥ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.